ಭಾನುವಾರ, ಮೇ 9, 2021
27 °C

ಕಾಮನ್‌ವೆಲ್ತ್‌ ಕ್ರೀಡೆ: ಒಂದು ದಿನ ತಡವಾಗಿ ಆರಂಭಿಸಲು ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಗದಿಯಾಗಿರುವ 2022ರ ಕಾಮನ್‌ವೆಲ್ತ್‌ ಕ್ರೀಡೆಗಳು ನಿಗದಿಗಿಂತ ಒಂದು ದಿನ ತಡವಾಗಿ, ಅಂದರೆ ಜುಲೈ 28ರಂದು ಆರಂಭವಾಗಲಿವೆ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಮುಗಿದ ಬೆನ್ನಿಗೆ ಅಥ್ಲೀಟುಗಳಿಗೆ ಹೆಚ್ಚುವರಿಯಾಗಿ ವಿಶ್ರಾಂತಿ ಅವಧಿ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಜೊತೆಗೆ ಯುಇಎಫ್‌ಎ ಮಹಿಳಾ ಫುಟ್‌ಬಾಲ್ ಸೆಮಿಫೈಲ್‌ ಪಂದ್ಯಗಳೂ ಜುಲೈ 27ರಂದು ನಡೆಯಲಿದ್ದು, ಒಂದೇ ದಿನ ಎರಡು ಕ್ರೀಡಾಕೂಟಗಳು ನಡೆಯುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ಕಾಮನ್‌ವೆಲ್ತ್‌ ಕ್ರೀಡೆಗಳು ಜುಲೈ 27ರ ಬದಲು ಜುಲೈ 28ರಂದು ಆರಂಭವಾಗಿ ಆಗಸ್ಟ್‌ 8ರಂದು ಮುಕ್ತಾಯಗೊಳ್ಳಲಿದೆ ಎಂದು‌ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್) ಕಾರ್ಯನಿರ್ವಾಹಕ ಮಂಡಳಿ ಗುರುವಾರ ತಿಳಿಸಿದೆ.

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಜುಲೈ 15 ರಿಂದ 24ವರೆಗೆ ಅಮೆರಿಕದ ಒರೆಗಾನ್‌ನಲ್ಲಿ ನಡೆಯಲಿದೆ. ಯುಇಎಫ್‌ಎ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಜುಲೈ 6 ರಿಂದ 31ರವರೆಗೆ ಇಂಗ್ಲೆಂಡ್‌ನಲ್ಲಿ ನಿಗದಿಯಾಗಿದೆ.

ಈ ಎರಡೂ ಕೂಟಗಳು 2021ರಲ್ಲಿ ನಡೆಯಬೇಕಾಗಿತ್ತು. ಆದರೆ ಈ ವರ್ಷದ ಜುಲೈ–ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು, ಕೋವಿಡ್‌–19 ಪಿಡುಗಿನ ಕಾರಣ ಮುಂದಿನ ವರ್ಷಕ್ಕೆ ಮುಂದೂಡಿದ್ದರಿಂದ ವಿಶ್ವ ಅಥ್ಲೆಟಿಕ್ಸ್‌ ಮತ್ತು ಯುಇಎಫ್‌ಎ ಫುಟ್‌ಬಾಲ್‌ ಟೂರ್ನಿಯ ವೇಳಾಪಟ್ಟಿಯನ್ನೂ ಪರಿಷ್ಕರಿಸಬೇಕಾಯಿತು.

ಒಂದು ದಿನ ಮುಂದೂಡಿದ ಕಾರಣ, ವಿಶ್ವ ಅಥ್ಲೆಟಿಕ್‌ ಕೂಟದಿಂದ ಭಾಗವಹಿಸಿ ಬಂದವರಿಗೆ ಹೆಚ್ಚುವರಿಯಾಗಿ ವಿಶ್ರಾಂತಿ ಸಿಗಲಿದೆ ಎಂದು ಸಿಜಿಎಫ್‌ ಮತ್ತು ಬರ್ಮಿಂಗ್‌ಹ್ಯಾಮ್‌ ಕ್ರೀಡೆಗಳ ಆಯೋಜನಾ ಸಮಿತಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು