ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರ ಸೊಬಗಿನ ನಡುವೆ ಕ್ರೀಡಾಪಟುಗಳ ಸಂಭ್ರಮ: ಸುನೀಲ್‌, ಶಾಹೀನ್‌ ‘ಚಿನ್ನ’ದ ಸಾಧಕರು

Last Updated 5 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದಟ್ಟ ಕಾನನದ ಹಸಿರ ಸಿರಿಯ ಸೊಬಗಿನ ನಡುವಿನ ಡಾಂಬಾರು ರಸ್ತೆಯ ಮೇಲೆ ಸೂರ್ಯನ ಕಿರಣಗಳು ಬೀಳುವ ಮುನ್ನವೇ ಸುನೀಲ್‌ ಎನ್‌.ಡಿ. ಹಾಗೂ ಶಾಹೀನ್‌ ಎಸ್‌.ಡಿ. ರಾಜ್ಯ ತಂಡದ ಆಯ್ಕೆಗೆ ನಡೆದ ಕ್ರಾಸ್‌ ಕಂಟ್ರಿ ಸ್ಪರ್ಧೆಯ 10 ಕಿ.ಮೀ. ವಿಭಾಗದಲ್ಲಿ ‘ಚಿನ್ನ’ದ ಸಾಧಕರಾಗಿ ಹೊರಹೊಮ್ಮಿದರು.

ಕಲಘಟಗಿ ತಾಲ್ಲೂಕಿನ ಹುಲ್ಲಂಬಿಯಿಂದ ಆರಂಭವಾದ ಗುರಿ, ಹಸರಂಬಿ ಮಾರ್ಗದ ಮೂಲಕ ಗಳಗಿ ಹುಲಕೊಪ್ಪ ಗ್ರಾಮದ ತನಕ ನಿಗದಿಯಾಗಿತ್ತು. ಈ ಮಾರ್ಗದಲ್ಲಿ ಕಣ್ಣು ಹಾಯಿಸಿದಷ್ಟೂ ಹಸಿರ ಸೌಂದರ್ಯ ಹಾಗೂ ತಂಪನೆಯ ವಾತಾವರಣ ಅಥ್ಲೀಟ್‌ಗಳ ಖುಷಿ ಇಮ್ಮಡಿಸಿತು.

ಪುರುಷರ ವಿಭಾಗದಲ್ಲಿ ಸುನೀಲ್‌ 35 ನಿಮಿಷ 06.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ನಾಗರಾಜ ದಿವಟೆ (ಕಾಲ: 35:07.33ಸೆ.) ಬೆಳ್ಳಿ ಹಾಗೂ ಲಮಾಣಿ ಲಕ್ಷ್ಮಣ (35:09.19ಸೆ.) ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಮಹಿಳೆಯರ ವಿಭಾಗದಲ್ಲಿ ಶಾಹೀನ್‌ (40:19.80ಸೆ.) ಗುರಿ ತಲುಪಿದರೆ, ಶ್ರೀನಿಧಿ ಎಸ್‌. (45:28.02ಸೆ.) ಬೆಳ್ಳಿ ಮತ್ತು ಜ್ಯೋತಿ ಕೆ. (48:49.13ಸೆ.) ಕಂಚು ಗೆದ್ದುಕೊಂಡರು.

19ರಂದು ರಾಜ್ಯ ಟೂರ್ನಿ: ಯಲ್ಲಾಪುರದ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿ. 19ರಂದು 56ನೇ ರಾಜ್ಯ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದ್ದು, ಇಲ್ಲಿ ಪ್ರತಿ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆದವರು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಪದಕ ಪಡೆದವರ ಫಲಿತಾಂಶ: ಬಾಲಕರ ವಿಭಾಗ: (16 ವರ್ಷದ ಒಳಗಿನವರ 2 ಕಿ.ಮೀ.): ಸಚಿನ್‌ ಬೋರಗೌಡ (ಕಾಲ: 6ನಿಮಿಷ32.11 ಸೆ.)–1, ಸಂದೇಶ ಕಣ್ಣೂರಮಠ (6:39.83ಸೆ.)–2, ಸೈಯದ್‌ ಎಸ್. (6:56.38ಸೆ.)–3.

18 ವರ್ಷದ ಒಳಗಿನವರ 6 ಕಿ.ಮೀ: ಬಾಲು ಎಚ್‌. (20:40.91ಸೆ.)–1, ಶಿವಾಜಿ ಜಾಧವ (21:02.31ಸೆ.)–2, ರಾಜುಕೃಷ್ಣಪ್ಪ ಬಿ. (21:20.82ಸೆ.)–3.

20 ವರ್ಷದ ಒಳಗಿನವರ 8 ಕಿ.ಮೀ.: ಅಭಿಷೇಕ ಎಚ್‌.ಕೆ. (28:31.99ಸೆ.)–1, ಆನಂದ ಎನ್‌.ಕೆ. (28:38.38ಸೆ.)–2, ದರ್ಶನ ಎಸ್‌.ಎಲ್‌. (28:44.13ಸೆ.)–3.

ಬಾಲಕಿಯರ ವಿಭಾಗ: 16 ವರ್ಷದೊಳಗಿನವರು (2 ಕಿ.ಮೀ.): ಪ್ರಿಯಾಂಕಾ ಓಲೇಕಾರ (ಕಾಲ: 7:37.78ಸೆ.)–1, ಶಿಲ್ಪಾ ಹೊಸಮನಿ (7:50.65ಸೆ.)–2, ಸುಷ್ಮಿತಾ ಎಸ್‌. (8:24.93ಸೆ.)–3.

18 ವರ್ಷದೊಳಗಿನವರು (4 ಕಿ.ಮೀ.): ವಚನಶ್ರೀ ಮಡಿವಾಳ (18:30.83ಸೆ.)–1, ಸೃಷ್ಟಿ ಎಂ.ಎಸ್‌. (18:45.78ಸೆ.)–2, ಚೈತ್ರಾ ಚಂದರಗಾಯಿ (19:00.43ಸೆ.)–3.‌

20 ವರ್ಷದ ಒಳಗಿನವರ 6 ಕಿ.ಮೀ: ಸುನಿತಾ ಎಂ. ಓಲೇಕಾರ (30:36.94ಸೆ.)–1, ತೇಜಸ್ವಿನಿ ರೇವಡನವರ (31:19.46ಸೆ.)–2, ವಿಜಯಲಕ್ಷ್ಮಿ ಕರಿಲಿಂಗಣ್ಣನವರ (32.37.56ಸೆ.)–3.

ಗ್ರಾಮಸ್ಥರ ಕ್ರೀಡಾಪ್ರೀತಿ

ಧಾರವಾಡ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಹಾಗೂ ಗಳಗಿ ಹುಲಕೊಪ್ಪ ಗ್ರಾಮದ ಕ್ರೀಡಾಭಿಮಾನಿಗಳ ಸಹಯೋಗದಲ್ಲಿ ಆಯೋಜನೆಯಾಗಿದ್ದ ಟೂರ್ನಿ ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಯಿತು.

ಸ್ಪರ್ಧೆಗಳು ಆರಂಭವಾದ ಸಮಯದಿಂದ ಕೊನೆಯವರೆಗೂ ಕ್ರಾಸ್‌ಕಂಟ್ರಿ ತಮ್ಮೂರಿನ ಹಬ್ಬವೇನೊ ಎನ್ನುವಂತೆ ಸಡಗರದಿಂದ ಓಡಾಡಿದರು. ಕ್ರೀಡಾಪಟುಗಳಿಗೆ, ಕೋಚ್‌ಗಳಿಗೆ ಹಾಗೂ ಅವರ ಪೋಷಕರಿಗೆ ಕಿಂಚಿತ್ತೂ ಕೊರತೆಯಾಗದಂತೆ ವ್ಯವಸ್ಥೆ ಮಾಡಿದರು. ಎಲ್ಲ ಕ್ರೀಡಾಪಟುಗಳಿಗೂ ಉಪಾಹಾರವನ್ನೂ ಕೊಟ್ಟರು.

‘ಹಿಂದೆ ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಕ್ರಾಸ್‌ ಕಂಟ್ರಿ ಟೂರ್ನಿಗಳಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದೇವೆ. ನಮ್ಮೂರಿನಲ್ಲಿ ಒಂದು ಟೂರ್ನಿ ಸಂಘಟಿಸಿದರೆ ಗ್ರಾಮಸ್ಥರೆಲ್ಲರೂ ಒಂದಾಗಿ ಯಶಸ್ಸಿಗೆ ಸಹಕರಿಸುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರ, ಕೋಚ್‌ಗಳ ಹಾಗೂ ಕ್ರೀಡಾಪ್ರೇಮಿಗಳ ಸಹಕಾರ ಅನನ್ಯ. ನಮ್ಮೂರಿನಲ್ಲಿ ಯಾವುದೇ ಕ್ರೀಡೆಯಾದರೂ ಜಾತ್ರೆಯ ರೀತಿಯಲ್ಲಿ ಮಾಡುತ್ತೇವೆ’ ಎಂದು ಗ್ರಾಮದ ಮೈಲಾರಲಿಂಗ, ದೈಹಿಕ ಶಿಕ್ಷಣ ಉಪನ್ಯಾಸಕ ರಾಜಶೇಖರ ಚವ್ಹಾಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT