ಸೋಮವಾರ, ಡಿಸೆಂಬರ್ 16, 2019
17 °C
ಪ್ರಕ್ರಿಯೆ ಪೂರ್ಣಗೊಂಡು ವಾರ ಸಮೀಪಿಸಿದರೂ ಬಿಡುಗಡೆಯಾಗದ ನೇಮಕಾತಿ ಪತ್ರ

ಸ್ಯಾಕ್: ಕೋಚ್‌ ಹುದ್ದೆ ಅವಧಿ ಆರೇ ತಿಂಗಳು!

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಕ್ರೀಡಾ ಶಾಲೆಗಳು ಮತ್ತು ವಸತಿನಿಲಯಗಳಲ್ಲಿ ಖಾಲಿ ಇರುವ ಕೋಚ್‌ಗಳ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಆದರೆ ಒಂದು ವರ್ಷದ ‘ತಾತ್ಕಾಲಿಕ’ ಹುದ್ದೆಯ ಅವಧಿ ಈ ಬಾರಿ ಆರೇ ತಿಂಗಳಿಗೆ ಇಳಿದಿದೆ! ನೇಮಕಾತಿ ಪತ್ರ ಆಯ್ಕೆಯಾದವರ ಕೈಸೇರದೇ ಇರುವ ಕಾರಣ ಕ್ರೀಡಾಪಟು ಗಳಿಗೆ ತರಬೇತಿ ಇನ್ನೂ ತಡವಾಗುವ ಸಾಧ್ಯತೆ ಇದೆ.

ಕರ್ನಾಟಕ ಕ್ರೀಡಾ ಪ್ರಾಧಿಕಾರದ (ಸ್ಯಾಕ್) ಅಡಿ ಕಾರ್ಯನಿರ್ವಹಿಸುವ ಕ್ರೀಡಾಶಾಲೆ ಮತ್ತು ವಸತಿನಿಲಯಗಳ ಕೋಚ್‌ಗಳ ಹುದ್ದೆಗಳನ್ನು ಪ್ರತಿವರ್ಷ ನವೀಕರಿಸಲಾಗುತ್ತದೆ. ಅವಧಿ ಮುಗಿದ ನಂತರ ಒಂದು ದಿನ ಅಥವಾ ಒಂದು ವಾರದೊಳಗೆ ಹೊಸ ಆದೇಶ ಪತ್ರ ನೀಡುವುದು ರೂಢಿ. ಆದರೆ ಈ ವರ್ಷ ಈ ಪ್ರಕ್ರಿಯೆಗೆ ಆರು ತಿಂಗಳು ತೆಗೆದುಕೊ ಳ್ಳಲಾಗಿದೆ.

ಮಾರ್ಚ್ 18ರಂದು ಕಳೆದ ವರ್ಷದ ಅವಧಿ ಮುಗಿದಿತ್ತು. ಅಂದಿನಿಂದ ಹುದ್ದೆಗಳು ಖಾಲಿ ಇದ್ದ ಬಗ್ಗೆ ‘ಪ್ರಜಾವಾಣಿ’ ಜೂನ್ ತಿಂಗಳಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ನಂತರ 100 ಹುದ್ದೆಗಳನ್ನು ತುಂಬಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿತ್ತು. ಕೊನೆಗೆ 28 ಮಂದಿ ಜೂನಿಯರ್ ಕೋಚ್‌ಗಳು, 12 ಫಿಟ್‌ನೆಸ್ ಟ್ರೇನರ್ಸ್‌ ಮತ್ತು ಇಬ್ಬರು ತಾಂತ್ರಿಕ ಅಧಿಕಾರಿಗಳು ಸೇರಿದಂತೆ ಒಟ್ಟು 78 ಹುದ್ದೆಗಳನ್ನು ತುಂಬುವ ನಿರ್ಧಾರಕ್ಕೆ ಬರಲಾಗಿತ್ತು. ಸೆಪ್ಟೆಂಬರ್ 16 ಮತ್ತು 17ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆಯ್ಕೆ ಪಟ್ಟಿಗೆ ಕಳೆದ ವಾರ ಕ್ರೀಡಾ ಸಚಿವರು ಸಹಿ ಮಾಡಿದ್ದರು.

ತೆರೆಮರೆಯ ತಂತ್ರದ ಆತಂಕ: ‌ಮಾರ್ಚ್‌ ತಿಂಗಳಿಂದ ಹುದ್ದೆಗಳು ಖಾಲಿ ಇದ್ದರೂ ಆಯ್ಕೆಗೆ ಆದೇಶ ಹೊರಡಿಸಿದ್ದು ಆಗಸ್ಟ್‌ ಕೊನೆಯ ವಾರದಲ್ಲಿ.

ನಂತರ ಆಯ್ಕೆ ಪ್ರಕ್ರಿಯೆಗೂ ಅನೇಕ ಆತಂಕಗಳು ಎದುರಾಗಿದ್ದವು. ಈ ಪ್ರಕ್ರಿಯೆ ನಡೆದ ನಂತರ ಆಯ್ಕೆ ಪಟ್ಟಿಯನ್ನೇ ರದ್ದು ಮಾಡಲು ತೆರೆ ಮರೆಯಲ್ಲಿ ತಂತ್ರಗಳನ್ನು ಹೆಣೆ ಯಲಾಗಿತ್ತು ಎಂದು ಮೂಲಗಳು ಹೇಳಿವೆ. ಆದೇಶ ಪತ್ರ ಕೈ ಸೇರದೇ ಇರುವುದರ ಹಿಂದೆಯೂ ಕಾಣದ ಕೈಗಳು ಕೆಲಸ ಮಾಡಿರಬಹುದು ಎಂಬುದು ಈಗ ಕೋಚ್‌ಗಳ ಆತಂಕ.

‘ಕೋಚ್‌ಗಳ ನೇಮಕ ಮಾಡಲು ಇಲಾಖೆ ಅಧಿಕಾರಿಗಳಿಗೆ ಉತ್ಸಾಹವೇ ಇಲ್ಲ. ಸಚಿವರು ಪಟ್ಟಿಗೆ ಸಹಿ ಮಾಡಿದ್ದರೂ ಆದೇಶ ಪತ್ರ ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಉತ್ತರ ಕರ್ನಾಟಕ ಭಾಗದ ಕೋಚ್ ಒಬ್ಬರು ದೂರಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಕ್ರೀಡಾ ಇಲಾಖೆ ಜಂಟಿ ಆಯುಕ್ತ ರಮೇಶ್ ‘ಆದೇಶ ಪತ್ರವನ್ನು ಸದ್ಯದಲ್ಲೇ ನೀಡ ಲಾಗುವುದು’ ಎಂದಷ್ಟೇ ಹೇಳಿದರು.

ಆರು ತಿಂಗಳ ನಂತರ ಶಾಶ್ವತ ಕೋಚ್‌ಗಳು?: ಈಗ ಪಟ್ಟಿಯಲ್ಲಿರುವ ಕೋಚ್‌ಗಳ ಅವಧಿ ಆರೇ ತಿಂಗಳು. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆ ಸಂದರ್ಭದಲ್ಲಿ ಶಾಶ್ವತ ಹುದ್ದೆಗಳನ್ನು ಸೃಷ್ಟಿಸಲು ಪ್ರಯತ್ನಿ ಸಲಾಗುವುದು ಎಂದು ಸ್ಯಾಕ್ ಅಧ್ಯಕ್ಷ ಕೆ.ಪಿ.ಪುರುಷೋತ್ತಮ ತಿಳಿಸಿದರು.

ಕಡಿಮೆ ಪಾಯಿಂಟ್ ಗಳಿಸಿದ್ದು ಮಹಿಳೆಯರು!

ಅಭ್ಯರ್ಥಿಗಳ ಪೈಕಿ ಕೊಡಗಿನ ಕೆ.ಎನ್ ಸುಬ್ಬಯ್ಯ ಗರಿಷ್ಟ 70 ಪಾಯಿಂಟ್ ಗಳಿಸಿದ್ದಾರೆ. ನಾಲ್ವರು ಕನಿಷ್ಟ 40 ಪಾಯಿಂಟ್ ಗಳಿಸಿದ್ದಾರೆ. ಈ ನಾಲ್ವರು ಕೂಡ ಮಹಿಳೆಯರು! ಒಟ್ಟು 11 ಮಂದಿ ಮಹಿಳಾ ಕೋಚ್‌ಗಳು ಆಯ್ಕೆಯಾಗಿದ್ದು ಈ ಪೈಕಿ ಕೊಡಗಿನ ಅಂಕಿತಾ ಬಿ.ಎಸ್‌. ಗರಿಷ್ಠ 62 ಪಾಯಿಂಟ್ ಕಲೆ ಹಾಕಿದ್ದಾರೆ.

6 ಮಂದಿ ಜೂನಿಯರ್ ಕೋಚ್‌ಗಳು ಸೇರಿದಂತೆ 17 ಮಂದಿ ಅಥ್ಲೆಟಿಕ್ಸ್‌ಗೆ, 8 ಮಂದಿ ವಾಲಿಬಾಲ್‌ಗೆ, ಆರು ಮಂದಿ ಕುಸ್ತಿಗೆ, ತಲಾ ಐವರು ಸೈಕ್ಲಿಂಗ್, ಹಾಕಿ ಮತ್ತು ಬ್ಯಾಸ್ಕೆಟ್ ಬಾಲ್‌ಗೆ, ಮೂವರು ಫೆನ್ಸಿಂಗ್ಸ್‌ಗೆ, ತಲಾ ಇಬ್ಬರು ಬ್ಯಾಡ್ಮಿಂಟನ್, ಫುಟ್‌ಬಾಲ್, ಫೆನ್ಸಿಂಗ್, ಬಾಕ್ಸಿಂಗ್, ಆರ್ಚರಿ, ಜೂಡೊಗೆ, ತಲಾ ಒಬ್ಬರು ಜಿಮ್ನಾಸ್ಟಿಕ್ಸ್, ವೇಟ್ ಲಿಫ್ಟಿಂಗ್ ಮತ್ತು ರೋಯಿಂಗ್‌ಗೆ ನೇಮಕವಾಗಲಿದ್ದಾರೆ.

ಪಟ್ಟಿಯಲ್ಲಿ 12 ಮಂದಿ ಫಿಟ್‌ನೆಸ್ ಟ್ರೇನರ್, ಒಬ್ಬರು ಫಿಜಿಯೊಥೆರಪಿಸ್ಟ್, ಒಬ್ಬರು ಸ್ಪೋರ್ಟ್ಸ್ ನ್ಯೂಟ್ರಿಷಿಯನಿಸ್ಟ್ ಇದ್ದಾರೆ.

ಪ್ರತಿಕ್ರಿಯಿಸಿ (+)