ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ: ಭರವಸೆ ಮೂಡಿಸಿದ ಸುರಪುರದ ಕ್ರೀಡಾಪಟುಗಳು

Last Updated 28 ನವೆಂಬರ್ 2021, 4:47 IST
ಅಕ್ಷರ ಗಾತ್ರ

ಸುರಪುರ: ಪ್ರತಿ ದಿನ ಸಂಜೆ ತಾಲ್ಲೂಕಿನ ದೇವಪುರದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಬಿಲ್ಲಿನ ಬಾಣಗಳ ಸದ್ದು ರೊಂಯ್ ರೊಂಯ್ ಎಂದು ಕೇಳುತ್ತದೆ. 8 ರಿಂದ 10 ಬಿಲ್‌ವಿದ್ಯೆ ಪಟುಗಳು ಅಭ್ಯಾಸದಲ್ಲಿ ನಿರತರಾಗಿರುತ್ತಾರೆ.

ಈ ಪ್ರತಿಭೆಗಳನ್ನು ಅದರಲ್ಲೂ ವಿಶೇಷವಾಗಿ ಗುಡ್ಡಗಾಡು ಪ್ರದೇಶದ ಜನರಿಗೆ ಪ್ರೋತ್ಸಾಹಿಸಲು ವನವಾಸಿ ಕಲ್ಯಾಣ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, 2015ರಲ್ಲಿ ಶ್ರೀನಿವಾಸ ಎಂಬುವರು ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು.

ಈ ಭಾಗದಲ್ಲಿ ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜರ ಆಳ್ವಿಕೆ ಪ್ರಭಾವ ದಟ್ಟವಾಗಿದೆ. ಈ ಕಾರಣಕ್ಕೆ ಇಲ್ಲಿನ ಮಕ್ಕಳಿಗೆ ಬಿಲ್ಲು ವಿದ್ಯೆ ಬಗ್ಗೆ ಹೆಚ್ಚು ಆಸಕ್ತಿ ಎಂಬುದನ್ನು ಅರಿತು ಶ್ರೀನಿವಾಸ ಅವರು ತರಬೇತಿ ಕೊಡಿಸಿದರು.

ದೇವಪುರದ ವಿದ್ಯಾರ್ಥಿ ಮೌನೇಶಕುಮಾರ ಚಿಕ್ಕನಳ್ಳಿಯ ವಿಶೇಷ ಆಸಕ್ತಿ ಗಮನಿಸಿ, ಬಿಲ್ಲು ವಿದ್ಯೆ ತರಬೇತಿಗಾಗಿ ಅವರನ್ನು ಬೆಳಗಾವಿಗೆ ಕಳುಹಿಸಲಾಯಿತು. 2016ರಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ವನವಾಸಿ ಕ್ರೀಡಾಕೂಟದಲ್ಲಿ ಮೌನೇಶಕುಮಾರ ದ್ವಿತೀಯ ಸ್ಥಾನ ಪಡೆದರು.

ಅದೇ ವರ್ಷ ಮುಂಬೈಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. 2017 ಮತ್ತು 2018ರಲ್ಲಿ ಕೊಡಗು, ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ಭೂಪಾಲ, ಗೌಹಾಟಿಯಲ್ಲಿ ನಡೆದ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಗಮನ ಸೆಳೆದರು.

2019ರಲ್ಲಿ ಕರ್ನಾಟಕ ತಂಡದ ತರಬೇತುದಾರರಾಗಿ ಅಯ್ಕೆಯಾಗಿ ದೇವಪುರದ ಬಸವರಾಜ ಕುಂಬಾರಪೇಟ, ಮೌನೇಶನಾಯಕ, ಪರಮಣ್ಣ ಶಿಕಾರಿ, ಬಸಮ್ಮ ಶಿಕಾರಿ, ಭೀಮರಾಯ ಜೋಳದಡಗಿ, ರಘು ಚಿಕ್ಕನಳ್ಳಿ, ರೇಣುಕಾ ನಾಯ್ಕೋಡಿ, ನಾಗಮ್ಮ ಜೋಳದಡಗಿ, ವೆಂಕಟೇಶ ಪುಜಾರಿ ಅವರಿಗೆ ತರಬೇತಿ ನೀಡಿ ರಾಷ್ಟ್ರಮಟ್ಟದ ಆಟಗಾರರನ್ನಾಗಿ ರೂಪಿಸಿದ್ದಾರೆ.

ಥ್ರೋಬಾಲ್ ತರಬೇತಿಯನ್ನೂ ನೀಡುತ್ತಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ದೇವಪುರದ ಕಾಸಿಂಸಾಬ ರಜೀಬಸಾಬ ಕರ್ನಾಟಕ ಥ್ರೋಬಾಲ್ ಅಸೋಸಿಯೇಷನ್ ಪ್ರತಿನಿಧಿಸಿ ಕಳೆದ ತಿಂಗಳು ಹರಿಯಾಣದಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಬಿಲ್ಲುವಿದ್ಯೆಯಲ್ಲಿ ಬಸಮ್ಮ 2019ರ ದಸರಾ ಕ್ರೀಡಾಕೂ ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಒಂದು ಸೆಟ್ ಬಿಲ್ಲಿಗೆ ₹12 ಸಾವಿರ ಬೆಲೆ ಇದೆ. ಬಾಣ ಬಿಡುವ ಫಲಕಕ್ಕೆ ₹7 ಸಾವಿರ, ಒಂದು ಡಜನ್ ಬಾಣಗಳಿಗೆ ₹6 ಸಾವಿರ ದರ ಇದೆ. ಬಿಲ್ಲನ್ನು ಮಹಾರಾಷ್ಟ್ರದ ಅಮರಾವತಿಯಿಂದ, ಬಾಣಗಳನ್ನು ಕೇರಳದ ವಯನಾಡಿನಿಂದ ತರಿಸುತ್ತಾರೆ.

2022ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಖೇಲೊ ಇಂಡಿಯಾ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲ ಆಟಗಾರರು ಬಿಲ್ವಿದ್ಯೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ತವಕದಲ್ಲಿದ್ದಾರೆ. ಅಲ್ಲಿ ಭಾಗವಹಿಸಲು ₹1.80 ಲಕ್ಷ ಮೌಲ್ಯದ ರಿಕವರಿ ಕಿಟ್ (ಬಿಲ್ಲು) ಹೊಂದುವ ಅಗತ್ಯವಿದೆ. ಆಟಗಾರರು ನೆರವಿನ ನಿರೀಕ್ಷೆಯಲ್ಲಿದ್ದಾರೆ.

ತರಬೇತುದಾರ ಮೌನೇಶಕುಮಾರ ಅವರಿಗೆ ಹಲವು ಪುರಸ್ಕಾರಗಳು ಲಭಿಸಿವೆ. ಜಿಲ್ಲಾಡಳಿತ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆ ಮಾಡಿರುವ ಮೌನೇಶ ಮತ್ತು ತಂಡದವರಿಗೆ ಸರ್ಕಾರ ನೆರವು ನೀಡ ಬೇಕು ಎಂದು ಗ್ರಾಮಸ್ಥರು ಹೇಳುತ್ತಾರೆ.

*

ಅರ್ಚರಿ ನನ್ನ ಕನಸು. ಏಶಿಯನ್ ಮತ್ತು ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ದೇಶಕ್ಕೆ ಪದಕ ತಂದು ಕೊಡುವ ಅದಮ್ಯ ಆಸೆ ನನಗಿದೆ

- ಮೌನೇಶಕುಮಾರ ಚಿಕ್ಕನಳ್ಳಿ, ಬಿಲ್ಲುವಿದ್ಯೆ ಪಟು

*

ಮಕ್ಕಳ ಸಾಧನೆಯನ್ನು ಗಮನಿಸಿದ್ದೇನೆ. ಬಿಲ್ಲುವಿದ್ಯೆಯಲ್ಲಿ ವರ ಪರಿಣತಿ ಅನನ್ಯ. ಸರ್ಕಾರದದಿಂದ ಅವರಿಗೆ ಸಿಗಬಹುದಾದ ಎಲ್ಲ ನೆರವನ್ನು ಒದಗಿಸಲು ಬದ್ಧನಿದ್ದೇನೆ

- ರಾಜೂಗೌಡ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT