ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್ ಮುಂದೂಡಿಕೆಗೆ ಸಂತಸ

ಅಥ್ಲೀಟ್ಸ್‌, ಫೆಡರೇಷನ್ ಅಧಿಕಾರಿಗಳಿಂದ ಸ್ವಾಗತ; ಸಾಮರ್ಥ್ಯ ವೃದ್ಧಿಸುವ ಭರವಸೆ
Last Updated 6 ಮೇ 2022, 14:32 IST
ಅಕ್ಷರ ಗಾತ್ರ

ನವದೆಹಲಿ: ಈ ವರ್ಷ ನಡೆಯಬೇಕಾಗಿದ್ದ ಏಷ್ಯನ್ ಗೇಮ್ಸ್ ಮುಂದೂಡಿರುವುದಕ್ಕೆ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಸ್ ಹಾಗೂ ಭಾರತ ಅಥ್ಲೆಟಿಕ್‌ ಫೆಡರೇಷನ್ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸೆ‍ಪ್ಟೆಂಬರ್ 10ರಿಂದ 25ರ ವರೆಗೆ ಚೀನಾದ ಹಾಂಗ್ಜುವಿನಲ್ಲಿ ಏಷ್ಯನ್ ಗೇಮ್ಸ್ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಚೀನಾದಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಕಾರಣ ಕ್ರೀಡಾಕೂಟವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲು ಏಷ್ಯಾ ಒಲಿಂಪಿಕ್ ಸಮಿತಿ ಶುಕ್ರವಾರ ನಿರ್ಧರಿಸಿತ್ತು. ಮುಂದೂಡಿಕೆಯಿಂದಾಗಿ ಅಭ್ಯಾಸಕ್ಕೆ ಹೆಚ್ಚು ಕಾಲಾವಕಾಶ ಸಿಗಲಿದ್ದು ಇದು ಸಾಮರ್ಥ್ಯ ವೃದ್ಧಿಸಲು ನೆರವಾಗಲಿದೆ ಎಂದು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ಪ್ರಮುಖ ಮೂರು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸವಾಲು ಅಥ್ಲೀಟ್‌ಗಳಲ್ಲಿ ಇತ್ತು. ಜುಲೈ 15ರಿಂದ 24ರ ವರೆಗೆ ಅಮೆರಿಕದ ಯೂಜಿನ್‌ನಲ್ಲಿ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌, ಜುಲೈ 28ರಿಂದ ಆಗಸ್ಟ್ 8ರ ವರೆಗೆ ಬರ್ಮಿಂಗ್‌ಹ್ಯಾಂನಲ್ಲಿ ಕಾಮನ್ವೆಲ್ತ್ ಗೇಮ್ಸ್, ಸೆಪ್ಟೆಂಬರ್‌ನಲ್ಲಿ ಏಷ್ಯನ್ ಗೇಮ್ಸ್‌ಗೆ ದಿನಾಂಕಗಳು ನಿಗದಿಯಾಗಿದ್ದವು. ಇದು ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳಿಗೆ ಸವಾಲಾಗಿತ್ತು. ಏಷ್ಯನ್ ಗೇಮ್ಸ್ ಮುಂದೂಡಿರುವುದರಿಂದ ಅವರ ಮೇಲಿನ ಭಾರ ಕಡಿಮೆಯಾದಂತಾಗಿದೆ.

‘ಒಂದು ವರ್ಷದಲ್ಲಿ ಒಬ್ಬ ಅಥ್ಲೀಟ್ ಹಲವು ಬಾರಿ ಗರಿಷ್ಠ ಸಾಧನೆ ತೋರಲು ಸಾಧ್ಯವಿಲ್ಲ. ಮೂರು ಕೂಟಗಳು ಜೊತೆಜೊತೆಯಾಗಿ ಬಂದರೆ ಕ್ರೀಡಾಪಟುಗಳ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಏಷ್ಯನ್ ಗೇಮ್ಸ್ ಮುಂದೂಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ಭಾರತ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಆದಿಲೆ ಸುಮರಿವಾಲ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿಭಾರತಕ್ಕೆ ಈ ವರೆಗೆ ಹೆಚ್ಚು ಪದಕಗಳು ಬಂದಿವೆ. ಭಾರತ ಒಟ್ಟಾರೆ ಗಳಿಸಿರುವ 672 ಪದಕಗಳ ಪೈಕಿ 254 ಪದಕಗಳು ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಲಭಿಸಿವೆ. ಇಂಡೊನೇಷ್ಯಾದಲ್ಲಿ 2018ರಲ್ಲಿ ನಡೆದಿದ್ದ ಕೂಟದಲ್ಲಿ ದೇಶಕ್ಕೆ ಒಟ್ಟು 70 ಪಕದಗಳು ಬಂದಿದ್ದವು. ಈ ಪೈಕಿ 20 ಅಥ್ಲೆಟಿಕ್ಸ್‌ನ ಕೊಡುಗೆಯಾಗಿತ್ತು. 8 ಚಿನ್ನ, 9 ಬೆಳ್ಳಿ ಮತ್ತು 3 ಕಂಚಿನ ಪದಕಗಳು ಆ ವರ್ಷ ಬಂದಿದ್ದವು.

‘ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್‌ಗೆ ಸಜ್ಜಾಗಿದ್ದರು. ಆದರೂ ಕ್ರೀಡಾಕೂಟ ಮುಂದೂಡಿರುವುದರಿಂದ ಅವರ ಒತ್ತಡ ಕಡಿಮೆಯಾಗಿದೆ’ ಎಂದು ಭಾರತದ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಹೇಳಿದರು. ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಎಂ.ಶ್ರೀಶಂಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಈಗ, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಒತ್ತು ನೀಡಲು ಪ್ರಯತ್ನಿಸಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT