ಭಾನುವಾರ, ಸೆಪ್ಟೆಂಬರ್ 15, 2019
27 °C
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌

ಪಿ.ವಿ.ಸಿಂಧು ವಿಶ್ವ ಚಾಂಪಿಯನ್‌; ಭಾರತದ ಮುಕುಟಕ್ಕೆ ಚಿನ್ನದ ಲೇಪನ 

Published:
Updated:

ಬಾಸಿಲ್: ಈ ಬಾರಿ ಪುಸರ್ಲಾ ವೆಂಕಟ ಸಿಂಧು ತಮ್ಮ ಪದಕದ ಬಣ್ಣ ಬದಲಾಯಿಸಿದರು. ಅದಕ್ಕೆ ಚಿನ್ನದ ಹೊಳಪು ತುಂಬಿದರು.

2014ರಿಂದಲೂ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಅವರ ಕನಸು ಭಾನುವಾರ ಕೈಗೂಡಿತು. ಚಿನ್ನದ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದಾಯಿತು.

38 ನಿಮಿಷಗಳ ಫೈನಲ್ ಹೋರಾಟದಲ್ಲಿ ಅವರದ್ದು ಅಧಿಕಾರಯುತ ಗೆಲುವು. ಹೈದರಾಬಾದಿನ ಸಿಂಧು 21–7, 21–7ರ ಎರಡು ನೇರ ಗೇಮ್‌ಗಳಲ್ಲಿ ಜಪಾನಿನ ನೊಜೊಮಿ ಒಕುಹರಾ ವಿರುದ್ಧ ಜಯಶಾಲಿಯಾದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದು ಸಿಂಧು ಅವರ ಐದನೇ ಪದಕ. 2013, 2014ರಲ್ಲಿ ಸತತ ಎರಡು ಕಂಚು, 2017 ಮತ್ತು 2018ರಲ್ಲಿ ಸತತ ಎರಡು ಬಾರಿ ಬೆಳ್ಳಿ ಪದಕ ಗೆದ್ದಿದ್ದರು. ಹೋದ ವರ್ಷ ಚೀನಾದ ನಾನ್ಜಿಂಗ್‌ನಲ್ಲಿ ನಡೆದಿದ್ದ  ಟೂರ್ನಿಯಲ್ಲಿ ಆಡಲು ಹೋಗುವ ಮುನ್ನ ಅವರು, ‘ಹೋದ ಸಲ ಬೆಳ್ಳಿ ಗೆದ್ದಿದ್ದೆ. ಈ ಸಲ ಆ ಪದಕದ ಬಣ್ಣ ಬದಲಿಸುತ್ತೇನೆ’ ಎಂದು ಚಿನ್ನ ಗೆಲ್ಲುವ ವಿಶ್ವಾಸವ್ಯಕ್ತಪಡಿಸಿದ್ದರು. ಆದರೆ ಹೋದ ಸಲವೂ ಅವರು ಬೆಳ್ಳಿ ಪದಕ ಗಳಿಸಿದ್ದರು.

ಆದರೆ ಈ ಸಲ ಅವರು ಯಾವುದೇ ಅವಕಾಶವನ್ನೂ ಜಪಾನ್ ಆಟಗಾರ್ತಿಗೆ ಬಿಟ್ಟುಕೊಡಲಿಲ್ಲ. ವೇಗ ಮತ್ತು ಆಕ್ರಮಣಶೀಲ ಆಟಕ್ಕೆ ಒತ್ತು ನೀಡಿದ ಅವರಿಗೆ ಜಯ ಒಲಿಯಿತು. ಕೇವಲ 16 ನಿಮಿಷಗಳಲ್ಲಿ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದ ಸಿಂಧು ಭರ್ತಿ ಆತ್ಮವಿಶ್ವಾಸದಿಂದ ಬೀಗಿದರು.

ಸಿಂಧು ಪಾದರಸದಷ್ಟೇ ಚುರುಕಾದ ಪಾದಚಲನೆ, ಸ್ಮ್ಯಾಷ್‌ ಮತ್ತು ಕರಾರುವಾಕ್ ರ‍್ಯಾಲಿಗಳಿಗೆ ಉತ್ತರ ಕೊಡುವಲ್ಲಿ ಒಕುಹರಾ ಎಡವಿದರು. ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಸಿಂಧು ಅವರ ಆಟವು ಒಕುಹರಾ ಅವರಿಗೆ ಬಹುಶಃ ಅನಿರೀಕ್ಷಿತವಾಗಿತ್ತು.

ಎರಡನೇ ಗೇಮ್‌ನಲ್ಲಿ ತಿರುಗಿ ಬೀಳುವ ಒಕುಹರಾ ಪ್ರಯತ್ನ ಸಫಲವಾಗಲಿಲ್ಲ. ಅದರಲ್ಲಿಯೂ ಸಿಂಧು ಪಾರಮ್ಯ ಮರೆದರು. ಅರ್ಧವಿರಾಮದ ಸಂದರ್ಭದಲ್ಲಿ ಸಿಂಧು 11–2ರಿಂದ ಮುಂದಿದ್ದರು. ಅದೇ ಲಯವನ್ನು ಮುಂದುವರಿಸಿದ ಅವರು ಒಕುಹರಾ ಅವರನ್ನು ಎಲ್ಲ ಕಾರ್ನರ್‌ಗಳಲ್ಲಿಯೂ ಬ್ಲಾಕ್ ಮಾಡಿದರು.

2017ರಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಒಕುಹರಾ ಅವರು ಸಿಂಧು ಅವರನ್ನು ಸೋಲಿಸಿದ್ದರು. ಇದೀಗ ‘ಮುತ್ತಿನ ನಗರಿ’ಯ ಹುಡುಗಿ ಮುಯ್ಯಿ ತೀರಿಸಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯ ಸೆಮಿಫೈನಲ್‌ನಲ್ಲಿ ಸಿಂಧು ಅವರು ಆಲ್‌ ಇಂಗ್ಲೆಂಡ್ ಚಾಂಪಿಯನ್ ಯು ಫೆ ವಿರುದ್ಧ ಗೆದ್ದಿದ್ದರು.

ಸಿಂಧು ಅವರು ಈ ಸಾಧನೆಯಿಂದಾಗಿ ಮುಂದಿನ ವರ್ಷ ಟೊಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಲಗ್ಗೆಯಿಡುವ ಭರವಸೆ ಮೂಡಿಸಿದ್ದಾರೆ. 2016ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ಗಳಿಸಿದ್ದರು.

ಅಮ್ಮನ ಜನ್ಮದಿನಕ್ಕೆ ಮಗಳ ಕಾಣಿಕೆ
‘ಇವತ್ತು ನನ್ನ ಅಮ್ಮನ ಜನ್ಮದಿನ. ಅವರ ಪ್ರೋತ್ಸಾಹವೇ ನನ್ನ ಜೀವನದ ಸಾಧನೆಗೆ ಕಾರಣ. ಈ ಪದಕ ಅವರಿಗೆ ಅರ್ಪಿಸುತ್ತೇನೆ’ ಎಂದು ವಿಶ್ವವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹೇಳಿದ್ದಾರೆ.

ಫೈನಲ್‌ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಸಂತಸ ಹಂಚಿಕೊಂಡ ಸಿಂಧು, ‘ನನ್ನನ್ನು ಆಟಗಾರ್ತಿಯನ್ನಾಗಿ ರೂಪಿಸುವಲ್ಲಿ ತಂದೆ ಮತ್ತು ತಾಯಿಯ ಶ್ರಮ ದೊಡ್ಡದು. ಇವತ್ತು ನನ್ನಮ್ಮನಿಗಾಗಿ ಈ ಸಾಧನೆಯ ಅರ್ಪಣೆ’ ಎಂದರು.

‘ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ ನನ್ನ ಕೃತಜ್ಞತೆಗಳು. ಅವರ ಪ್ರೋತ್ಸಾಹ, ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದರು.


ಸಿಂಧು ಎದುರು ಪರಾಭವಗೊಂಡ ಜಪಾನ್‌ನ ಆಟಗಾರ್ತಿ ನೊಜೊಮಿ ಒಕುಹರಾ ನಿರಾಶೆಯಿಂದ ಕುಸಿದು ಕುಳಿತರು –ಎಎಫ್‌ಪಿ ಚಿತ್ರ

 

Post Comments (+)