ಗುರುವಾರ , ಜೂನ್ 30, 2022
24 °C
ಮಹಿಳೆಯರ ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದ ಹೀದರ್ ನೈಟ್ ಬಳಗ

ಮಹಿಳೆಯರ ವಿಶ್ವಕಪ್| ಇಂಗ್ಲೆಂಡ್‌ ತಂಡದಲ್ಲಿ ಚಿಗುರಿದ ಸೆಮಿಫೈನಲ್‌ ಆಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್ ಚರ್ಚ್‌: ಆರಂಭದ ಸೋಲಿನಿಂದ ಚೇತರಿಸಿಕೊಂಡು ಮುನ್ನುಗ್ಗುತ್ತಿರುವ ಇಂಗ್ಲೆಂಡ್ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ನತ್ತ ಹೆಜ್ಜೆ ಹಾಕಿದೆ. ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಮಣಿಸಿದ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.

ವೇಗದ ಬೌಲರ್ ಕ್ಯಾಥರಿನ್ ಬ್ರೂಂಟ್ ಅವರ ಅಮೋಘ ದಾಳಿಗೆ ನಲುಗಿ ಪಾಕಿಸ್ತಾನ ಮಹಿಳೆಯರು ರನ್ ಗಳಿಸಲು ಪರದಾಡಿದರು. ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಕೂಡ ಮೊನಚಾದ ದಾಳಿಯ ಮೂಲಕ ಎದುರಾಳಿ ತಂಡವನ್ನು ಕಾಡಿದರು. ಹೀಗಾಗಿ ಪಾಕಿಸ್ತಾನ ಕೇವಲ 105 ರನ್‌ಗಳಿಗೆ ಪತನ ಕಂಡಿತು. 

ಗುರಿ ಬೆನ್ನತ್ತಿದ ಇಂಗ್ಲೆಂಡ್ ಹೀದರ್ ನೈಟ್ ಬಳಗ 20ನೇ ಓವರ್‌ನಲ್ಲೇ ಗೆಲುವಿನ ದಡ ಸೇರಿತು. ಐದನೇ ಓವರ್‌ನಲ್ಲಿ 20 ರನ್‌ಗಳಿಗೆ ತಂಡ ಮೊದಲ ವಿಕೆಟ್ ಕಳೆದುಕೊಂಡಿತ್ತು. ನಂತರ ಡ್ಯಾನಿಯೆಲಿ ವ್ಯಾಟ್ (76; 68 ಎಸೆತ, 82 ನಿಮಿಷ, 11 ಬೌಂಡರಿ) ಮತ್ತು ಹೀದರ್ ನೈಟ್ 87 ರನ್‌ಗಳ ಜೊತೆಯಾಟವಾಡಿ ಸುಲಭ ಜಯ ತಂದುಕೊಟ್ಟರು.

ಅರಂಭದ ಮೂರು ಪಂದ್ಯಗಳನ್ನು ಸೋತಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ನೌಕೌಟ್ ಹಂತ ತಲುಪದೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿತ್ತು. ನಂತರ ಎರಡು ಪಂದ್ಯಗಳನ್ನು ಗೆದ್ದುಕೊಂಡು ಭರವಸೆಯಲ್ಲಿತ್ತು. ಆದರೂ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಜಯ ಅನಿವಾರ್ಯವಾಗಿತ್ತು. ಮುಂದಿನ ಪಂದ್ಯದಲ್ಲಿ ಅದು ಬಾಂಗ್ಲಾದೇಶವನ್ನು ಎದುರಿಸಲಿದೆ.

ಹಿಂದಿನ ಐದು ಏಕದಿನ ಪಂದ್ಯಗಳಲ್ಲಿ ಬ್ರೂಂಟ್ ಕೇವಲ ಒಂದು ವಿಕೆಟ್ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ನಿರ್ದಿಷ್ಟ ತಂತ್ರಗಳೊಂದಿಗೆ ಕಣಕ್ಕೆ ಇಳಿದಿದ್ದರು. ಎಕ್ಲೆಸ್ಟೋನ್ ಜೊತೆಗೂಡಿ ಅವರು ಪಾಕಿಸ್ತಾನದ ಬ್ಯಾಟರ್‌ಗಳನ್ನು ಕ್ರೀಸ್‌ನಲ್ಲಿ ತಳವೂರದಂತೆ ನೋಡಿಕೊಂಡರು. ಅಗ್ರ ಮತ್ತು ಮಧ್ಯಮ ಕ್ರಮಾಂಕಕ್ಕೆ ಬ್ರೂಂಟ್ ಪೆಟ್ಟು ನೀಡಿದರೆ ಕೆಳಕ್ರಮಾಂಕವನ್ನು ಬೇಗನೇ ವಾಪಸ್ ಕಳುಹಿಸಿದರು.  

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ನಹಿದಾ ಖಾನ್ ವಿಕೆಟ್ ಕಬಳಿಸಿ ಬ್ರೂಂಟ್ ಸಂಭ್ರಮಿಸಿದರು. ನಹಿದಾ ಅವರ ಬ್ಯಾಟಿನ ಹೊರ ಅಂಚನ್ನು ಮುತ್ತಿಕ್ಕಿದ ಚೆಂಡು ಮೊದಲ ಸ್ಲಿಪ್‌ನಲ್ಲಿದ್ದ ನೈಟ್ ಕೈ ಸೇರಿತ್ತು. ಎರಡು ರನ್ ಗಳಿಸುವ ಪ್ರಯತ್ನದಲ್ಲಿ ನಾಯಕಿ ಬಿಸ್ಮಾ ಮರೂಫ್‌ ರನೌಟ್ ಆಗಿ ಮರಳಿದರು. ಒಮೈಮಾ ಸೊಹೇಲ್ ಕೂಡ ರನೌಟ್ ಆದಾಗ ತಂಡದ ಮೊತ್ತ ಕೇವಲ 33 ಆಗಿತ್ತು. ನಂತರ ತಂಡ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಏಳನೇ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟರ್ ಸಿದ್ರಾ ನವಾಜ್ ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ನಾಲ್ಕರ ಘಟ್ಟಕ್ಕೆ ದಕ್ಷಿಣ ಆಫ್ರಿಕಾ

ವೆಲಿಂಗ್ಬನ್‌ನಲ್ಲಿ ಗುರುವಾರ ನಡೆಯಬೇಕಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿತು. 

ವೆಸ್ಟ್ ಇಂಡೀಸ್ ತಂಡದ ಲೀಗ್ ಹಂತದ ಎಲ್ಲ ಪಂದ್ಯಗಳು ಮುಗಿದಿದ್ದು ಸದ್ಯ ಪಾಯಿಂಟ್ ಪಟ್ಟಿಯ ಮೂರನೇ ಸ್ಥಾನದಲ್ಲಿದೆ. ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಇತರ ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಭಾನುವಾರ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ಮತ್ತು ಭಾರತಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಈ ಪಂದ್ಯಗಳಲ್ಲಿದೆ.

ಗುರುವಾರ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ದಕ್ಷಿಣ ಆಫ್ರಿಕಾ 10.5 ಓವರ್‌ಗಳಲ್ಲಿ 61ಕ್ಕೆ 4 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು