ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2020: ಕೊರೊನಾ ಆಟ ಬಯೋ ಬಬಲ್ ಪಾಠ

Last Updated 30 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""
""
""
""

ಕ್ರಿಕೆಟ್ ಪದಕೋಶಕ್ಕೆ ಕ್ವಾರಂಟೈನ್, ನ್ಯೂನಾರ್ಮಲ್, ಸಲೈವಾ ಬ್ಯಾನ್, ಸ್ಯಾನಿಟೈಸರ್ ಪದಗಳು ಸೇರಿಕೊಂಡ ವರ್ಷ ಇದು. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳೆಲ್ಲವೂ ಪ್ರೇಕ್ಷರಿಲ್ಲದೇ ಬಣಗುಟ್ಟಿದ ಕ್ರೀಡಾಂಗಣಗಳಲ್ಲಿ ನಡೆದದ್ದು ಇತಿಹಾಸ.

ಕಣ್ಣಿಗೆ ಕಾಣದ ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್ ಕ್ಷೇತ್ರ ‘ನವ ವಾಸ್ತವ’ ನಿಯಮಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು.

ಮಾರ್ಚ್‌ ತಿಂಗಳಲ್ಲಿ ನ್ಯೂಜಿಲೆಂಡ್‌ ಪ್ರವಾಸ ಮುಗಿಸಿದ್ದ ಭಾರತವು ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯಲು ಸಿದ್ಧವಾಗಿತ್ತು. ಅದೇ ಸಂದರ್ಭದಲ್ಲಿ ಲಾಕ್‌ಡೌನ್ ವಿಧಿಸಲಾಯಿತು. ಪ್ರವಾಸಿ ತಂಡ ತನ್ನ ದೇಶಕ್ಕೆ ಮರಳಿತು. ಬಹುತೇಕ ಎಲ್ಲ ದೇಶಗಳಲ್ಲಿಯೂ ಕ್ರಿಕೆಟ್ ಸರಣಿಗಳು ರದ್ದಾದವು. ಕ್ರಿಕೆಟಿಗರು ಮನೆ ಸೇರಿಕೊಂಡರು.

ಇನ್ನೊಂದು ಕಡೆ; ಕ್ರಿಕೆಟ್ ಆಡಳಿತ ಮಂಡಳಿಗಳು ಆರ್ಥಿಕ ಹೊಡೆತವನ್ನು ತಪ್ಪಿಸಿಕೊಳ್ಳಲು ಹೆಣಗಾಡಿದವು. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಸಂಸ್ಥೆಯ ಹಲವು ಉದ್ಯೋಗಿಗಳನ್ನು ಕಿತ್ತು ಹಾಕಬೇಕಾಯಿತು. ಆಟಗಾರರ ವೇತನಕ್ಕೂ ಕತ್ತರಿ ಹಾಕಿತು. ಏಷ್ಯಾಕಪ್, ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟ್ವೆಂಟಿ–20 ವಿಶ್ವಕಪ್ ಟೂರ್ನಿಗಳನ್ನು ಮುಂದೂಡಲಾಯಿತು.

ಇಂಗ್ಲೆಂಡ್ ಮುನ್ನುಡಿ: ಕೊರೊನಾ ಕಾಲಘಟ್ಟದಲ್ಲಿ ಮೊಟ್ಟಮೊದಲು ದ್ವಿಪಕ್ಷೀಯ ಸರಣಿಯ ಆತಿಥ್ಯ ವಹಿಸಿದ್ದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ. ಜೀವ ಸುರಕ್ಷಾ ವಲಯ (ಬಯೋ ಬಬಲ್) ನಿಯಮವನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿತು. ವೆಸ್ಟ್ ಇಂಡೀಸ್ ಎದುರು ಮೂರು ಟೆಸ್ಟ್‌ಗಳನ್ನು ಆಡಿ ಜಯಿಸಿತು. ಚೆಂಡಿಗೆ ಎಂಜಲು ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಯಿತು. ನಂತರ ಪಾಕಿಸ್ತಾನ, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳೂ ಇಂಗ್ಲೆಂಡ್‌ನಲ್ಲಿ ಸರಣಿ ಆಡಿದವು.

ಯುಎಇಯಲ್ಲಿ ಐಪಿಎಲ್: ಏಪ್ರಿಲ್‌–ಮೇನಲ್ಲಿ ನಡೆಯಬೇಕಿದ್ದ ಐಪಿಎಲ್, ಅಕ್ಟೋಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜನೆಯಾಯಿತು. ಮುಂಬೈ ಇಂಡಿಯನ್ಸ್‌ ಚಾಂಪಿಯನ್ ಎನಿಸಿತು.

ಸೋಲಿನಕಹಿ–ಗೆಲುವಿನ ಸಿಹಿ: ಯುಎಇಯಿಂದ ಆಸ್ಟ್ರೇಲಿಯಾಕ್ಕೆ ತೆರಳಿದ ಭಾರತ ತಂಡವು ಏಕದಿನ ಸರಣಿಯಲ್ಲಿ ಸೋತು, ಟ್ವೆಂಟಿ–20ಯಲ್ಲಿ ಗೆದ್ದಿತು. ಆದರೆ, ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ತನ್ನ ಕ್ರಿಕೆಟ್ ಇತಿಹಾಸದಲ್ಲಿಯೇ ಕನಿಷ್ಟ ಮೊತ್ತ (36) ಗಳಿಸಿದ ಅವಮಾನಕ್ಕೆ ತುತ್ತಾಯಿತು. ಎರಡನೇ ಪಂದ್ಯದಲ್ಲಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬಳಗವು ಆಸ್ಟ್ರೇಲಿಯಾ ವಿರುದ್ಧ ಗೆದ್ದು, ಮತ್ತೆ ಆತ್ಮವಿಶ್ವಾಸದ ಹಳಿಗೆ ಮರಳಿತು.

ರೊನಾಲ್ಡೊ–ಮೆಸ್ಸಿ ಮುಖಾಮುಖಿ
ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯು ಅಂತಿಮ ಘಟ್ಟಕ್ಕೆ ಲಗ್ಗೆ ಇಡುವ ಹೊತ್ತಿನಲ್ಲೇ ಭಾರತದಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾದವು. ಹೀಗಾಗಿ ಫೈನಲ್‌ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸಬೇಕಾಯಿತು. ಗೋವಾದ ಫತೋರ್ಡ ಮೈದಾನದಲ್ಲಿ ಮಾರ್ಚ್‌14ರಂದು ನಡೆದ ಹಣಾಹಣಿಯಲ್ಲಿ ಎಟಿಕೆ 3–1 ಗೋಲುಗಳಿಂದ ಚೆನ್ನೈಯಿನ್‌ ತಂಡವನ್ನು ಸೋಲಿಸಿತು. ಹೋದ ನವೆಂಬರ್‌ 20ರಂದು 2020–21ನೇ ಸಾಲಿನ ಲೀಗ್‌ಗೆ ಚಾಲನೆ ನೀಡಲಾಯಿತು.

ಕೆಲ ಆಟಗಾರರು ಹಾಗೂ ತಂಡದ ಸಿಬ್ಬಂದಿಗೆ ಕೋವಿಡ್‌ ಇರುವುದು ದೃಢವಾದ ನಂತರಲಾ ಲಿಗಾ, ಸೀರಿ ‘ಎ’, ಪ್ರೀಮಿಯರ್‌ ಲೀಗ್‌ ಸೇರಿದಂತೆ ಹಲವು ದೇಶಿ ಲೀಗ್‌ ಹಾಗೂ ಮಹತ್ವದ ಟೂರ್ನಿಗಳನ್ನು ಫಿಫಾ, ಅನಿರ್ದಿಷ್ಟಾವಧಿಗೆ ಮುಂದೂಡಿತು.

ಮೇ16ರಂದು (ಬುಂಡೆಸ್‌ಲಿಗಾ) ಮತ್ತೆ ಕಾಲ್ಚೆಂಡು ಪುಟಿಯಿತು. ಇದರ ಬೆನ್ನಲ್ಲೇ ಲಾ ಲಿಗಾ (ಜೂನ್‌11), ಪ್ರೀಮಿಯರ್‌ ಲೀಗ್‌ (ಜೂನ್‌17) ಹಾಗೂ ಸೀರಿ ‘ಎ’ (ಜೂನ್‌20) ಶುರುವಾದವು. ರಿಯಲ್‌ ಮ್ಯಾಡ್ರಿಡ್‌ ತಂಡ ಲಾ ಲಿಗಾ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿತು.

ಅಗಲಿದ ಫುಟ್‌ಬಾಲ್‌ ದಂತಕತೆ ಅರ್ಜೆಂಟಿನಾದ ಡಿಯೆಗೊ ಮರಡೊನಾ

ವಿಲೀನ:ಏಷ್ಯಾದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿರುವ ಮೋಹನ್‌ ಬಾಗನ್‌ ಹಾಗೂ ಐಎಸ್‌ಎಲ್‌ ಟೂರ್ನಿಯಲ್ಲಿ ದಾಖಲೆಯ ಮೂರು ಪ್ರಶಸ್ತಿ ಗೆದ್ದಿರುವ ಎಟಿಕೆ ಕ್ಲಬ್‌ಗಳು ಜುಲೈ10ರಂದು ವಿಲೀನಗೊಂಡವು.

ಮೆಸ್ಸಿ–ರೊನಾಲ್ಡೊ ಮುಖಾಮುಖಿ: ಡಿಸೆಂಬರ್‌ 9ರಂದು ನಿಗದಿಯಾಗಿದ್ದ ಯುವೆಂಟಸ್‌ ಹಾಗೂ ಎಫ್‌ಸಿ ಬಾರ್ಸಿಲೋನಾ ನಡುವಣ ಚಾಂಪಿಯನ್ಸ್‌ ಲೀಗ್‌ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಯೊನೆಲ್‌ ಮೆಸ್ಸಿ ಮುಖಾಮುಖಿಯಾಗಿದ್ದರು. ಎರಡು ಗೋಲುಗಳನ್ನು ದಾಖಲಿಸಿದ್ದ ರೊನಾಲ್ಡೊ ಆಟದಿಂದ ಯುವೆಂಟಸ್ ಗೆದ್ದಿತು. ರೊನಾಲ್ಡೊ ಸೀನಿಯರ್‌ ವಿಭಾಗದಲ್ಲಿ 750 ಗೋಲುಗಳನ್ನು ಬಾರಿಸಿದ ದಾಖಲೆಬರೆದರು.

ಫಿಫಾ ವರ್ಷದ ಆಟಗಾರ ಪ್ರಶಸ್ತಿಯೊಂದಿಗೆ ರಾಬರ್ಟ್‌ ಲೆವಂಡೋವ್‌ಸ್ಕಿ –ರಾಯಿಟರ್ಸ್‌ ಚಿತ್ರ

ಪೆಲೆ ದಾಖಲೆ ಮೀರಿದ ಮೆಸ್ಸಿ: ಅರ್ಜೆಂಟೀನಾದ ಮೆಸ್ಸಿ, ಬಾರ್ಸಿಲೋನಾ ಕ್ಲಬ್‌ ಪರ 644 ಗೋಲು ಗಳಿಸಿದರು. ಒಂದೇ ಕ್ಲಬ್‌ ಪರ ಅತಿ ಹೆಚ್ಚು ಗೋಲು ದಾಖಲಿಸಿದ್ದ ಬ್ರೆಜಿಲ್‌ನ ಪೆಲೆ ಅವರ ದಾಖಲೆಯನ್ನು ಅಳಿಸಿಹಾಕಿದರು.

‘ಗೋಲ್‌ ಮಷಿನ್‌’ ರಾಬರ್ಟ್‌ ಲೆವಂಡೋವ್‌ಸ್ಕಿ ಫಿಫಾ ವರ್ಷದ ಆಟಗಾರ ಗೌರವಕ್ಕೆ ಭಾಜನರಾದರು. ಪ್ರಶಸ್ತಿ ಮೇಲೆ ರೊನಾಲ್ಡೊ ಹಾಗೂ ಮೆಸ್ಸಿ ಹೊಂದಿದ್ದ ಪ್ರಾಬಲ್ಯಕ್ಕೆ ಕೊನೆಹಾಡಿದರು.

ಒಲಿಂಪಿಕ್ಸ್‌ಗೂ ಕಂಟಕ
ಜಪಾನಿನ ಟೋಕಿಯೊದಲ್ಲಿ ವಿಜೃಂಭಣೆಯಿಂದ ಆಯೋಜನೆಯಾಗಲಿದ್ದ ಒಲಿಂಪಿಕ್ಸ್‌ಗೂ ಕೊರೊನಾ ಬಿಸಿ ತಟ್ಟಿತು. ಮುಂದಿನ ವರ್ಷಕ್ಕೆ ಒಲಿಂಪಿಕ್ಸ್‌ ಮುಂದೂಡಲಾಯಿತು. ಈ ಹಿಂದೆ ವಿಶ್ವಯುದ್ಧಗಳ ಸಂದರ್ಭದಲ್ಲಿ ಒಲಿಂಪಿಕ್ ಕೂಟಗಳು ರದ್ದಾಗಿದ್ದವು.

ಹಳೆ ಹುಲಿ ಮೈಕ್ ಟೈಸನ್ 54ನೇ ವಯಸ್ಸಿನಲ್ಲಿ ಮತ್ತೆ ವೃತ್ತಿಪರ ಬಾಕ್ಸಿಂಗ್‌ ರಿಂಗ್‌ಗೆ ಧುಮುಕಿದರು. 15 ವರ್ಷಗಳ ನಂತರ ಕಣಕ್ಕೆ ಇಳಿದಿದ್ದ ಟೈಸನ್ ಮತ್ತು ರಾಯ್ ಜಾನ್ಸ್ ಜೂನಿಯರ್ ನಡುವಿನ ಸ್ಪರ್ಧೆ ಟೈ ಆಗಿತ್ತು. ಕ್ರೀಡಾ ಕ್ಷೇತ್ರದ ಅಕ್ರಮಗಳಲ್ಲಿ ಭಾಗಿಯಾಗಿದ್ದರೆನ್ನಲಾದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ನ ಮಾಜಿ ಅಧ್ಯಕ್ಷ ಲೆಮೈನ್ ಡಿಯಾಕ್‌ ಜೈಲುಪಾಲಾದದ್ದು ಈ ವರ್ಷ ಹೆಚ್ಚು ಸದ್ದು ಮಾಡಿತ್ತು.

ರಾಯ್ ಜಾನ್ಸ್ (ಎಡ) ಮತ್ತು ಮೈಕ್ ಟೈಸನ್ –ಎಎಫ್‌ಪಿ ಚಿತ್ರ

ಅಥ್ಲೆಟಿಕ್ಸ್‌ಗೆ ಸಂಬಂಧಿಸಿದ ವಿಶ್ವದ ಎಲ್ಲೂ ದೊಡ್ಡ ಕೂಟಗಳು ಈ ವರ್ಷ ನಡೆಯಲಿಲ್ಲ. ಈ ನಡುವೆ ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ಗೆ ಅಧ್ಯಕ್ಷರಾಗಿ ಆದಿಲ್‌ ಸುಮರಿವಾಲಾ ಹಿರಿಯ ಉಪಾಧ್ಯಕ್ಷೆಯಾಗಿಅಂಜು ಬಾಬಿ ಜಾರ್ಜ್‌ ಆಯ್ಕೆಯಾದರು.

ಭಾರತದ ದೀರ್ಘ ದೂರದ ಓಟಗಾರ ಮುರಳಿ ಕುಮಾರ್‌ ಗವಿತ್‌ ಅವರು ಏಷ್ಯನ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಕಂಚಿನ ಪದಕಕ್ಕೆ ಬೆಳ್ಳಿಯ ಹೊಳಪು ಮೂಡಿತು. ಬೆಳ್ಳಿ ಪದಕ ಗಳಿಸಿದ್ದ ಬಹರೇನ್‌ನ ಹಸನ್‌ ಚಾನಿ, ಅನರ್ಹಗೊಂಡ ಕಾರಣ ಮುರಳಿಗೆ ಬೆಳ್ಳಿ ಒಲಿಯಿತು. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಿಶ್ರ ರಿಲೆ ತಂಡವು ಗೆದ್ದಿದ್ದ ಬೆಳ್ಳಿ ಪದಕಕ್ಕೆ ಚಿನ್ನದ ಹೊಳಪು ತುಂಬಿದ್ದೂ ಇದೇ ವರ್ಷ. ಚಿನ್ನ ಗೆದ್ದಿದ್ದ ಬಹರೇನ್ ತಂಡದ ಓಟಗಾರ್ತಿ ಕೆಮಿ ಅಡೆಕೊಯಾ ಅನರ್ಹಗೊಂಡ ಕಾರಣ ಭಾರತ ತಂಡವು ಅಗ್ರಸ್ಥಾನಕ್ಕೆ ಬಡ್ತಿ ಪಡೆಯಿತು.

ಒಲಿಂಪಿಕ್ಸ್‌ಗೆ ಬ್ರೇಕ್‌ ಡ್ಯಾನ್ಸ್‌ ಮತ್ತು ಖೇಲೊ ಇಂಡಿಯಾಗೆ ಮಲ್ಲಕಂಬ, ಕಳರಿಪಯಟ್ಟ್, ಘಾತ್ಕಾ, ತಾಂಗ್ತಾ ಕ್ರೀಡೆಗಳನ್ನು ಸೇರ್ಪಡೆ ಮಾಡಲಾಯಿತು.

ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಿಶ್ರ ರಿಲೇ ತಂಡ –ಪಿಟಿಐ ಚಿತ್ರ

ಧೋನಿ ಗುಡ್‌ಬೈ
ಭಾರತ ತಂಡಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್‌ ಜಯಿಸಿಕೊಟ್ಟ ನಾಯಕ ಮಹೇಂದ್ರಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

2014ರಲ್ಲಿಯೇ ಅವರು ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದರು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಂತರ ಅವರು ಭಾರತ ತಂಡಕ್ಕೆ ಮರಳಿರಲಿಲ್ಲ. ಹೋದ ಆಗಸ್ಟ್‌ 15ರಂದು ಸಂಜೆ ಟ್ವಿಟರ್‌ ಮೂಲಕ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು. ಭಾರತ ತಂಡವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ ಕೂಲ್ ಕ್ಯಾಪ್ಟನ್ ಜೊತೆಗೆ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದರು.

ವಿರಾಟ್‌ ಕೊಹ್ಲಿ ಹಾಗೂ ಎಂ.ಎಸ್‌.ಧೋನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT