ಮಂಗಳವಾರ, ಜನವರಿ 28, 2020
18 °C
ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ಆಯ್ಕೆ ಟ್ರಯಲ್ಸ್

ಸಾಕ್ಷಿ ಮಲಿಕ್‌ಗೆ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಅವರಿಗೆ ಎರಡು ಬಾರಿಯ ವಿಶ್ವ ಕೆಡೆಟ್‌ ಚಾಂಪಿಯನ್‌ ಸೋನಮ್‌ ಮಲಿಕ್‌ ಆಘಾತ ನೀಡಿದರು.

ಶನಿವಾರ ನಡೆದ ಕುಸ್ತಿ ಆಯ್ಕೆ ಟ್ರಯಲ್ಸ್‌ನಲ್ಲಿ ಗೆದ್ದು, ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಮತ್ತೊಂದು ಬೌಟ್‌ನಲ್ಲಿ ಅನ್ಷು ಮಲಿಕ್‌, ವಿಶ್ವ ಚಾಂಪಿಯನ್‌ಷಿಪ್‌ ಪದಕ ವಿಜೇತೆ ಪೂಜಾ ದಂಡಾ ಅವರ ಸವಾಲು ಮೀರಿದರು.

ಮಹಿಳೆಯರ 62 ಕೆಜಿ ವಿಭಾಗದ ಬೌಟ್‌ನ ಮೊದಲ ಸುತ್ತಿನಲ್ಲಿ ಸೋನಮ್‌, ಸಾಕ್ಷಿ ಅವರಿಗೆ ಎದುರಾಗಿದ್ದರು. ಬೌಟ್‌ನ ಎರಡನೇ ಅವಧಿಯಲ್ಲಿ ಸೋನಮ್‌ ಅವರಿಗೆ, 4–6 ಪಾಯಿಂಟ್ಸ್‌ ಹಿನ್ನಡೆ ಕಾದಿತ್ತು. ಆದರೆ ಬೌಟ್‌ ಕೊನೆಗೊಳ್ಳಲು ಮೂರು ಸೆಕೆಂಡುಗಳಿರುವಾಗ ಮಿಂಚಿನ ಆಟವಾಡಿ 10–10ಕ್ಕೆ ತಲುಪಿದರು. ಬಳಿಕ ಮತ್ತೊಂದು ಪಾಯಿಂಟ್‌ ದಾಖಲಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಫೈನಲ್‌ ಬೌಟ್‌ನಲ್ಲಿ ಸೋನಮ್‌ ಅವರು ರಾಧಿಕಾ ವಿರುದ್ಧ 4–1ರಿಂದ ಜಯ ಸಾಧಿಸಿದರು.

ಅನ್ಷು ಅವರು 57 ಕೆಜಿ ವಿಭಾಗದ ಬೌಟ್‌ನ ಮೊದಲ ಸುತ್ತಿನಲ್ಲಿ ಪೂಜಾ ಅವರನ್ನು ಚಿತ್‌ ಮಾಡಿದರು. ನಂತರ ಫೈನಲ್‌ ಬೌಟ್‌ನಲ್ಲಿ ಮಾನಸಿ ಎದುರು ಗೆದ್ದು ಸಂಭ್ರಮಿಸಿದರು.

ವಿನೇಶ್‌ ಪೋಗಟ್‌ (53 ಕೆಜಿ) ಹಾಗೂ ದಿವ್ಯಾ ಕಾಕ್ರನ್‌ (68 ಕೆಜಿ) ತಮ್ಮ ವಿಭಾಗಗಳಲ್ಲಿ ಗೆದ್ದು ಏಷ್ಯನ್‌ ಚಾಂಪಿಯನ್‌ಷಿಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದರು. ನಿರ್ಮಲಾ ದೇವಿ (50 ಕೆಜಿ) ಹಾಗೂ ಕಿರಣ್‌ ಗೋದಾರಾ (76 ಕೆಜಿ) ಟ್ರಯಲ್ಸ್ ಗೆದ್ದ ಇತರ ಕುಸ್ತಿಪಟುಗಳು.

ಇಲ್ಲಿ ಗೆದ್ದವರು ರೋಮ್‌ನಲ್ಲಿ ಜನವರಿ 15ರಿಂದ 18ರವರೆಗೆ ನಡೆಯುವ ರ‍್ಯಾಂಕಿಂಗ್‌ ಸಿರೀಸ್‌ ಟೂರ್ನಿ ಹಾಗೂ ಫೆಬ್ರುವರಿ 18ರಿಂದ 23ರವರೆಗೆ ನವದೆಹಲಿಯಲ್ಲಿ ಆಯೋಜಿತ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಾರೆ. ಒಂದು ವೇಳೆ ಈ ಎರಡು ಟೂರ್ನಿಗಳಲ್ಲಿ ಪದಕ ಗೆದ್ದರೆ ಮಾರ್ಚ್‌ 27ರಿಂದ 29ರವರೆಗೆ ಚೀನಾದ ಕ್ಸಿಯಾನ್‌ನಲ್ಲಿ ನಡೆಯುವ ಏಷ್ಯನ್‌ ಒಲಿಂಪಿಕ್‌ ಕ್ವಾಲಿಫೈಯರ್‌ಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು