ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ವಿನೇಶಾ, ಅನ್ಶು ಮಲಿಕ್‌

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನದ ಪದಕದ ಸುತ್ತಿಗೆ ಸಾಕ್ಷಿ
Last Updated 16 ಏಪ್ರಿಲ್ 2021, 12:24 IST
ಅಕ್ಷರ ಗಾತ್ರ

ಆಲ್ಮಾಟಿ, ಕಜಕಸ್ತಾನ: ಅಮೋಘ ಸಾಮರ್ಥ್ಯ ತೋರಿದ ಭಾರತದ ವಿನೇಶಾ ಪೋಗಟ್‌, ಅನ್ಶು ಮಲಿಕ್ ಹಾಗೂ ಸಾಕ್ಷಿ ಮಲಿಕ್‌ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶಾ, ಚೀನಾ ಹಾಗೂ ಜಪಾನ್‌ನ ಎದುರಾಳಿಗಳು ಇಲ್ಲದ ಕಣದಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಒಂದೂ ಪಾಯಿಂಟ್‌ ಕೈಚೆಲ್ಲದೆ ಫೈನಲ್ ತಲುಪಿರುವ ಅವರು, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಚಿನ್ನ ಗೆಲ್ಲುವ ಛಲದಲ್ಲಿದ್ದಾರೆ.

ಏಷ್ಯನ್‌ ಕೂಟಗಳಲ್ಲಿ ವಿನೇಶಾ ಇದುವರೆಗೆ ಏಳು ಬಾರಿ ‘ಪೋಡಿಯಂ ಫಿನಿಶ್‌‘ ಮಾಡಿದ್ದು, ಮೂರು ಬಾರಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಶುಕ್ರವಾರ ಸೆಮಿಫೈನಲ್‌ ಬೌಟ್‌ನಲ್ಲಿ ಅವರು ಎದುರಿಸಬೇಕಿದ್ದ ಕೊರಿಯಾದ ಹ್ಯೂನ್‌ಯಂಗ್‌ ಗಾಯದ ಕಾರಣ ಹಿಂದೆ ಸರಿದರು. ಇದಕ್ಕೂ ಮೊದಲು ಎರಡು ಸುತ್ತುಗಳಲ್ಲಿ ವಿನೇಶಾ, ಮಂಗೋಲಿಯಾದ ಒಟ್‌ಗೊನ್ಜಾರ್ಗಲ್‌ ಗನ್‌ಬಾತರ್‌ ಹಾಗೂ ತೈಪೇಯ ಮೆಂಗ್ ಸೂನ್‌ ಶೇಹ್ ಎದುರು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆದ್ದಿದ್ದರು.

ಹೋದ ವರ್ಷ ದೆಹಲಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ವಿನೇಶಾ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇಲ್ಲಿ ನಡೆಯುವ ಫೈನಲ್‌ನಲ್ಲಿ ಅವರು ಮೆಂಗ್ ಸೂನ್ ಶೇಹ್ ಅವರನ್ನು ಎದುರಿಸುವರು.

19 ವರ್ಷದ ಅನ್ಶು (57 ಕೆಜಿ) ಕೂಡ ತಮ್ಮ ಲಯವನ್ನು ಮುಂದುವರಿಸಿದರು. ಮೊದಲ ಎರಡು ಬೌಟ್‌ಗಳಲ್ಲಿ ಅವರು ಕ್ರಮವಾಗಿ ಉಜ್ಬೆಕಿಸ್ತಾನದ ಸೆವಾರ ಈಶ್ಮುರತೊವಾ ಮತ್ತು ಕಿರ್ಗಿಸ್ತಾನದ ನಾಜಿರಾ ಮಾರ್ಸ್‌ಬೆಕ್‌ ಕಿಜಿ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ಸೆಮಿಫೈನಲ್‌ನಲ್ಲಿ ಮಂಗೋಲಿಯಾದ ಬ್ಯಾಟ್ಸೆಟ್ಸೆಗ್‌ ಅಟ್ಲಾಂಟಸೆಟ್ಸ್‌ಗ್‌ ಎದುರು ಅನ್ಶು 9–1ರಿಂದ ಮುನ್ನಡೆಯಲ್ಲಿದ್ದರು. ಈ ಸಂದರ್ಭದಲ್ಲಿ ರೆಫರಿಗಳು ಮೂರು ಬಾರಿ ಮಂಗೋಲಿಯಾ ಪಟುವಿಗೆ ‘ಎಚ್ಚರಿಕೆ‘ಗಳನ್ನು ನೀಡಿದ್ದರು. ಹೀಗಾಗಿ ಅನ್ಶು ಅವರಿಗೆ ‘ಎಚ್ಚರಿಕೆ ಆಧಾರದಲ್ಲಿ ಜಯ‘ ಘೋಷಿಸಲಾಯಿತು. ಫೈನಲ್‌ನಲ್ಲಿ ಇದೇ ಎದುರಾಳಿಗೆ ಅನ್ಶು ಮುಖಾಮುಖಿಯಾಗಲಿದ್ದಾರೆ.

65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಸಾಕ್ಷಿ ಮಲಿಕ್ ಕೂಡ ಚಿನ್ನದ ಪದಕದ ಸುತ್ತಿಗೆ ಕಾಲಿಟ್ಟರು. ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಅವರಿಗೆ, ಮೊದಲ ಎರಡು ಬೌಟ್‌ಗಳಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಒಲಿಯಿತು. ಸೆಮಿಫೈನಲ್‌ನಲ್ಲಿ ಅವರ ಎದುರು ಕಣಕ್ಕಿಳಿದಿದ್ದ ಕೊರಿಯಾದ ಹಾನ್‌ಬಿಟ್‌ ಲೀ 0–3ರ ಹಿನ್ನಡೆಯಲ್ಲಿದ್ದಾಗ ಮೊಣಕಾಲು ನೋವಿನ ಕಾರಣ ಹಿಂದೆ ಸರಿದರು. ಫೈನಲ್‌ನಲ್ಲಿ ಸಾಕ್ಷಿ, ಮಂಗೋಲಿಯಾದ ಬೊಲೊರ್ಟ್‌ವುಂಗಲಾಗ್‌ ಜೊರಿಟ್ ಎದುರು ಸ್ಪರ್ಧಿಸುವರು.

ದಿವ್ಯಾ ಕಾಕ್ರನ್‌ (72 ಕೆಜಿ ವಿಭಾಗ) ಕೂಡ ಮೂರನೇ ಸುತ್ತಿಗೆ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT