ಮಂಗಳವಾರ, ನವೆಂಬರ್ 19, 2019
23 °C

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿನೇಶಾ ಪೋಗಟ್‌: ಹೊಸ ದಾಖಲೆ ಸೃಷ್ಟಿ

Published:
Updated:
Prajavani

ನೂರ್‌ ಸುಲ್ತಾನ್, ಕಜಕಸ್ತಾನ: ವಿನೇಶಾ ಪೋಗಟ್ ಟೊಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಗಿಟ್ಟಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಕುಸ್ತಿಪಟುವಾದರು.

ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 53 ಕೆಜಿ ವಿಭಾಗದ ರಿಪೇಚ್‌ನಲ್ಲಿ ಎರಡು ಸುತ್ತುಗಳನ್ನು ಗೆದ್ದು ಈ ಅರ್ಹತೆ ಗಳಿಸಿದರು.

ವಿನೇಶಾ ಅವರು ಅರ್ಹತಾ ವಿಭಾಗದ ಎರಡನೇ ಸುತ್ತಿನಲ್ಲಿ ಜಪಾನ್‌ನ ಮಕೈಡಾ ವಿರುದ್ಧ ಸೋತಿದ್ದರು. ಸೆಮಿಫೈನಲ್‌ನಲ್ಲಿ ಗೆದ್ದ ಮಕೈಡಾ ಫೈನಲ್ ತಲುಪಿದ್ದರಿಂದ ವಿನೇಶಾ ಅವರಿಗೆ ರಿಪೇಚ್‌ ವಿಭಾಗ ಪ್ರವೇಶಿಸಿದರು. ಅದರಲ್ಲಿರುವ ಎಲ್ಲ ಮೂರು ಸುತ್ತುಗಳಲ್ಲಿ ಗೆದ್ದರೆ ಕಂಚು ಅಥವಾ ಎರಡರಲ್ಲಿ ಗೆದ್ದರೆ ಒಲಿಂಪಿಕ್ಸ್‌ ಪಡೆಯುವ ಅವಕಾಶ ಅವರಿಗೆ ಇತ್ತು. ಇದೀಗ ಎರಡು ಸುತ್ರುಗಳಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದು ಸುತ್ತಿನಲ್ಲಿ ಅವರು ಗ್ರೀಸ್‌ನ ಮರಿಯಾ ಪ್ರಿವಲರಾಕಿ ವಿರುದ್ಧ ಜಯಿಸಿದರೆ ಕಂಚು ಪಡೆಯಲಿದ್ಧಾರೆ.

ಬುಧವಾರ ನಡೆದ ಮೊದಲ ರಿಪೇಚ್‌ ಸುತ್ತಿನಲ್ಲಿ ವಿನೇಶಾ 5–0ಯಿಂದ ಉಕ್ರೇನ್‌ನ ಯೂಲಿಯಾ ಖಾವಾಲ್ಜೈ ಬ್ಲಾಹಿನ್ಯಾ ವಿರುದ್ಧ ಗೆದ್ದರು. ಯೂಲಿಯಾ ಅವರು ಹೆಚ್ಚು ಹೆಡ್‌ಲಾಕ್‌ ಮಾಡುವತ್ತ ಚಿತ್ತ ನೆಟ್ಟರು. ಅದರೆ ವಿನೇಶಾ ತಮ್ಮ ಚುರುಕಾದ ಚಲನೆಯ ಮೂಲಕ ಸ್ವರಕ್ಷಣೆ ಮಾಡಿಕೊಂಡರು. ಅಷ್ಟೇ ಅಲ್ಲ. ಡಬಲ್ ಲೆಗ್‌ ದಾಳಿ ಮಾಡಿ ಪಾಯಿಂಟ್‌ಗಳನ್ನು ಹೆಕ್ಕಿದರು. ಇದರಿಂದಾಗಿ ಒತ್ತಡಕ್ಕೊಳಗಾದ ಉಕ್ರೇನ್ ಕುಸ್ತಿಪಟು ಶರಣಾದರು.

ಎರಡನೇ ರಿಪೇಚ್‌ನಲ್ಲಿ ಬುಧವಾರ ಅವರು ವಿಶ್ವದ ಅಗ್ರಶ್ರೇಯಾಂಕದ ಕುಸ್ತಿಪಟು ಸಾರಾ ಯಾನ್ ಹೈಲ್ಡ್‌ಬ್ರ್ಯಾಂಡ್ ಅವರನ್ನು ಮಣಿಸಿದರು. ಅಮೋಘವಾದ ರಕ್ಷಣಾತ್ಮಕ ಪಟ್ಟುಗಳನ್ನು ಹಾಕಿದ ವಿನೇಶಾ ಎದುರಾಳಿಯನ್ನು ಮಣಿಸಿದರು. ವಿನೇಶಾ 8–2 ಪಾಯಿಂಟ್‌ಗಳಿಂದ ಗೆದ್ದರು. ಈ ಸೆಣಸಾಟದ ಆರಂಭದಲ್ಲಿ ಸಾರಾ 2–0ಯಿಂದ ಮುನ್ನಡೆ ಪಡೆದುಕೊಂಡರು. ಅವರು ಡಬಲ್‌ ಲೆಗ್‌ ದಾಳಿಯ ಮೂಲಕ ಈ ಪಾಯಿಂಟ್‌ಗಳನ್ನು ಗಳಿಸಿದರು. ಅಮೆರಿಕದ ಸಾರಾ ಅವರು ಮೂರು ಬಾರಿ ವಿನೇಶಾ ಅವರ ಬಲಗಾಲನ್ನು ಹಿಡಿದೆಳೆದು ಚಿತ್ ಮಾಡಲು ಪ್ರಯತ್ನಿಸಿದರು. 

ಆದರೆ ಹರಿಯಾಣದ ಹುಡುಗಿ ವಿನೇಶಾ ಜಿಗುಟುತನದ ಪ್ರತಿರೋಧ ಒಡ್ಡಿದರು. ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ ಸಾರಾ ಅವರ ತಂತ್ರಗಳನ್ನು ವಿಫಲಗೊಳಿಸಿದರು.

ಸೀಮಾಗೆ ನಿರಾಶೆ: ಭಾರತದ ಸೀಮಾ ಬಿಸ್ಲಾ ಅವರು 50 ಕೆ.ಜಿ. ವಿಭಾಗದಲ್ಲಿ 3–11ರಿಂದ ರಷ್ಯಾದ ಎಕತೆರಿನಾ ಪೊಲೇಷ್‌ಚುಕ್ ವಿರುದ್ಧ ಸೋತರು. ಇದರೊಂದಿಗೆ ಅವರ ಒಲಿಂಪಿಕ್ಸ್‌ ಕನಸು ಕಮರಿತು.

76 ಕೆ.ಜಿ. ವಿಭಾಗದಲ್ಲಿ ಕಿರಣ್ ಅತಿಯಾದ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿ ಆಘಾತ ಅನುಭವಿಸಿದರು.  ಜರ್ಮನಿಯ ಅಲೈನ್ ರಾಟರ್‌ ಎದುರು ಅವರು ಆರಂಭದಲ್ಲಿ 4–0ಯಿಂದ ಮುನ್ನಡೆ ಪಡೆದುಕೊಂಡರು. ಆದರೆ, ಎರಡನೇ ಅವಧಿಯಲ್ಲಿ ಎಡವಿದರು. ಇದರಿಂದಾಗಿ ಸತತ ಐದು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಸೋತರು.

ಪ್ರತಿಕ್ರಿಯಿಸಿ (+)