ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ – ಮಲೇಷ್ಯಾ ಪಂದ್ಯ ಡ್ರಾ

ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ಗಳಿಸಿದ ಅತೀಕ್‌
Last Updated 5 ಡಿಸೆಂಬರ್ 2018, 18:00 IST
ಅಕ್ಷರ ಗಾತ್ರ

ಭುವನೇಶ್ವರ: ಅಂತಿಮ ಕ್ವಾರ್ಟರ್‌ ವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು. ವಿಶ್ವಕಪ್ ಹಾಕಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳು 1–1ರ ಸಮಬಲಕ್ಕೆ ತೃಪ್ತಿಪಟ್ಟುಕೊಂಡವು.

ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯ ಜಿದ್ದಾಜಿದ್ದಿಯ ಹೋರಾಟಕ್ಕೆ ಸಾಕ್ಷಿಯಾಯಿತು. ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಗೋಲು ಗಳಿಸಲು ತಂಡಗಳು ವಿಫಲವಾದವು. 51ನೇ ನಿಮಿಷದಲ್ಲಿ ಅತೀಕ್ ಮೊಹಮ್ಮದ್ ಗಳಿಸಿದ ಗೋಲಿನ ಮೂಲಕ ಪಾಕಿಸ್ತಾನ ಮುನ್ನಡೆ ಸಾಧಿಸಿತು. ಹೀಗಾಗಿ ತಂಡದಲ್ಲಿ ಜಯದ ಭರವಸೆ ಮೂಡಿತ್ತು. ಆದರೆ 55ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಿಟ್ಟುಕೊಟ್ಟು ತಂಡ ಕೈಸುಟ್ಟುಕೊಂಡಿತು. ಫೈಜಲ್ ಸಾರಿ ಗೋಲು ಗಳಿಸಿ ಮಿಂಚಿದರು.

ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಈ ಹಿಂದೆ ಐದು ಬಾರಿ ಸೆಣಸಿದ್ದು ಐದರಲ್ಲೂ ಪಾಕಿಸ್ತಾನ ಗೆದ್ದಿತ್ತು. ಐದು ಪಂದ್ಯಗಳಲ್ಲಿ ಪಾಕಿಸ್ತಾನ ಒಟ್ಟು 18 ಗೋಲು ಗಳಿಸಿದ್ದರೆ ಮಲೇಷ್ಯಾ ಹೊಡೆದದ್ದು ಆರು ಗೋಲು ಮಾತ್ರ.

ಹೀಗಾಗಿ ಬುಧವಾರ ಪಾಕಿಸ್ತಾನ ತಂಡ ಭರವಸೆಯಿಂದಲೇ ಕಣಕ್ಕೆ ಇಳಿದಿತ್ತು. ಆದರೆ ಟೂರ್ನಿಯ ಮೊದಲ ಪಂದ್ಯದಲ್ಲಿ ನೀರಸ ಆಟವಾಡಿದ್ದ ಮಲೇಷ್ಯಾ ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಆರಂಭದಲ್ಲೇ ಕಂಗೆಡಿಸಿತು. ಮೊದಲ ಕ್ವಾರ್ಟರ್‌ನಲ್ಲಿ ನಿರಂತರ ಆಕ್ರಮಣ ನಡೆಸಿತು. ಐದು ಬಾರಿ ಪಾಕ್‌ ಆವರಣವನ್ನು ಪ್ರವೇಶಿಸಿತು. ಆದರೆ ತಂಡಕ್ಕೆ ಲಭಿಸಿದ ನಾಲ್ಕು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸಲು ಸಾಧ್ಯವಾಗಲಿಲ್ಲ.

ದ್ವಿತೀಯ ಕ್ವಾರ್ಟರ್‌ನಲ್ಲೂ ಮಲೇಷ್ಯಾದ ಪ್ರಾಬಲ್ಯ ಮುಂದುವರಿಯಿತು. ಇದರಿಂದ ಕಕ್ಕಾಬಿಕ್ಕಿಯಾದ ಪಾಕಿಸ್ತಾನ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿ ನಿರಾಸೆಗೊಂಡಿತು. ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲೂ ಮಲೇಷ್ಯಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಪಾಕಿಸ್ತಾನ ಆಟಗಾರರ ಬೆವರಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT