ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಜ್ಯೋತಿ ಯಾತ್ರೆಯಲ್ಲಿ ಕೋವಿಡ್ ಪತ್ತೆ

Last Updated 22 ಏಪ್ರಿಲ್ 2021, 13:30 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಆಯೋಜಕರು ಗುರುವಾರ ತಿಳಿಸಿದ್ದಾರೆ. ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪತ್ತೆಯಾದ ಮೊದಲ ಸೋಂಕಿನ ಪ್ರಕರಣ ಇದಾಗಿದೆ.

ಇದೇ 17ರಂದು ನಡೆದ ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಯಲ್ಲಿ ಕರ್ತವ್ಯ ಮುಗಿದ ಮರುದಿನ ಸೋಂಕು ಕಾಣಿಸಿಕೊಂಡಿದೆ. 30 ವರ್ಷದ ಪೊಲೀಸ್ ಜ್ಯೋತಿಯಾತ್ರೆಯ ನೈರುತ್ಯ ಕಗಾವ ಪ್ರಾಂತ್ಯದ ಲೆಗ್‌ನಲ್ಲಿ ವಾಹನ ಸಂಚಾರ ನಿಯಂತ್ರಣಕ್ಕೆ ನಿಯೋಜನೆಗೊಂಡಿದ್ದರು. ಕರ್ತವ್ಯ ಮುಗಿಸಿದ ನಂತರ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿತ್ತು.

ಆ ವ್ಯಕ್ತಿ ಮಾಸ್ಕ್ ಧರಿಸಿಕೊಂಡಿದ್ದರು. ಅಂತರ ಕಾಯ್ದುಕೊಂಡೇ ಕರ್ತವ್ಯ ನಿರ್ವಹಿಸಿದ್ದರು. ಆದರೂ ಸೋಂಕು ಕಾಣಿಸಿಕೊಂಡಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಕೋವಿಡ್ ಆತಂಕದ ನಡುವೆಯೇ ಮಾರ್ಚ್ 25ರಂದು ಫುಕುಶಿಮಾ ಪ್ರಾಂತ್ಯದಲ್ಲಿ ಜ್ಯೋತಿಯಾತ್ರೆ ಆರಂಭಗೊಂಡಿತ್ತು. ಆದರೆ ಒಸಾಕ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಯಾತ್ರೆಯನ್ನು ನಡೆಸದಿರಲು ನಿರ್ಧರಿಸಲಾಗಿದೆ.

ಕೊರೊನಾದ ರೂಪಾಂತರಿತ ವೈರಸ್‌ ಹಾವಳಿ ಹೆಚ್ಚುತ್ತಿದ್ದಂತೆ ಈಗ ಕೈಗೊಂಡಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ಈ ಕುರಿತು ಮಾರ್ಗಸೂಚಿ ಹೊರಬೀಳಲಿದೆ. ಒಸಾಕ ಮತ್ತು ಟೋಕಿಯೊ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೂರನೇ ಬಾರಿ ತುರ್ತು ಪರಿಸ್ಥಿತಿ ಘೋಷಿಸಲು ತೀರ್ಮಾನಿಸಲಾಗಿದೆ.

ಜ್ಯೋತಿಯಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಅಧಿಕಾರಿಗಳು ಸೇರಿದಂತೆ ಭಾಗವಹಿಸುವ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸುತ್ತಿದ್ದಾರೆ. ಹೀಗಾಗಿ ಜ್ಯೋತಿಯಾತ್ರೆಯ ಉಳಿದ ಲೆಗ್‌ಗಳಿಗೆ ಯಾವ ಆತಂಕವೂ ಇಲ್ಲ. ನಾಲ್ಕು ತಿಂಗಳು ನಡೆಯಲಿರುವ ಜ್ಯೋತಿಯಾತ್ರೆಯಲ್ಲಿ ಒಟ್ಟು 10 ಸಾವಿರ ಓಟಗಾರರು ಪಾಲ್ಗೊಳ್ಳುತ್ತಿದ್ದು ಜುಲೈ 23ರಂದು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT