ಸೋಮವಾರ, ಆಗಸ್ಟ್ 15, 2022
25 °C
ಭಾರತೀಯ ಸಂಜಾತ ಅಮೆರಿಕದ ಪ್ರತಿಭೆ

Explainer: ವಿಶ್ವದ ಅತಿ ಕಿರಿಯ ಜಿಎಂ ಪಟ್ಟಕ್ಕೇರಿದ ಅಭಿಮನ್ಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Twitter/Susan Ninaan

ಅಮೆರಿಕದ ನ್ಯೂಜರ್ಸಿಯ ಪ್ರತಿಭೆ ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಝೆರ್‌ಕೆಪ್ಜೊ ಗ್ರ್ಯಾಂಡ್‌ಮಾಸ್ಟರ್ಸ್‌ ಮಿಕ್ಸ್ಡ್‌ ಚೆಸ್‌ ಟೂರ್ನಿಯ 9ನೇ ಸುತ್ತಿನ ಆಟ ಗೆಲ್ಲುವ ಮೂಲಕ ಭಾರತೀಯ ಮೂಲದ ಮಿಶ್ರಾ ‘ಅತಿ ಕಿರಿಯ ಜಿ.ಎಂ’ ಎಂಬ ವಿಶ್ವದಾಖಲೆಯ ಒಡೆಯನಾಗಿದ್ದಾನೆ. ಈತನ ವಯಸ್ಸು 12 ವರ್ಷ, 4 ತಿಂಗಳು, 25 ದಿನ!

ಬುಧವಾರ ನಡೆದ ಪಂದ್ಯದಲ್ಲಿ, ಭಾರತದ ಪ್ರತಿಭೆ, 15 ವರ್ಷದ ಲ್ಯೂಕ್‌ ಮೆಂಡೊನ್ಕಾ ವಿರುದ್ಧ ಜಯಗಳಿಸಿದ್ದ. ಇದುವರೆಗೆ ವಿಶ್ವದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಎಂಬ ಗೌರವವು ಸೆರ್ಗಿ ಅಲೆಕ್ಸಾಂಡರ್‌ ಕರ್ಯಾಕಿನ್‌ ಹೆಸರಿನಲ್ಲಿತ್ತು. ರಷ್ಯಾದ ಈ ಆಟಗಾರ 12 ವರ್ಷ 7 ತಿಂಗಳು ವಯಸ್ಸಿನಲ್ಲಿ ಈ ಸಾಧನೆಗೈದ್ದಿದ್ದ.

ಭಾರತದ ಡಿ.ಗುಕೇಶ್‌ ಸೇರಿದಂತೆ ಕೆಲವು ಉದಯೋನ್ಮುಖ ಆಟಗಾರರು ಈ ದಾಖಲೆ ಮುರಿಯುವ ಸಮೀಪಕ್ಕೆ ಬಂದಿದ್ದರು. 19 ವರ್ಷಗಳಿಂದ ಕರ್ಯಾಕಿನ್‌ ದಾಖಲೆ ಅಬಾಧಿತವಾಗಿ ಉಳಿದಿತ್ತು.

ಅಭಿಮನ್ಯು ಕೋಚ್‌ ತಮಿಳುನಾಡಿನವರು: 

ತಮಿಳುನಾಡಿನವರಾದ ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ ಅರುಣ್‌ಪ್ರಸಾದ್‌ ಅವರು ಅಭಿಮನ್ಯು ಕೋಚ್‌ ಎಂಬುದೂ ಮಹತ್ವದ ವಿಷಯ. ಭಾರತದ ಇನ್ನೊಬ್ಬ ಜಿಎಂ ಮಗೇಶಚಂದ್ರನ್‌ ಅವರೂ ‘ಅಭಿ’ಗೆ ತರಬೇತಿ ನೀಡಿದ್ದಾರೆ.

ಮೂರು ಜಿ.ಎಂ. ನಾರ್ಮ್‌ಗಳ ಜೊತೆ 2,500 ರೇಟಿಂಗ್‌ ಹೊಂದಿರುವ ಆಟಗಾರ:

ಹಂಗರಿಯ ಬುಡಾಪೆಸ್ಟ್‌ನಲ್ಲಿ ವಾರಾಂತ್ಯ ಟೂರ್ನಿ ನಡೆಯುತ್ತಿದ್ದ ಕಾರಣ ಅಭಿಮನ್ಯು ಸೇರಿದಂತೆ ಕೆಲವು ಗ್ರ್ಯಾಂಡ್‌ಮಾಸ್ಟರ್‌ ಅಕಾಂಕ್ಷಿ ಆಟಗಾರರು ತಿಂಗಳುಗಳಿಂದ ಅಲ್ಲಿಯೇ ನೆಲೆಸಿದ್ದರು. ಇದೇ ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳ ಟೂರ್ನಿಗಳಲ್ಲಿ ಈತ ಮೊದಲ ಎರಡು ಜಿ.ಎಂ. ನಾರ್ಮ್‌ಗಳನ್ನು ಗಳಿಸಿದ್ದ. ನಂತರದ ಕೆಲವು ಟೂರ್ನಿಗಳಲ್ಲಿ ಮೂರನೆಯ ನಾರ್ಮ್‌ ಒಲಿದಿರಲಿಲ್ಲ.

ಆಟಗಾರರು ತಮ್ಮ ದೇಶಗಳಿಗೆ ಹಿಂತಿರುಗುವ ಮೊದಲು, ವ್ಯವಸ್ಥಾಪಕರು ಕೊನೆಯದಾಗಿ ವಝೆರ್‌ಕೆಪ್ಜಾ ಗ್ರ್ಯಾಂಡ್‌ಮಾಸ್ಟರ್‌ ಮಿಕ್ಸ್ಡ್‌ ಟೂರ್ನಿ ಹೆಸರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದರು. ಈ ಟೂರ್ನಿಯಲ್ಲಿ ಅಭಿಮನ್ಯು ಯಶಸ್ಸು ಸಾಧಿಸಿಯೇ ಬಿಟ್ಟ. 9 ಸುತ್ತುಗಳಲ್ಲಿ ಒಂದು ಸೋತರೂ, ಉಳಿದ ಸುತ್ತುಗಳಲ್ಲಿ ಒಳ್ಳೆಯ ಆಟ ತೋರಿದ. 2,600 ರೇಟಿಂಗ್‌ ಸಾಮರ್ಥ್ಯದ ಪ್ರದರ್ಶನ ನೀಡಿದ. 9ನೇ ಸುತ್ತಿನಲ್ಲಿ ಜಯಗಳಿಸುವ ಮೂಲಕ ಅಗತ್ಯವಿದ್ದ ಮೂರನೇ ನಾರ್ಮ್‌, ಆ ಮೂಲಕ ಗ್ರ್ಯಾಂಡ್‌ಮಾಸ್ಟರ್‌ ಟೈಟಲ್‌ ಗಳಿಸಿದ. ಚೆಸ್‌ನಲ್ಲಿ ಮೂರು ಜಿ.ಎಂ. ನಾರ್ಮ್‌ಗಳ ಜೊತೆ 2,500 ರೇಟಿಂಗ್‌ ಹೊಂದಿರುವ ಆಟಗಾರ ಗ್ರ್ಯಾಂಡ್‌ಮಾಸ್ಟರ್‌ ಬಿರುದಿಗೆ ಅರ್ಹರಾಗುತ್ತಾರೆ.

ಅಮೆರಿಕದ ಈ ಆಟಗಾರ ಮೊದಲ ಬಾರಿ ಸುದ್ದಿಯಾಗಿದ್ದು, 2016ರಲ್ಲಿ ನಡೆದ ಚೆಸ್‌ಕಿಡ್‌ ಆನ್‌ಲೈನ್‌ ನ್ಯಾಷನಲ್‌ ಇನ್ವಿಟೇಷನಲ್‌ ಚಾಂಪಿಯನ್‌ಷಿಪ್‌ನಲ್ಲಿ ಎಂಟು ವರ್ಷದ ಒಳಗಿನ ವಿಭಾಗದಲ್ಲಿ ವಿಜೇತನಾಗುವ ಮೂಲಕ. 2019ರ ನವೆಂಬರ್‌ನಲ್ಲಿ ಈತ ವಿಶ್ವದ ಅತಿ ಕಿರಿಯ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಎಂಬ ವಿಶ್ವದಾಖಲೆಗೆ ಪಾತ್ರನಾಗುವ ಮೂಲಕ ಮತ್ತಷ್ಟು ಸುದ್ದಿಯಾದ. ಈ ಮೈಲುಗಲ್ಲು ತಲುಪಲು ತೆಗೆದುಕೊಂಡಿದ್ದ ಅವಧಿ 10 ವರ್ಷ, 9 ತಿಂಗಳು ಮತ್ತು ಮೂರು ದಿನ. ಅದಕ್ಕೆ ಮೊದಲು ಭಾರತದ ರಮೇಶ್‌ಬಾಬು ಪ್ರಜ್ನಾನಂದ ಹೆಸರಿನಲ್ಲಿ (2016ರಲ್ಲಿ; 10 ವರ್ಷ, 10 ತಿಂಗಳು, 19 ದಿವಸ ಇದ್ದಾಗ) ಈ ದಾಖಲೆ ಇತ್ತು.

ಅಭಿಮನ್ಯು ಆಟ ಇನ್ನಷ್ಟು ಪಕ್ವಗೊಂಡಿದ್ದು 2019ರ ಬೇಸಿಗೆಯಲ್ಲಿ ಪಡೆದ ತರಬೇತಿಯಲ್ಲಿ. ಆಗ ಸೇಂಟ್‌ ಲೂಯಿಯಲ್ಲಿ ಆಯ್ದ ಆಟಗಾರರಿಗೆ ತರಬೇತಿ ನೀಡಿದ್ದು ಬೇರಾರೂ ಅಲ್ಲ ವಿಶ್ವದ ಮಾಜಿ ಚಾಂಪಿಯನ್‌ ಗ್ಯಾರಿ ಕ್ಯಾಸ್ಪರೋವ್‌ ಅವರು. ಅಭಿಮನ್ಯುವಿಗೂ ಅವಕಾಶ ಸಿಕ್ಕಿತ್ತು.

‘ನಿಜ, ದಾಖಲೆ ಕಳೆದುಕೊಂಡಿರುವುದರಿಂದ ಬೇಸರವಾಗಿದೆ. ಅಭಿಮನ್ಯುವಿಗೆ ಅಭಿನಂದನೆ ಸಲ್ಲಲೇಬೇಕಿದೆ’ ಎಂದು ಚೆಸ್‌ ಡಾಟ್‌ ಕಾಮ್‌ನಲ್ಲಿ ಕರ್ಯಾಕಿನ್‌ ಹೇಳಿದ್ದಾರೆ.

ವಿಶ್ವದ ಅತಿ ಕಿರಿಯ ಜಿ.ಎಂ. ಆಟಗಾರರು (ಟಾಪ್‌ 5):

  1. ಅಭಿಮನ್ಯು ಮಿಶ್ರಾ (ಅಮೆರಿಕ, 12 ವರ್ಷ, 4 ತಿಂಗಳು, 25 ದಿನ)
  2. ಸೆರ್ಗಿ ಕರ್ಯಾಕಿನ್‌ (ರಷ್ಯಾ, 12 ವರ್ಷ, 7 ತಿಂಗಳು),
  3. ದೊಮ್ಮರಾಜು ಗುಕೇಶ್‌ (ಭಾರತ, 12 ವರ್ಷ, 7 ತಿಂಗಳು, 17 ದಿನ)
  4. ಜೊವೊಕಿರ್‌ ಸಿಂಡರೊವ್‌ (ಉಜ್ಬೇಕಿಸ್ತಾನ, 12 ವರ್ಷ, 10 ತಿಂಗಳು, 5 ದಿನ)
  5. ರಮೇಶಬಾಬು ಪ್ರಗ್ನಾನಂದ (12 ವರ್ಷ, 10 ತಿಂಗಳು 13 ದಿನ).

ಈ ಪಟ್ಟಿಯಲ್ಲಿ ಭಾರತದ ಪರಿಮಾರ್ಜುನ ನೇಗಿ ಏಳನೇ (13 ವರ್ಷ, 4 ತಿಂಗಳು, 22 ದಿನ) ಮತ್ತು ರೋನಕ್‌ ಸಾಧ್ವಾನಿ 10ನೇ (13 ವರ್ಷ, 9 ತಿಂಗಳು, 28 ದಿನ) ಸ್ಥಾನದಲ್ಲಿದ್ದಾರೆ. ಟಾಪ್‌ 10 ಆಟಗಾರರಲ್ಲಿ ಆರು ಮಂದಿ 13ನೇ ಹುಟ್ಟುಹಬ್ಬಕ್ಕೆ ಮೊದಲೇ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದಾರೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು