ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಗೆದ್ದ ಚಿಗುರು ಮೀಸೆಯ ಹುಡುಗ

ಶೂಟಿಂಗ್‌: ವಿಶ್ವ ದಾಖಲೆ ನಿರ್ಮಿಸಿದ ಸೌರಭ್‌: ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆದ ಭಾರತದ ಶೂಟರ್‌
Last Updated 24 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ದಿಗ್ಗಜರ ಎದುರು ದಿಟ್ಟ ಸಾಮರ್ಥ್ಯ ತೋರಿದ ಚಿಗುರು ಮೀಸೆಯ ಹುಡುಗ ಸೌರಭ್‌ ಚೌಧರಿ, ಭಾನುವಾರ ಡಾ.ಕರ್ಣಿಸಿಂಗ್‌ ಶೂಟಿಂಗ್ ರೇಂಜ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟು ಹೊಸ ಮೈಲುಗಲ್ಲು ಸ್ಥಾಪಿಸಿದರು.

ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ 16 ವರ್ಷ ವಯಸ್ಸಿನ ಸೌರಭ್‌, ವಿಶ್ವ ದಾಖಲೆ ನಿರ್ಮಿಸಿದರು. ಜೊತೆಗೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿಯನ್ನೂ ಪಡೆದರು.

ವಿಶ್ವಕಪ್‌ನಲ್ಲಿ ಮೊದಲ ಸಲ ಸೀನಿಯರ್‌ ವಿಭಾಗದಲ್ಲಿ ಪಾಲ್ಗೊಂಡಿದ್ದ ಸೌರಭ್‌, ಒಟ್ಟು 245 ಸ್ಕೋರ್‌ ಕಲೆಹಾಕಿ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.

ಫೈನಲ್‌ ಹಾಲ್‌ನಲ್ಲಿ ಕಿಕ್ಕಿರಿದು ಸೇರಿದ್ದ ತವರಿನ ಅಭಿಮಾನಿಗಳ ಎದುರು ಸೌರಭ್‌, ಅಪೂರ್ವ ಸಾಮರ್ಥ್ಯ ತೋರಿದರು. ಮೊದಲ ಸರಣಿಯ ಐದು ಶಾಟ್‌ಗಳಲ್ಲಿ ನಿಖರ ಗುರಿ ಹಿಡಿದು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡ ಉತ್ತರ ಪ್ರದೇಶದ ಮೀರತ್‌ನ ಶೂಟರ್‌, ಎರಡನೇ ಸರಣಿಯ ಐದು ಶಾಟ್‌ಗಳಲ್ಲೂ ಮೋಡಿ ಮಾಡಿದರು. ಈ ಮೂಲಕ ಬೆಳ್ಳಿ ಪದಕ ಗೆದ್ದ ಸರ್ಬಿಯಾದ ದಮೀರ್‌ ಮಿಕೆಚ್‌ ಅವರಿಗಿಂತ 2.6 ಪಾಯಿಂಟ್ಸ್‌ ಮುನ್ನಡೆ ತಮ್ಮದಾಗಿಸಿಕೊಂಡರು.

ಮೊದಲ ಎರಡು ಸರಣಿಗಳ ಸ್ಪರ್ಧೆ ಮುಗಿದಾಗಲೇ ಭಾರತದ ಶೂಟರ್‌ಗೆ ಚಿನ್ನದ ಪದಕ ಖಾತ್ರಿಯಾಗಿತ್ತು. ಹೀಗಿದ್ದರೂ ಅವರು ಸಂಭ್ರಮಿಸುವ ಗೋಜಿಗೆ ಹೋಗಲಿಲ್ಲ. ಎರಡನೇ ಹಂತದ 14 ಅವಕಾಶಗಳಲ್ಲೂ ಭಾರತದ ಶೂಟರ್‌ ಪ್ರಾಬಲ್ಯ ಮೆರೆದರು. 10.4, 10.5. 10.6 ಮತ್ತು 10.7 ಹೀಗೆ ಪಾಯಿಂಟ್ಸ್‌ ಕಲೆಹಾಕುತ್ತಲೇ ಸಾಗಿದ ಅವರು ಖುಷಿಯ ಕಡಲಲ್ಲಿ ತೇಲಿದರು. ಸೌರಭ್‌, ಒಟ್ಟು 19 ಬಾರಿ 10ಕ್ಕಿಂತಲೂ ಹೆಚ್ಚು ಸ್ಕೋರ್‌ ಕಲೆಹಾಕಿದರು.

ಸರ್ಬಿಯಾದ ದಮಿರ್‌ 239.3 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು. ಈ ವಿಭಾಗದ ಕಂಚಿನ ಪದಕ ಚೀನಾದ ವೀ ಪಾಂಗ್‌ ಅವರ ಪಾಲಾಯಿತು. ಅವರು 215.2 ಸ್ಕೋರ್‌ ಗಳಿಸಿದರು. ಪಾಂಗ್‌, 2008ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಫೈನಲ್‌ನಲ್ಲಿ ಒಟ್ಟು ಎಂಟು ಮಂದಿ ಶೂಟರ್‌ಗಳು ಪಾಲ್ಗೊಂಡಿದ್ದರು.

ಅರ್ಹತಾ ಹಂತದಲ್ಲಿ ಮೂರನೇ ಸ್ಥಾನ: ಸೌರಭ್‌, ಅರ್ಹತಾ ಹಂತದಲ್ಲಿ ಮೂರನೇ ಸ್ಥಾನ ಗಳಿಸಿ ಫೈನಲ್‌ ಪ್ರವೇಶಿಸಿದ್ದರು. ಅವರು ಒಟ್ಟು 587 ಸ್ಕೋರ್‌ ಗಳಿಸಿದ್ದರು.

ದಕ್ಷಿಣ ಕೊರಿಯಾದ ಲೀ ಡಯೆಮ್‌ಯುಂಗ್‌ (588) ಮತ್ತು ವೀ ಪಾಂಗ್‌ (587) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿದ್ದರು.

ಇದೇ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಅಭಿಷೇಕ್‌ ವರ್ಮಾ ಮತ್ತು ರವಿಂದರ್‌ ಸಿಂಗ್‌, ಅರ್ಹತಾ ಹಂತದಲ್ಲೇ ಹೊರಬಿದ್ದರು. ಅವರು ತಲಾ 576 ಸ್ಕೋರ್‌ ಗಳಿಸಲಷ್ಟೇ ಶಕ್ತರಾದರು.

ಮೋಡಿ ಮಾಡದ ಸಂಜೀವ್: ಪುರುಷರ 50 ಮೀಟರ್ಸ್‌ ರೈಫಲ್‌–3 ಪೊಸಿಷನ್‌ನಲ್ಲಿ ಭಾರತದ ಭರವಸೆಯಾಗಿದ್ದ ಸಂಜೀವ್‌ ರಜಪೂತ್‌ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು.

ಅರ್ಹತಾ ಸುತ್ತಿನಲ್ಲಿ 1,169 ಸ್ಕೋರ್‌ ಗಳಿಸಿದ ಸಂಜೀವ್‌, 25ನೇ ಸ್ಥಾನ ಪಡೆದರು. ಪಾರುಲ್‌ ಕುಮಾರ್‌ 22ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅವರು 1,170 ಸ್ಕೋರ್‌ ಕಲೆಹಾಕಿದರು.ಹಂಗರಿಯ ಇಸ್ತವಾನ್‌ ಪೆನಿ ಈ ವಿಭಾಗದ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಚಿನ್ನ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಶನಿವಾರ ನಡೆದಿದ್ದ ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಅ‍ಪೂರ್ವಿ ಚಾಂಡೇಲಾ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು.

ಎರಡು ದಾಖಲೆಗಳ ಒಡೆಯ

ವೀರ್‌ ಸಹಾಮಲ್‌ ರೈಫಲ್‌ ಕ್ಲಬ್‌ನಲ್ಲಿ ಹಿರಿಯ ಶೂಟರ್‌ ಅಮಿತ್‌ ಶೆರಾನ್ ಅವರ ಬಳಿ ತರಬೇತಿ ಪಡೆಯುತ್ತಿರುವ ಸೌರಭ್‌, ವಿಶ್ವಕಪ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ನಲ್ಲಿ ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ ಹಿರಿಮೆ ಹೊಂದಿದ್ದಾರೆ.

2018ರಲ್ಲಿ ಜರ್ಮನಿಯ ಸುಹ್ಲ್‌ನಲ್ಲಿ ನಡೆದಿದ್ದ ಜೂನಿಯರ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಅವರು ವಿಶ್ವ ದಾಖಲೆಗೂ ಭಾಜನರಾಗಿದ್ದಾರೆ.

ಒಲಿಂ‍‍ಪಿಕ್ಸ್‌ ಅರ್ಹತೆಯ ಗುರಿ ಇಟ್ಟುಕೊಂಡಿರಲಿಲ್ಲ: ಸೌರಭ್‌

‘ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಗುರಿ ಖಂಡಿತ ಇರಲಿಲ್ಲ. ವಿಶ್ವ ದಾಖಲೆ ನಿರ್ಮಿಸುತ್ತೇನೆ ಎಂದೂ ಭಾವಿಸಿರಲಿಲ್ಲ. ಉತ್ತಮ ಸಾಮರ್ಥ್ಯ ತೋರಬೇಕೆಂಬುದಷ್ಟೇ ನನ್ನ ಉದ್ದೇಶವಾಗಿತ್ತು. ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದು ಅತೀವ ಖುಷಿ ನೀಡಿದೆ. ಜೊತೆಗೆ ಹೆಮ್ಮೆಯಿಂದ ಬೀಗುವಂತೆಯೂ ಮಾಡಿದೆ’ ಎಂದು ಸೌರಭ್‌ ಸಂತಸ ವ್ಯಕ್ತಪಡಿಸಿದರು.

‘ಮೊದಲ ಎರಡು ಸರಣಿಗಳ ಸ್ಪರ್ಧೆ ಮುಗಿದಾಗಲೇ ಚಿನ್ನದ ಪದಕ ಖಚಿತವಾಗಿತ್ತು. ಹೀಗಿದ್ದರೂ ಸಂಭ್ರಮಿಸುವ ಗೋಜಿಗೆ ಹೋಗಲಿಲ್ಲ. ಏಕಾಗ್ರತೆ ಕಾಪಾಡಿಕೊಂಡು ಮೂರನೇ ಹಂತದಲ್ಲೂ ಪರಿಣಾಮ ಕಾರಿ ಸಾಮರ್ಥ್ಯ ತೋರಬೇಕೆಂಬುದು ನನ್ನ ಯೋಜನೆಯಾಗಿತ್ತು. ಕೊನೆಯವರೆಗೂ ಅದಕ್ಕೆ ಬದ್ಧನಾಗಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT