ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಶೂಟಿಂಗ್‌: ಸಮ್ರಾಗೆ ಕಂಚು

Last Updated 26 ಮಾರ್ಚ್ 2023, 11:22 IST
ಅಕ್ಷರ ಗಾತ್ರ

ಭೋಪಾಲ್‌ (ಪಿಟಿಐ): ಭಾರತದ ಯುವ ಶೂಟರ್‌ ಸಿಫ್ತ್‌ ಕೌರ್‌ ಸಮ್ರಾ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಭಾನುವಾರ ನಡೆದ ಮಹಿಳೆಯರ 50 ಮೀ. ರೈಫಲ್ 3ಪಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಅಂತರರಾಷ್ಟ್ರೀಯ ಕೂಟದ ಸೀನಿಯರ್‌ ವಿಭಾಗದಲ್ಲಿ ಸಮ್ರಾಗೆ ದೊರೆತ ಎರಡನೇ ಪದಕ ಇದು. ಕಳೆದ ವರ್ಷ ಚೀನಾದ ಚಾಂಗ್ವಾನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅವರು ಕಂಚು ಜಯಿಸಿದ್ದರು.

ಚೀನಾದ ಜಾಂಗ್‌ ಕ್ವಿಯಾಂಗ್‌ಯು ಚಿನ್ನ ಗೆದ್ದುಕೊಂಡರೆ, ಜೆಕ್‌ ಗಣರಾಜ್ಯದ ಅನೆಟಾ ಬ್ರಾಬ್ಕೊವಾ ಬೆಳ್ಳಿ ತಮ್ಮದಾಗಿಸಿಕೊಂಡರು.

ಸಮ್ರಾ ಅವರು ರ‍್ಯಾಂಕಿಂಗ್‌ ಸುತ್ತಿನಲ್ಲಿ 403.9 ಪಾಯಿಂಟ್ಸ್‌ ಗಳಿಸಿ ಮೂರನೆಯವರಾದರು. ಮೊದಲ ಎರಡು ಸ್ಥಾನಗಳನ್ನು ಪಡೆದ ಜಾಂಗ್‌ (414.7) ಮತ್ತು ಅನೆಟಾ (411.3) ಅವರು ಫೈನಲ್‌ ಪ್ರವೇಶಿಸಿದರು.

ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಜಾಂಗ್‌ 16–8 ರಲ್ಲಿ ಜೆಕ್‌ ಗಣರಾಜ್ಯದ ಶೂಟರ್‌ ವಿರುದ್ಧ ಗೆದ್ದರು.

ಸಮ್ರಾ ಅವರು ಅರ್ಹತಾ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡಿ 588 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಅಂಜುಮ್‌ ಮೌದ್ಗಿಲ್‌ ಅವರು ಈ ಸ್ಪರ್ಧೆಯಲ್ಲಿ ನಿರಾಶೆ ಅನುಭವಿಸಿದರು. ಅರ್ಹತಾ ಸುತ್ತಿನಲ್ಲಿ 583 ಪಾಯಿಂಟ್ಸ್‌ಗಳೊಂದಿಗೆ 17ನೇ ಸ್ಥಾನ ಪಡೆದರು. ಕಣದಲ್ಲಿದ್ದ ಭಾರತದ ಮೂರನೇ ಶೂಟರ್‌ ಮಾನಿನಿ ಕೌಶಿಕ್‌ ಅವರೂ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು.

ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಐದು ಕಂಚು ಗೆದ್ದುಕೊಂಡಿರುವ ಭಾರತ ತಂಡ, ಪದಕ ಪಟ್ಟಿಯಲ್ಲಿ ಚೀನಾ ಬಳಿಕ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT