ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಸಾಯ್‌ ಕೇಂದ್ರಗಳಿಂದ ಕಬಡ್ಡಿ ‘ಔಟ್‌’?

ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ತೆರೆಮರೆಯಲ್ಲಿ ಕಸರತ್ತು, ದೇಶಿ ಕ್ರೀಡೆಗೆ ಕೋಚ್‌ಗಳೇ ಇಲ್ಲ!
Last Updated 27 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶಿ ಕ್ರೀಡೆ ಕಬಡ್ಡಿ ಜಗತ್ತಿನಾದ್ಯಂತ ಖ್ಯಾತಿ ಗಳಿಸುತ್ತಿದೆ. ಆದರೆ, ರಾಜ್ಯದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ತರಬೇತಿ ಕೇಂದ್ರಗಳಿಂದ ಈ ಕ್ರೀಡೆಯನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲು ತೆರೆಮರೆಯಲ್ಲಿ ಹುನ್ನಾರ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರದ ಮೂರು ತರಬೇತಿ ಕೇಂದ್ರಗಳು ಕರ್ನಾಟಕದಲ್ಲಿವೆ. ಮಡಿಕೇರಿಯಲ್ಲಿರುವ ಕೇಂದ್ರದಲ್ಲಿ ಮಹಿಳೆಯರಿಗೆ ಅಥ್ಲೆಟಿಕ್ಸ್‌ ಮತ್ತು ಹಾಕಿಗೆ ಮಾತ್ರ ತರಬೇತಿ ನೀಡಲಾಗುತ್ತಿದೆ.

ಇನ್ನುಳಿದ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಇಷ್ಟು ವರ್ಷ ಕಬಡ್ಡಿಗೆ ತರಬೇತಿ ನೀಡಲಾಗುತ್ತಿತ್ತು. ಈ ಎರಡೂ ಕೇಂದ್ರಗಳಲ್ಲಿ ಒಟ್ಟು 25 ಆಟಗಾರರು ಇದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಆಟಗಾರರನ್ನು ಗುರುತಿಸಿ ಪ್ರತಿ ವರ್ಷ ಜನವರಿ ವೇಳೆಗೆ ಆಯ್ಕೆ ನಡೆಸಲಾಗುತ್ತಿತ್ತು. ಆದರೆ, ಈ ವರ್ಷ ಎರಡೂ ಕೇಂದ್ರಗಳಲ್ಲಿ ಹೊಸ ಆಟಗಾರರನ್ನು ಆಯ್ಕೆ ಮಾಡಿಲ್ಲ. ಕಳೆದ ವರ್ಷ ಆಯ್ಕೆಯಾದ ಆಟಗಾರರಿಗೆ ಇದೊಂದು ವರ್ಷವಷ್ಟೇ ತರಬೇತಿ ನೀಡಿ ಮುಂದಿನ ವರ್ಷ ಅವರನ್ನೂ ಹೊರ ರಾಜ್ಯಕ್ಕೆ ಕಳುಹಿಸುವ ಚಿಂತನೆ ನಡೆದಿದೆ.

ಉತ್ತರ ಕರ್ನಾಟಕದ ಆಟಗಾರರು ಗುಣಮಟ್ಟದ ವೃತ್ತಿಪರ ತರಬೇತಿಗೆ ಧಾರವಾಡದ ಕೇಂದ್ರವನ್ನು, ಬೆಂಗಳೂರು ಸುತ್ತ–ಮುತ್ತಲಿನ ಆಟಗಾರರು ಅಲ್ಲಿನ ಕೇಂದ್ರವನ್ನು ನೆಚ್ಚಿಕೊಂಡಿದ್ದರು. ಸ್ಥಳಾಂತರವಾದರೆ ಮುಂದಿನ ವರ್ಷದಿಂದ ಈ ಅವಕಾಶ ಕೂಡ ತಪ್ಪಿ ಹೋಗುತ್ತದೆ.

ಕೋಚ್‌ಗಳೇ ಇಲ್ಲ:

ಈ ಎರಡೂ ಸಾಯ್‌ ಕೇಂದ್ರಗಳಲ್ಲಿ ಕಬಡ್ಡಿ ಕೋಚ್‌ಗಳೇ ಇಲ್ಲ. ಧಾರವಾಡದಲ್ಲಿದ್ದ ಒಬ್ಬರು ಹಾಗೂ ಬೆಂಗಳೂರು ಕೇಂದ್ರದಲ್ಲಿದ್ದ ಇಬ್ಬರು ಕೋಚ್‌ಗಳು ನಿವೃತ್ತರಾಗಿದ್ದಾರೆ. ಬೆಂಗಳೂರಿನಲ್ಲಿ ಎನ್‌ಎಎಸ್‌ ತರಬೇತಿ ಪಡೆಯುತ್ತಿರುವ ಸೌಂದರ್ಯರಾಜನ್‌ ಎಂಬುವರು ಬಿಡುವಿನ ಸಮಯದಲ್ಲಿ ಅಲ್ಲಿನ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಕೋಚ್‌ ಕೊರತೆ ಕೂಡ ಸ್ಥಳಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

‘ಧಾರವಾಡ ಕೇಂದ್ರದಲ್ಲಿ ತರಬೇತಿ ಪಡೆದ ಅನೇಕ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಭಾಗದ ಯುವ ಪ್ರತಿಭೆಗಳಿಗೆ ಇಲ್ಲಿನ ತರಬೇತಿ ಕೇಂದ್ರ ದೊಡ್ಡ ಆಸ್ತಿಯಾಗಿದೆ. ಗುತ್ತಿಗೆ ಆಧಾರದ ಮೇಲೆ ಕೋಚ್‌ಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದ್ದರೂ, ಅದನ್ನು ಮಾಡದೆ ಹೊರರಾಜ್ಯಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಇದರಿಂದ ಸ್ಥಳೀಯರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ’ ಎಂದು ಧಾರವಾಡದ ಸಾಯ್‌ ಕೇಂದ್ರದ ನಿವೃತ್ತ ಕಬಡ್ಡಿ ಕೋಚ್‌ ಈಶ್ವರ ಅಂಗಡಿ ದೂರಿದ್ದಾರೆ.

‘ಎನ್‌ಐಎಸ್‌ ತರಬೇತಿ ಪಡೆದ ಅನೇಕ ಕೋಚ್‌ಗಳು ರಾಜ್ಯದಲ್ಲಿದ್ದಾರೆ. ಅವರನ್ನಾದರೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ರಾಜ್ಯದಲ್ಲಿ ಕಬಡ್ಡಿ ಆಟ ಉಳಿಸಬೇಕು’ ಎಂದು ಧಾರವಾಡ ಜಿಲ್ಲಾ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ರಮೇಶ ತೋಟದ ಹಾಗೂ ರೆಫರಿ ಬೋರ್ಡ್‌ ಚೇರ್ಮನ್‌ ಎಂ.ಎನ್‌. ಮಲ್ಲಾಡ್ ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೂ ಮನವಿ ಕೊಟ್ಟಿದ್ದಾರೆ.

‘ಪೂರ್ಣಪ್ರಮಾಣದಲ್ಲಿ ಕೋಚ್‌ ಇಲ್ಲದ ಕಾರಣ ಎನ್‌ಎಎಸ್‌ ತರಬೇತಿ ಮುಗಿಸಿಕೊಂಡು ಬಂದು ಕಬಡ್ಡಿ ಹೇಳಿಕೊಡುತ್ತಿದ್ದೇನೆ. ನಿವೃತ್ತಿಯಾದ ಬಳಿಕ ಯಾರೂ ನೇಮಕವಾಗಿಲ್ಲ. ಈ ವರ್ಷ ಹೊಸ ಆಟಗಾರರು ಕೂಡ ಬಂದಿಲ್ಲ’ ಎಂದು ಸೌಂದರ್ಯರಾಜನ್‌ ತಿಳಿಸಿದರು.

***

ಕೆಲ ನಿರ್ದಿಷ್ಟ ಕ್ರೀಡೆಗಳಿಗಷ್ಟೇ ತರಬೇತಿ ನೀಡಲು ಹೊಸ ಯೋಜನೆ ರೂಪಿಸಲಾಗುತ್ತಿದೆ. ಕಬಡ್ಡಿ ಸ್ಥಳಾಂತರಿಸುವುದರ ಬಗ್ಗೆ ಇನ್ನು ಚರ್ಚೆ ನಡೆಯತ್ತಿದೆ.
–ವೆಂಕಟೇಶ್ವರ ರೆಡ್ಡಿ,ವಿಭಾಗೀಯ ನಿರ್ದೇಶಕ, ಸಾಯ್‌ ಕೇಂದ್ರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT