ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಷಿಪ್ ಇಂದಿನಿಂದ

Last Updated 14 ಫೆಬ್ರುವರಿ 2022, 14:10 IST
ಅಕ್ಷರ ಗಾತ್ರ

ಷಾ ಆಲಂ, ಮಲೇಷ್ಯಾ: ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್‌ ಮತ್ತು ಮಾಳವಿಕಾ ಬಂಸೋಡ್‌ ನೇತೃತ್ವದಲ್ಲಿರುವ ಭಾರತ ಯುವ ತಂಡವು ಏಷ್ಯಾ ಬ್ಯಾಡ್ಮಿಂಟನ್‌ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದೆ.

ಮಂಗಳವಾರ ಇಲ್ಲಿ ಚಾಂಪಿಯನ್‌ಷಿಪ್ ಆರಂಭವಾಗಲಿದ್ದು, ಮೊದಲ ದಿನ ಭಾರತ ಪುರುಷ ಮತ್ತು ಮಹಿಳಾ ತಂಡದವರು ಗುಂಪು ‘ಎ’ ಮತ್ತು ಗುಂಪು ‘ಬಿ’ ನಲ್ಲಿ ಕ್ರಮವಾಗಿ ಕೊರಿಯಾ ಮತ್ತು ಮಲೇಷ್ಯಾ ತಂಡಗಳ ಎದುರು ಸೆಣಸಲಿದ್ದಾರೆ.

ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಪುರುಷರ ತಂಡವನ್ನು ಲಕ್ಷ್ಯ ಮುನ್ನಡೆಸುತ್ತಿದ್ದಾರೆ. ಕಿರಣ್ ಜಾರ್ಜ್‌ ಮತ್ತು ಮಿಥುನ್ ಮಂಜುನಾಥ್ ಅವರು ಟೂರ್ನಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಮೂರು ಬಾರಿಯ ಹಾಗೂ ಹಾಲಿ ಚಾಂಪಿಯನ್‌ ಇಂಡೊನೇಷ್ಯಾ, ಹಾಂಗ್‌ಕಾಂಗ್‌ ಮತ್ತು ಕೊರಿಯಾ ತಂಡಗಳಿರುವ ಗುಂಪಿನಲ್ಲಿ ಭಾರತ ಇದೆ.

ಡಬಲ್ಸ್‌ನಲ್ಲಿ ರವಿಕೃಷ್ಣ ಪಿಎಸ್– ಶಂಕರ್ ಪ್ರಸಾದ್ ಉದಯಕುಮಾರ್ ಮತ್ತು ಮಂಜಿತ್ ಸಿಂಗ್ ಖ್ವೈರಕ್‌ಪಾಮ್ ಮತ್ತು ಡಿಂಕು ಸಿಂಗ್ ಕೊಂತೌಜಮ್ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಮಹಿಳೆಯರ ತಂಡದಲ್ಲಿ ಮಾಳವಿಕಾ ಅವರೊಂದಿಗೆ ಆಕರ್ಷಿ ಕಶ್ಯಪ್‌ ಮತ್ತು ಅಸ್ಮಿತಾ ಚಲಿಹಾ ಇದ್ದಾರೆ. ಬಿ ಗುಂಪಿನಲ್ಲಿ ಮಲೇಷ್ಯಾ ಮತ್ತು ಜಪಾನ್ ತಂಡಗಳೂ ಇವೆ.

ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಳಿಸಲಿವೆ. ಅಲ್ಲದೆ ಬ್ಯಾಂಕಾಕ್‌ನಲ್ಲಿ ಮೇ 17ರಿಂದ 22ರವರೆಗೆ ನಡೆಯುವ ಥಾಮಸ್ ಕಪ್ ಫೈನಲ್ಸ್‌ಗೆ ಪ್ರವೇಶ ಪಡೆಯಲಿವೆ.

ಟೂರ್ನಿಯಲ್ಲಿ ಈ ಹಿಂದೆ ಭಾರತ ಪುರುಷರ ತಂಡವು ಎರಡು ಕಂಚಿನ ಪದಕ ಗೆದ್ದಿತ್ತು. 1965ರಲ್ಲಿ ದಿನೇಶ್ ಖನ್ನಾ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT