ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌ಗೆ ಸಾಕ್ಷಿ, ವಿನೇಶಾ

ಕುಸ್ತಿ ಟ್ರಯಲ್ಸ್‌: ಅನ್ಶು ಮಲಿಕ್, ದಿವ್ಯಾ ಕಕ್ರಾನ್‌ಗೆ ಗೆಲುವು; ಸೋನಮ್‌ಗೆ ಸೋಲು
Last Updated 16 ಮೇ 2022, 13:01 IST
ಅಕ್ಷರ ಗಾತ್ರ

ಲಖನೌ: ಬದ್ಧ ವೈರಿ ಸೋನಮ್ ಮಲಿಕ್ ವಿರುದ್ಧ ಕೊನೆಗೂ ಸಾಕ್ಷಿ ಮಲಿಕ್ ಗೆಲುವು ಸಾಧಿಸಿದರು. ಮನೀಷಾ ಎದುರು ಕೂಡ ಜಯ ಗಳಿಸಿದ ಸಾಕ್ಷಿ, ಕಾಮನ್‌ವೆಲ್ತ್ ಗೇಮ್ಸ್‌ನ ಕುಸ್ತಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು.

ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸಾಕ್ಷಿ ಮಲಿಕ್ 8–1ರಲ್ಲಿ ಸೋನಮ್ ವಿರುದ್ಧ ಗೆದ್ದರು. ಭಾರತ ಕುಸ್ತಿ ಫೆಡರೇಷನ್‌ ಈ ಹಿಂದೆ ನಡೆಸಿದ ಆಯ್ಕೆ ಟ್ರಯಲ್ಸ್‌ಗಳಲ್ಲಿ ಮುಖಾಮುಖಿಯಾದಾಗಲೆಲ್ಲ ಸೋನಮ್ ಜಯ ಸಾಧಿಸಿದ್ದರು. ಹೀಗಾಗಿ ಸೋಮವಾರದ ಸೆಮಿಫೈನಲ್‌ ಬೌಟ್ ಕುತೂಹಲ ಕೆರಳಿಸಿತ್ತು. ಎಡಗಾಲಿನಲ್ಲಿ ಕಾಣಿಸಿಕೊಂಡಿದ್ದ ಗಾಯದಿಂದ ಚೇತರಿಸಿಕೊಂಡಿರುವ ಸೋನಮ್‌ ಅವರ ಪಟ್ಟುಗಳು ಒಲಿಂಪಿಕ್ಸ್‌ನಲ್ಲಿ ಕಂಚು ಗಳಿಸಿರುವ ಸಾಕ್ಷಿ ಎದುರು ಫಲ ನೀಡಲಿಲ್ಲ.

ನಂತರ ನಡೆದ ಫೈನಲ್‌ ಬೌಟ್‌ನಲ್ಲಿ ಮನೀಷಾ ವಿರುದ್ಧ ಸಾಕ್ಷಿ 7–1ರ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಮನೀಷಾ 7–5ರಲ್ಲಿ ಬಜರಂಗ್‌ ಪೂನಿಯಾ ಅವರ ಪತ್ನಿ ಸಂಗೀತಾ ಪೋಗಟ್‌ ಎದುರು ಜಯ ಗಳಿಸಿದ್ದರು.

53 ಕೆಜಿ ವಿಭಾಗದಲ್ಲಿ ವಿನೇಶಾ ಪೋಗಟ್ ಕೂಟ ಆಯ್ಕೆಯಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಂತರ ಉತ್ತಮ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗಿದ್ದ ವಿನೇಶಾ ಫೈನಲ್ ವರೆಗೂ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ಮುನ್ನುಗ್ಗಿದ್ದರು.

ಅಂಟಿಮ್ ಎದುರಿನ ಫೈನಲ್‌ನಲ್ಲಿ 0–3 ಹಿನ್ನಡೆಯಲ್ಲಿದ್ದ ಅವರು ನಂತರ ಚೇತರಿಸಿಕೊಂಡು ಗೆಲುವಿನ ನಗೆ ಸೂಸಿದರು. ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ವಿನೇಶಾ ಅವರನ್ನು ಅಶಿಸ್ತು ತೋರಿದ ಆರೋಪದ ಹಿನ್ನೆಲೆಯಲ್ಲಿ ಕುಸ್ತಿ ಫೆಡರೇಷನ್ ಅಮಾನತು ಮಾಡಿತ್ತು. ಅಮಾನತು ಹಿಂತೆಗೆದ ನಂತರ ಖಿನ್ನತೆಯಿಂದ ಬಳಲಿದ್ದರು. ಆಗಸ್ಟ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರಲಿಲ್ಲ.

57 ಕೆಜಿ ವಿಭಾಗದಲ್ಲಿ ಅನ್ಶು ಮಲಿಕ್ ಮತ್ತು 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಜಯ ಗಳಿಸಿದರು. 50 ಕೆಜಿ ವಿಭಾಗದಲ್ಲಿ ಪೂಜಾ ಗೆಹಲೋತ್ ಮತ್ತು 76 ಕೆಜಿ ವಿಭಾಗದಲ್ಲಿ ಪೂಜಾ ಸಿಹಾಗ್ ಜಯ ಸಾಧಿಸಿದರು. ಪುರುಷರ ವಿಭಾಗದ ಟ್ರಯಲ್ಸ್‌ ಮಂಗಳವಾರ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT