ಶುಕ್ರವಾರ, ಜುಲೈ 1, 2022
21 °C

ತರಬೇತಿ ಶಿಬಿರಕ್ಕೆ ಹಾಜರಾಗದಿರಲು ಅಮಲ್‌ರಾಜ್ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೋನೆಪತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೇಬಲ್ ಟೆನಿಸ್ ತಂಡದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳದೇ ಇರಲು ಅನುಭವಿ ಆಟಗಾರ ಅಂಥೋಣಿ ಅಮಲ್‌ರಾಜ್ ನಿರ್ಧರಿಸಿದ್ದಾರೆ. ಕೋವಿಡ್–19ರಿಂದ ಬಳಲುತ್ತಿದ್ದ ಅವರು ಚೇತರಿಸಿಕೊಂಡಿದ್ದಾರೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಕಣಕ್ಕೆ ಇಳಿಯದೇ ಇರಲು ತೀರ್ಮಾನಿಸಿದ್ದಾರೆ.

2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದ ಅಮಲ್‌ರಾಜ್ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಕೋವಿಡ್–19 ಬಾಧಿಸಿದ್ದರಿಂದ ಅವರನ್ನು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ತಂದೆ–ತಾಯಿಗೂ ಸೋಂಕು ತಗುಲಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕ್ಟೋಬರ್ 25ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

’ಆಸ್ಪತ್ರೆಯಲ್ಲಿದ್ದ ಒಂದು ವಾರ ನನ್ನ ಬದುಕಿನ ಅತ್ಯಂತ ಕೆಟ್ಟ ದಿನಗಳಾಗಿದ್ದವು. ಅದೃಷ್ಟವಶಾತ್ ನಾನು ಮತ್ತು ಪಾಲಕರು ಬೇಗನೇ ಗುಣಮುಖರಾದೆವು. ಅಪಾಯದಿಂದ ಪಾರು ಮಾಡಿದ ದೇವರಿಗೆ ಕೈಮುಗಿಯುತ್ತೇವೆ. ತರಬೇತಿಗೆ ಈಗ ತುರ್ತು ಇಲ್ಲ. ಆದ್ದರಿಂದ ನಿಧಾನವಾಗಿ ತಂಡವನ್ನು ಸೇರುತ್ತೇನೆ. ಕನಿಷ್ಠ ಒಂದು ತಿಂಗಳು ಮನೆಯಲ್ಲೇ ಇರಲು ಬಯಸಿದ್ದೇನೆ‘ ಎಂದು 34 ವರ್ಷದ ಅಮಲ್‌ರಾಜ್ ಹೇಳಿದ್ದಾರೆ.

‘ಎದೆಯಲ್ಲಿ ಯಾವುದೋ ಸೋಂಕು ಇದೆ. ಆದ್ದರಿಂದ ಕೆಲವು ವಾರ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸದ್ಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ. ಶೇಕಡಾ ನೂರರಷ್ಟು ಆರೋಗ್ಯವಾಗಿದ್ದೇನೆ ಎಂದು ಖಚಿತವಾದ ನಂತರವೇ ಮುಂದಿನ  ನಿರ್ಧಾರ ಕೈಗೊಳ್ಳಲಾಗುವುದು‘ ಎಂದು ಅವರು ವಿವರಿಸಿದರು.

ಆರು ತಿಂಗಳು ಹೊರಗೆ ಇಳಿಯದೇ ಇದ್ದ ಭಾರತದ ಟೇಬಲ್ ಟೆನಿಸ್ ತಂಡ 42 ದಿನಗಳ ಶಿಬಿರಕ್ಕಾಗಿ ಸೋನೆಪತ್‌ನಲ್ಲಿ ಸೇರಿದ್ದಾರೆ. ಶರತ್ ಕಮಲ್ ತಂಡದ ನೇತೃತ್ವ ವಹಿಸಿದ್ದಾರೆ. ಯುರೋಪ್‌ನಲ್ಲಿರುವ ಜಿ.ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಇನ್ನೂ ಭಾರತಕ್ಕೆ ಬರಬೇಕಷ್ಟೆ. ಭಾರತ ಟೇಬಲ್ ಟೆನಿಸ್ ಫೆಡರೇಷನ್‌ನ ಹಿರಿಯ ಉಪಾಧ್ಯಕ್ಷ ಎಸ್‌.ಎಂ.ಸುಲ್ತಾನ್ ಕಳೆದ ವಾರ ಕೋವಿಡ್‌–19ಕ್ಕೆ ತುತ್ತಾಗಿದ್ದರು. ಅವರ ತಾಯಿ ಮತ್ತು ಪತ್ನಿ ಸೋಂಕಿನಿಂದ ಸಾವಿಗೀಡಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು