ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ: ಹಾಲಿ ಚಾಂಪಿಯನ್ ಮಣಿಸಿ ಸೆಮಿಫೈನಲ್‌ಗೆ ಭಾರತದ ಸರಿತಾ ಮೋರ್

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ನಾಲ್ಕರ ಘಟ್ಟಕ್ಕೆ ಅನ್ಶು
Last Updated 6 ಅಕ್ಟೋಬರ್ 2021, 13:34 IST
ಅಕ್ಷರ ಗಾತ್ರ

ಓಸ್ಲೊ, ನಾರ್ವೆ: ಭಾರತದ ಸರಿತಾ ಮೋರ್ ಅವರು ಹಾಲಿ ಚಾಂಪಿಯನ್ ಲಿಂಡಾ ಮೊರಾಯಿಸ್ ಅವರನ್ನು ಚಿತ್‌ ಮಾಡಿ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಹಾಕಿದ್ದಾರೆ. ಅನ್ಶು ಮಲಿಕ್ ಕೂಡ ಬುಧವಾರ ನಾಲ್ಕರ ಘಟ್ಟ ತಲುಪಿದ್ದು ಪದಕದ ಭರವಸೆ ಮೂಡಿಸಿದ್ದಾರೆ.

59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಏಷ್ಯನ್ ಚಾಂಪಿಯನ್‌ ಸರಿತಾ ಅವರಿಗೆ ಮೊದಲ ಸುತ್ತಿನಲ್ಲಿ ಕೆನಡಾದ, 2019ರ ವಿಶ್ವ ಚಾಂಪಿಯನ್‌ ಲಿಂಡಾ ಸವಾಲು ಎದುರಾಯಿತು. ಪ್ರೀಕ್ವಾರ್ಟರ್‌ಫೈನಲ್ ಹಂತದ ಈ ಹಣಾಹಣಿಯಲ್ಲಿ ಸರಿತಾ 8–2ರಿಂದ ಲಿಂಡಾ ಅವರಿಗೆ ಸೋಲುಣಿಸಿದರು.

ಕೆನಡಾ ಕುಸ್ತಿಪಟು ಎದುರಿನ ಸೆಣಸಾಟದಲ್ಲಿ ಸರಿತಾ ಸಂಪೂರ್ಣ ಪಾರಮ್ಯ ಮೆರೆದರು. ಮೊದಲಾರ್ಧದಲ್ಲೇ 7–0ಯಿಂದ ಮುನ್ನಡೆದರು. ಚುರುಕಿನ ನಡೆಗಳು ಹಾಗೂ ಉತ್ತಮ ಡಿಫೆನ್ಸ್ ಮೂಲಕ ಎದುರಾಳಿಯನ್ನು ‘ಲಾಕ್‘ ಮಾಡಿದರು. ದ್ವಿತೀಯಾರ್ಧದಲ್ಲಿ ಲಿಂಡಾ ಅವರಿಗೆ ಕೇವಲ ಒಂದು ಪಾಯಿಂಟ್ ಬಿಟ್ಟುಕೊಟ್ಟರು.

ಜಿದ್ದಾಜಿದ್ದಿಯಿಂದ ಕೂಡಿದ್ದ ಕ್ವಾರ್ಟರ್‌ಫೈನಲ್‌ನ ಸೆಣಸಾಟದಲ್ಲಿ ಸರಿತಾ ಅವರು 3-1ರಿಂದ ಜರ್ಮನಿಯ ಸ್ಯಾಂಡ್ರಾ ಪರುಸೆವಸ್ಕಿ ಅವರನ್ನು ಮಣಿಸಿದರು. ಮುಂದಿನ ಬೌಟ್‌ನಲ್ಲಿ ಅವರಿಗೆ ಬಲ್ಗೇರಿಯಾದ ಬಿಲಿಯಾನ ಜಿವೊಕಾ ದುದೊಯಾ ಸವಾಲು ಎದುರಾಗಿದೆ.

57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನ್ಶು ಮಲಿಕ್ ಕೂಡ ನಿರಾಸೆ ಮಾಡಲಿಲ್ಲ. ಮೊದಲ ಸುತ್ತಿನಲ್ಲಿ ಕಜಕಸ್ತಾನದ ನೀಲುಫರ್‌ ರೈಮೊವಾ ಎದುರು ಗೆದ್ದ ಅವರು ಕ್ವಾರ್ಟರ್‌ಫೈನಲ್‌ನಲ್ಲಿ 5–1ರಿಂದ ಮಂಗೋಲಿಯಾದ ದವಾಚಿಮೆಗ್‌ ಎರ್ಕೆಂಬಯರ್ ಅವರಿಗೆ ಸೋಲಿನ ರುಚಿ ತೋರಿಸಿದರು.

72 ಕೆಜಿ ವಿಭಾಗದಲ್ಲಿ ದಿವ್ಯಾ ಕಾಕ್ರನ್‌ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಮಾಸಕೊ ಫುರುಯಿಚ್ ಎದುರು ಮಣಿದರು. ಕಿರನ್‌ (76 ಕೆಜಿ) ಅವರು ರಿಪೇಜ್ ಸುತ್ತಿನಲ್ಲಿ ಗೆದ್ದು ಕಂಚಿನ ಪದಕದ ಬೌಟ್‌ಗೆ ಕಾಲಿಟ್ಟಿದ್ದಾರೆ. ಪೂಜಾ ಜಾಟ್‌ (53 ಕೆಜಿ) ಮತ್ತು ರಿತು ಮಲಿಕ್ (68 ಕೆಜಿ) ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT