ಸೋಮವಾರ, ಜೂನ್ 21, 2021
27 °C

ಟಿ.ಟಿ: ಶರತ್‌– ಸತ್ಯನ್‌ಗೆ ಬೆಳ್ಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬುಡಾಪೆಸ್ಟ್‌ : ಭಾರತದ ಅಚಂತಾ ಶರತ್‌ ಕಮಲ್‌ ಮತ್ತು ಜ್ಞಾನಶೇಖರನ್‌ ಸತ್ಯನ್‌ ಅವರು ಐಟಿಟಿಎಫ್‌ ವಿಶ್ವ ಟೂರ್‌ ಹಂಗರಿಯನ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಶರತ್‌ ಮತ್ತು ಸತ್ಯನ್‌ 5–11, 9–11, 11–8, 9–11ರಲ್ಲಿ ಜರ್ಮನಿಯ ಬೆನೆಡಿಕ್ಟ್‌ ಡೂಡಾ ಮತ್ತು ಪ್ಯಾಟ್ರಿಕ್‌ ಫ್ರಾಂಜಿಸ್ಕಾ ವಿರುದ್ಧ ಪರಾಭವಗೊಂಡರು. ಈ ಹೋರಾಟ 30 ನಿಮಿಷ ನಡೆಯಿತು.

ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಜೋಡಿ ಹೊ ಕ್ವಾನ್‌ ಕಿಟ್‌ ಮತ್ತು ವಾಂಗ್‌ ಚುನ್‌ ಟಿಂಗ್‌ಗೆ ಆಘಾತ ನೀಡಿದ್ದ ಶರತ್‌ ಮತ್ತು ಸತ್ಯನ್‌ ಅವರು ಅಂತಿಮ ಘಟ್ಟದ ಹಣಾಹಣಿಯಲ್ಲಿ ಎದುರಾಳಿಗಳಿಗೆ ದಿಟ್ಟ ಪೈಪೋಟಿ ಒಡ್ಡಿದರು. ಹೀಗಿದ್ದರೂ ಗೆಲುವು ಒಲಿಯಲಿಲ್ಲ.

ಶರತ್‌ ಅವರು ಟೂರ್ನಿಯಲ್ಲಿ ಜಯಿಸಿದ ಎರಡನೇ ಪದಕ ಇದಾಗಿದೆ. ಮಿಶ್ರಡಬಲ್ಸ್‌ನಲ್ಲಿ ಮಣಿಕಾ ಬಾತ್ರಾ ಜೊತೆಗೂಡಿ ಆಡಿದ್ದ ಅವರು ಕಂಚಿನ ಪದಕ ಪಡೆದಿದ್ದರು.

ಹಂಸಿಣಿಗೆ ಕಂಚು: ಸ್ವೀಡನ್‌ನಲ್ಲಿ ನಡೆಯುತ್ತಿರುವ ಸ್ವೀಡನ್‌ ಜೂನಿಯರ್‌ ಮತ್ತು ಕೆಡೆಟ್‌ ಓಪನ್ ಟೂರ್ನಿಯಲ್ಲಿ ಭಾರತದ ಮಥನ್‌ ರಾಜನ್‌ ಹಂಸಿಣಿ ಕಂಚಿನ ಪದಕ ಗೆದ್ದಿದ್ದಾಳೆ.

ಮಿನಿ ಕೆಡೆಟ್‌ ಬಾಲಕಿಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೆನ್ನೈನ 10 ವರ್ಷ ವಯಸ್ಸಿನ ಆಟಗಾರ್ತಿ ಹಂಸಿಣಿ 12–10, 9–11, 5–11, 8–11ರಲ್ಲಿ ರಷ್ಯಾದ ಲೂಲಿಯಾ ಪುಗೋವ್‌ಕಿನಾ ವಿರುದ್ಧ ಸೋತಳು.

ಐದನೇ ತರಗತಿ ವಿದ್ಯಾರ್ಥಿನಿ ಹಂಸಿಣಿ, ಮೊದಲ ಸುತ್ತಿನಲ್ಲಿ 10–12, 11–9, 11–9, 11–3ರಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಬೊಕೊವಾ ಎದುರೂ, ಕ್ವಾರ್ಟರ್‌ ಫೈನಲ್‌ನಲ್ಲಿ 11–3, 12–10, 11–9ರಲ್ಲಿ ಅಮೆರಿಕದ ಇಶಾ ಬಾಜಪೇಯಿ ವಿರುದ್ಧವೂ ಗೆದ್ದಿದ್ದಳು.

ಕೆಡೆಟ್‌ ಬಾಲಕಿಯರ ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ಸುಹಾನ ಸೈನಿ ಮತ್ತು ಕೆಡೆಟ್‌ ಬಾಲಕರ ಸಿಂಗಲ್ಸ್‌ನಲ್ಲಿ ಆಡುತ್ತಿರುವ ಸುರೇಶ್‌ ರಾಜ್‌ ಅವರು ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು