ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ ಇಂಗ್ಲೆಂಡ್‌ ಟೂರ್ನಿ ಲಕ್ಷ್ಯ ಸೇನ್‌ ಪರಾಭವ

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ತ್ರಿಶಾ–ಗಾಯತ್ರಿ
Last Updated 17 ಮಾರ್ಚ್ 2023, 0:07 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಂ: ಭಾರತದ ಲಕ್ಷ್ಯ ಸೇನ್‌ ಅವರು ಇಲ್ಲಿ ನಡೆಯುತ್ತಿರುವ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಲಕ್ಷ್ಯ 13–21, 15–21 ರಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್‌ ಆ್ಯಂಟನ್ಸೆನ್‌ ಕೈಯಲ್ಲಿ ಸೋತರು.

ಗಾಯದಿಂದ ಚೇತರಿಸಿಕೊಂಡ ಬಳಿಕ ಹಳೆಯ ಲಯ ಕಂಡುಕೊಳ್ಳಲು ವಿಫಲರಾಗಿರುವ ಸೇನ್‌ ಅವರು 52 ನಿಮಿಷಗಳ ಹೋರಾಟದಲ್ಲಿ ಎದುರಾಳಿಗೆ ಶರಣಾದರು.

ಮೊದಲ ಗೇಮ್‌ ಸುಲಭದಲ್ಲಿ ಕಳೆದುಕೊಂಡ ಲಕ್ಷ್ಯ ಅವರು ಎರಡನೇ ಗೇಮ್‌ನ ಆರಂಭದಲ್ಲಿ ಮರುಹೋರಾಟದ ಸೂಚನೆ ನೀಡಿದರು. ಕೆಲವೊಂದು ಪ್ರಬಲ ಸ್ಮ್ಯಾಷ್‌ ಮತ್ತು ಚಾಣಾಕ್ಷ ರಿಟರ್ನ್‌ಗಳ ಮೂಲಕ 11–5 ರಲ್ಲಿ ಮುನ್ನಡೆ ಸಾಧಿಸಿದರು. ಈ ವೇಳೆ ಸತತ ಐದು ಪಾಯಿಂಟ್ಸ್ ಗಳಿಸಿದ ಆ್ಯಂಟನ್ಸೆನ್‌ ಹಿನ್ನಡೆಯನ್ನು 10–11ಕ್ಕೆ ತಗ್ಗಿಸಿದರು.

ಒತ್ತಡಕ್ಕೆ ಒಳಗಾದ ಲಕ್ಷ್ಯ ಅವರು ಹಿನ್ನಡೆ ಅನುಭವಿಸಿದರು. ಆ ಬಳಿಕ ಪುಟಿದೆದ್ದು ನಿಲ್ಲಲು ವಿಫಲರಾದರು. ಸಾಕಷ್ಟು ಸ್ವಯಂಕೃತ ತಪ್ಪುಗಳು ಭಾರತದ ಆಟಗಾರನಿಗೆ ಮುಳುವಾಗಿ ಪರಿಣಮಿಸಿದವು.

ಕ್ವಾರ್ಟರ್‌ ಫೈನಲ್‌ಗೆ ತ್ರಿಶಾ–ಗಾಯತ್ರಿ: ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌ ಅವರ ಗೆಲುವಿನ ಓಟ ಮುಂದುವರಿದಿದ್ದು, ಮಹಿಳೆಯರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಭಾರತದ ಜೋಡಿ 21–14, 24–22 ರಲ್ಲಿ ಜಪಾನ್‌ನ ಯೂಕಿ ಫುಕುಶಿಮ– ಸಯಾಕ ಹಿರೋಟ ವಿರುದ್ಧ ಗೆದ್ದಿತು. ಮೊದಲ ಗೇಮ್‌ ನಿರಾಯಾಸವಾಗಿ ಗೆದ್ದ ತ್ರಿಶಾ– ಗಾಯತ್ರಿ ಜೋಡಿಗೆ, ಎರಡನೇ ಗೇಮ್‌ನಲ್ಲಿ ಭಾರಿ ಪೈಪೋಟಿ ಎದುರಾಯಿತು. ಈ ಪಂದ್ಯ 50 ನಿಮಿಷ ನಡೆಯಿತು.

ಸಾತ್ವಿಕ್‌–ಚಿರಾಗ್‌ಗೆ ನಿರಾಸೆ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿತು.

ಚೀನಾದ ಲಿಯಾಂಗ್ ವೀ ಕೆಂಗ್‌– ವಾಂಗ್‌ ಚಾಂಗ್‌ ಜೋಡಿ 10–21, 21–17, 21–19 ರಲ್ಲಿ ಭಾರತದ ಜೋಡಿಯನ್ನು ಮಣಿಸಿತು. ಮೊದಲ ಗೇಮ್‌ ಜಯಿಸಿದ್ದ ಸಾತ್ವಿಕ್‌–ಚಿರಾಗ್‌ ಆ ಬಳಿಕ ಲಯ ಕಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT