ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ರಾಜ್ಯವೂ ಒಂದು ಕ್ರೀಡೆಯನ್ನು ವಿಶೇಷವಾಗಿ ಬೆಳೆಸಲಿ: ಕಿರಣ್ ರಿಜಿಜು

Last Updated 9 ಜುಲೈ 2020, 2:09 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಯೊಂದು ರಾಜ್ಯವೂ ಒಂದು ಕ್ರೀಡೆಯನ್ನು ದತ್ತು ಪಡೆದು ಬೆಳೆಸಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಬುಧವಾರ ನಡೆದ ’ಫಿಟ್‌ ಇಂಡಿಯಾ ನಿರ್ಮಾಣದಲ್ಲಿ ಕಾರ್ಪೊರೆಟ್ ಗಳ ಪಾತ್ರ‘ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

’ ರಾಜ್ಯಗಳ ಆಡಳಿತಗಳಿಗೆ ಈ ಕುರಿತು ಪತ್ರ ಬರೆದಿದ್ದೇವೆ. ಅವರೇ ತಮ್ಮ ರಾಜ್ಯದಲ್ಲಿ ಪ್ರಮುಖವಾಗಿರುವ ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ; ಮಣಿಪುರ ರಾಜ್ಯವು ಬಾಕ್ಸಿಂಗ್ ಮತ್ತು ಸೆಪೆಕ್ ಟಕ್ರಾ ಕ್ರೀಡೆಗಳನ್ನು ಆಯ್ಕೆ ಮಾಡಿಕೊಂಡರೆ, ಫುಟ್‌ಬಾಲ್ ಮತ್ತು ಆರ್ಚರಿ ಕ್ರೀಡೆಗಳನ್ನೂ ನಡೆಸಬಹುದು. ಆದರೆ ಅವರು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿರುವ ಮೊದಲೆರಡು ಕ್ರೀಡೆಗಳ ಮೇಲೆ ಹೆಚ್ಚು ಗಮನ ಇಡಬೇಕು‘ ಎಂದರು.

’ಕಾರ್ಪೊರೆಟ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿದ್ದೇವೆ. ಪ್ರತಿಯೊಂದು ಸಂಸ್ಥೆಯೂ ಒಂದು ಕ್ರೀಡೆಯನ್ನು ದತ್ತು ಪಡೆಯಬೇಕು. ಅದರ ಬೆಳವಣಿಗೆಗೆ ಗಮನ ನೀಡಬೇಕು. ಅದರ ಜೊತೆಗೆ ಬೇರೆ ಬೇರೆ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಚಟುವಟಿಕೆಗಳನ್ನು ಮುಂದುವರಿಸಬಹುದು‘ ಎಂದು ರಿಜಿಜು ಹೇಳಿದ್ದಾರೆ.

’ನಮ್ಮಲ್ಲಿ 36 ರಾಜ್ಯ ಘಟಕಗಳಿವೆ. ತಲಾ ಒಂದೊಂದು ಕ್ರೀಡೆಯನ್ನು ಅಭಿವೃದ್ಧಿಪಡಿಸಿದರೆ ಅಷ್ಟೇ ಸಂಖ್ಯೆಯ ಆಟಗಳು ಉನ್ನತ ಹಂತಕ್ಕೆ ಬೆಳೆಯುತ್ತವೆ. ಜೊತೆಜೊತೆಗೆ ಉಳಿದ ಆಟಗಳಿಗೂ ಉತ್ತೇಜನ ಸಿಗುತ್ತದೆ‘ ಎಂದಿದ್ದಾರೆ.

’2028ರಲ್ಲಿ ಲಾಸ್‌ ಏಂಜಲಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪದಕ ಪಟ್ಟಿಯ ಅಗ್ರ ಹತ್ತರಲ್ಲಿ ಭಾರತವು ಸ್ಥಾನ ಪಡೆಯಬೇಕು ಎಂದು ಗುರಿ ನಿಗದಿ ಮಾಡಿದ್ದೇನೆ. ಇದರಿಂದ ಒಂದು ನಿಖರ ಗುರಿಯ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದರೆ, ಉತ್ತಮ ಸಾಧನೆ ಹೊರಹೊಮ್ಮುವುದು ಖಚಿತ. ಗುರಿಯೇ ಇಲ್ಲದಿದ್ದರೆ ದಾರಿಯೂ ಇಲ್ಲ‘ ಎಂದು ನುಡಿದಿದ್ದಾರೆ.

’ಒಲಿಂಪಿಕ್ಸ್‌ನಲ್ಲಿ ಎಲ್ಲ ದೇಶಗಳ ಸಾಧನೆಯನ್ನು ಅವಲೋಕಿಸಿದರೆ, ಭಾರತಕ್ಕೆ 10–12 ಚಿನ್ನದ ಪದಕಗಳನ್ನು ಗೆಲ್ಲುವ ಸಾಮರ್ಥ್ಯ ಇದೆ. ಚೀನಾ, ಅಮೆರಿಕ ಸೇರಿದಂತೆ ನಾಲ್ಕೈದು ದೇಶಗಳು ಮಾತ್ರ 40–50 ಚಿನ್ನದ ಪದಕಗಳನ್ನು ಜಯಿಸುತ್ತವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

’ಒಟ್ಟು 14 ಕ್ರೀಡೆಗಳನ್ನು ಆದ್ಯತಾ ಪಟ್ಟಿಯಲ್ಲಿ ಗುರುತಿಸಿದ್ದೇವೆ. ಆರ್ಚರಿ, ಕುಸ್ತಿ, ಬಾಕ್ಸಿಂಗ್, ಹಾಕಿ, ಶೂಟಿಂಗ್ ಇತ್ಯಾದಿ ಈ ಪಟ್ಟಿಯಲ್ಲಿವೆ. ಇನ್ನೂ ಹೆಚ್ಚಿನ ಕ್ರೀಡಾ ಮಾದರಿಗಳಿಗೆ ಅವಕಾಶವನ್ನು ಮೀಸಲಿಟ್ಟಿದ್ದೇವೆ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT