ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳು ನಿರಾಳ; ಉಳಿದ ಕುತೂಹಲ

ದಣಿವಾರಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು, ಕಾರ್ಯಕರ್ತರು
Last Updated 14 ಮೇ 2018, 10:17 IST
ಅಕ್ಷರ ಗಾತ್ರ

ಕೊಪ್ಪಳ: ಮತದಾನ ಮುಗಿದ ಮರುದಿನ ಅಭ್ಯರ್ಥಿಗಳು ನಿರಾಳವಾಗಿದ್ದಾರೆ. ಐದೂ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ನಿರಾಳತೆ ಜತೆ ಆತಂಕ, ಕುತೂಹಲವೂ ಮನೆ ಮಾಡಿದೆ.

ಕೊಪ್ಪಳ ಕಾಂಗ್ರೆಸ್‌ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಅವರು ಭಾನುವಾರ ಬಹುತೇಕ ಗೆಲುವಿನ ಭರವಸೆಯ ಮೂಡ್‌ನಲ್ಲಿ ಇದ್ದರು. ಹುಲಿಗಿಯ ತಮ್ಮ ನಿವಾಸದಲ್ಲಿ ಕೆಲಕಾಲ ಕಳೆದ ಹಿಟ್ನಾಳ್‌ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಹುಬ್ಬಳ್ಳಿಗೆ ತೆರಳಿದರು.

ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಅವರು ಎಂದಿನಂತೆ ದೂರವಾಣಿ ಕರೆ ಸ್ವೀಕರಿಸಲಿಲ್ಲ. ಅವರ ಆಪ್ತರು ಹೇಳಿದ ಪ್ರಕಾರ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದರು. ಜೆಡಿಎಸ್‌ ಅಭ್ಯರ್ಥಿ ಕೆ.ಎಂ.ಸೈಯದ್‌ ಅವರೂ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ಉಳಿದ ಕ್ಷೇತ್ರಗಳ ಅಭ್ಯರ್ಥಿ ಗಳು ಪ್ರಚಾರ ಸಭೆಗಳ ದಣಿವಾರಿಸಿ ಕೊಳ್ಳುತ್ತಿದ್ದಾರೆ. ಕೆಲವರು ದೇವಸ್ಥಾನ ಗಳಿಗೆ, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಮತಯಂತ್ರಗಳು ಒಂದು ದಿನದ ಮಟ್ಟಿಗೆ ಕುತೂಹಲ ಉಳಿಸಿ ಕೊಂಡಿವೆ.

ಮತದಾನ ಪ್ರಮಾಣ ಏರಿಕೆ: ಜಿಲ್ಲೆ ಯಲ್ಲಿ ದಾಖಲೆಯ 76.07ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಸುಮಾರು ಶೇ 3ರಷ್ಟು ಏರಿಕೆ ದಾಖಲಾಗಿದೆ. ಮತದಾರರನ್ನು ಜಾಗೃತಗೊಳಿಸಿ, ಮತದಾನಕ್ಕೆ ಅವರನ್ನು ಪ್ರೇರೇಪಿಸು ವಂತೆ ಮಾಡಲು ಚುನಾವಣಾ ಆಯೋಗ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮವನ್ನು ರೂಪಿಸಿ, ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು, 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟು, ತಪ್ಪದೆ ಮತದಾನ ಮಾಡಲು ಮುಂದಾಗಬೇಕು. ಸ್ವೀಪ್ ಕಾರ್ಯಕ್ರಮದ ಯಶಸ್ವಿಯಲ್ಲಿ ಹಲವಾರು ಇಲಾಖೆಗಳು ಸಹಕಾರ ನೀಡಿವೆ. ಬರುವ ಚುನಾವಣೆಗಳಲ್ಲಿ ಮತದಾರರು ಇನ್ನಷ್ಟು ಸಕ್ರಿಯರಾಗಿ ಮತದಾನದಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸವಿದೆ' ಎಂದರು.

ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು: ಮತ ಎಣಿಕೆ ಮೇ 15ರಂದು ಬೆಳಿಗ್ಗೆ 7ರಿಂದ ನಗರದ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ತಲಾ 17 ಮತ ಎಣಿಕಾ ಮೇಲ್ವಿಚಾರಕರು, ಸಹಾಯಕರು, 17 ಸ್ಟ್ಯಾಟಿಕ್ ಅಬ್ಸರ್ವರ್ಸ್‌ಗಳನ್ನು ನಿಯೋಜಿಸಲಾಗಿದೆ. ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಎರಡನೆ ಹಂತದ ಮತ ಎಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.

ಪ್ರತಿ ಕ್ಷೇತ್ರಗಳಿಗೆ ಸುಮಾರು 17ರಿಂದ 20 ಸುತ್ತುಗಳಲ್ಲಿ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಚುನಾವಣಾ ವಿಭಾಗ ತಿಳಿಸಿದೆ.

**
ಜಿಲ್ಲೆಯಲ್ಲಿ ಶೇ 80ಕ್ಕಿಂತ ಹೆಚ್ಚು ಮತದಾನ ದಾಖಲಾಗುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದಾಗ್ಯೂ ಶೇ 76. 07 ರಷ್ಟು ಉತ್ತಮ ಮತದಾನ ದಾಖಲಾಗಿದೆ
- ವೆಂಕಟರಾಜಾ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT