ಗುರುವಾರ , ಮಾರ್ಚ್ 23, 2023
29 °C
ಆತಿಥೇಯ ಮೈಸೂರು ರನ್ನರ್ಸ್ ಅಪ್‌

ವಾಲಿಬಾಲ್‌: ಚಾಮರಾಜನಗರ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಮಯೋಚಿತ ಆಟ ಪ್ರದರ್ಶಿಸಿದ ಚಾಮರಾಜನಗರ ಮಹಿಳಾ ತಂಡದವರು ರಾಜ್ಯಮಟ್ಟದ ವಾಲಿಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಆತಿಥೇಯ ಮೈಸೂರು ತಂಡದವರನ್ನು ಮಣಿಸಿ ಪ್ರಶಸ್ತಿ ಗೆದ್ದರು.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಭಾನುವಾರ ನಡೆದ ಚಾಂಪಿಯನ್‌ಷಿಪ್‌ನ ಅಂತಿಮ ಘಟ್ಟದ ಪಂದ್ಯದಲ್ಲಿ 25–20, 21–25, 25–23 ಹಾಗೂ 25–17ರಿಂದ ಎದುರಾಳಿ ತಂಡವನ್ನು ಮಣಿಸಿದರು. 

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದ ಮೊದಲ ಸೆಟ್‌ನಲ್ಲಿ ಚಾಮರಾಜನಗರದ ಕಾವ್ಯಾ, ದೀಪಾ ಅವರು ಅಂಕ ಹೆಚ್ಚಿಸಿಕೊಟ್ಟರು. ಪಾಸಿಂಗ್‌ನಲ್ಲಿ ನಾಯಕಿ ಎಸ್‌.ಪ್ರಿಯಾಂಕಾ ಗಮನ ಸೆಳೆದರು. ಮೈಸೂರು ತಂಡವು ಬ್ಲಾಕಿಂಗ್‌ನಲ್ಲಿ ಮಾಡಿದ ತಪ್ಪುಗಳಿಂದ ಸೆಟ್‌ ಚಾಮರಾಜನಗರದ ವಶವಾಯಿತು.

2ನೇ ಸೆಟ್‌ನಲ್ಲಿ ಪುಟಿದೇಳಿದ ಮೈಸೂರು ತಂಡವು 25–21ರಿಂದ ಮೇಲುಗೈ ಸಾಧಿಸಿತು. 21–21ರಲ್ಲಿ ಸಮಬಲವಿದ್ದಾಗ ವಿಭಾ ಅವರು ಸರ್ವ್‌ ಹಾಗೂ ಚೆಕ್‌ಔಟ್‌ ಕೌಶಲದಿಂದ ಪಂದ್ಯವನ್ನು ಮೈಸೂರಿನತ್ತ ವಾಲಿಸಿದರು.

ಸಮಬಲದ ಹೋರಾಟ: 3ನೇ ಸೆಟ್‌ನಲ್ಲಿ ಸಮಬಲದ ಹೋರಾಟ ನಡೆಯಿತು. ಮಹಿಮಾ ಹಾಗೂ ದೀಪಾ ಅವರ ಆಕರ್ಷಕ ಸರ್ವಿಂಗ್‌ ಹಾಗೂ ಬ್ಲಾಕಿಂಗ್‌ ಮೂಲಕ ಅಂಕ ಗತಿಯನ್ನು ಚಾಮರಾಜನಗರಕ್ಕೆ ಹೆಚ್ಚಿಸಿಕೊಟ್ಟರು. ರೋಚಕ ಹಣಾಹಣಿಯಲ್ಲಿ 25–23ರಿಂದ ಸೆಟ್‌ ತಮ್ಮದಾಗಿಸಿಕೊಂಡು 2–1ರ ಮುನ್ನಡೆ ಪಡೆದರು.

4ನೇ ಸೆಟ್‌ನ ಆರಂಭದಲ್ಲಿ 6–0ಯಿಂದ ಪಾರಮ್ಯ ಸಾಧಿಸಿದ್ದ ಮೈಸೂರು ತಂಡದವರು ನಂತರ ಹೆಚ್ಚು ಅಂಕ ಬಿಟ್ಟುಕೊಟ್ಟರು. 12–15 ಹಿನ್ನಡೆಯಲ್ಲಿದ್ದ ಚಾಮರಾಜನಗರ ತಂಡಕ್ಕೆ ದೀಪಾ ಆಸರೆಯಾದರು. 17–12ರ ಮುನ್ನಡೆ ತಂದುಕೊಟ್ಟರು. ಅಂತಿಮವಾಗಿ 25–17ರಿಂದ ಟ್ರೋಫಿ ಹಾಗೂ ₹ 1 ಲಕ್ಷ ನಗದು ಬಹುಮಾನವನ್ನು ಚಾಮರಾಜನಗರ ಗೆದ್ದಿತು.

ಮೂರನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಬೆಂಗಳೂರು ಉತ್ತರ ಮಹಿಳಾ ತಂಡವು ಬೆಂಗಳೂರು ದಕ್ಷಿಣ ತಂಡವನ್ನು 25–18, 25–20, 25–23ರಿಂದ ಮಣಿಸಿದರು. ಪುರುಷರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡದವರು 27–25, 25–18, 25–20ರಿಂದ ಹಾಸನ ತಂಡದವರನ್ನು ಮಣಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು