ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕಣಜದಿಂದ ಬ್ಯಾಸ್ಕೆಟ್‌ಬಾಲ್‌ ಕಣಕ್ಕೆ...

Last Updated 4 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಜನಿಸಿದ್ದು ಕೊಡಗಿನ ನಾಪೋಕ್ಲುವಿನಲ್ಲಿ. ತಂದೆ ಹಾಕಿ ಪಟು. ಊರಲ್ಲಿ ನಿತ್ಯವೂ ಹಾಕಿ ಕಲರವ. ಆದರೆ ಹರ್ಷಿತಾ ಕಲ್ಲೇಟಿರ ಬೋಪಯ್ಯಅವರ ಮನಸ್ಸು ಸಾಗಿದ್ದು ಅಥ್ಲೆಟಿಕ್ಸ್‌ ‘ಫೀಲ್ಡ್‌’ಗೆ. ನಂತರ ಆಕಸ್ಮಿಕವಾಗಿ ಧುಮುಕಿದ್ದು ಬ್ಯಾಸ್ಕೆಟ್‌ಬಾಲ್‌ ಅಂಗಣಕ್ಕೆ. ಅಲ್ಲಿ ಹಾಕಿದ ಪರಿಶ್ರಮ, ಅವರನ್ನುಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯನ್ನಾಗಿ ಮಾಡಿತು.ಸಬ್‌ಜೂನಿಯರ್‌ ಮತ್ತು ಜೂನಿಯರ್ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಿದ ಹರ್ಷಿತಾ ಈಗ ಸೀನಿಯರ್ ವಿಭಾಗದಲ್ಲಿ ರಾಷ್ಡ್ರೀಯ ತಂಡದ ಪ್ರಮುಖ ಆಟಗಾರ್ತಿಯಾಗಿದ್ದು ಕನ್ನಡದ ಹಿರಿಮೆ ಎತ್ತಿಹಿಡಿಯುತ್ತಿದ್ದಾರೆ.

ಬೋಪಯ್ಯ ಮತ್ತು ಮಾಲಾ ಮುತ್ತಮ್ಮ ಅವರ ಪುತ್ರಿ ಹರ್ಷಿತಾ, ಏಳನೇ ತರಗತಿ ವರೆಗೆ ಓದಿದ್ದು ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್‌ ಶಾಲೆಯಲ್ಲಿ. ಬೋಪಯ್ಯ ಅವರು ರಾಜ್ಯಮಟ್ಟದ ಹಾಕಿ ಆಟಗಾರ. ಆದರೆ ಹರ್ಷಿತಾ ಅವರ ಮನಸ್ಸು ಯಾಕೋ ಹಾಕಿ ಕಡೆಗೆ ವಾಲಲಿಲ್ಲ. ಅವರು ಲಾಂಗ್‌ಜಂಪ್ ಮತ್ತು ಹೈಜಂಪ್‌ನಲ್ಲಿ ರಾಜ್ಸ ಮಟ್ಟದಲ್ಲಿ ಬೆಳಗಿದರು. ಏಳನೇ ತರಗತಿಯಲ್ಲಿದ್ದಾಗ ಮೈಸೂರಿನಲ್ಲಿ ನಡೆದಿದ್ದ ಆಯ್ಕೆ ಪ್ರಕ್ರಿಯೆಯೊಂದು ಹರ್ಷಿತಾ ಅವರ ಕ್ರೀಡಾ ಬದುಕಿನ ದಿಕ್ಕು ಬದಲಿಸಿತು. ಅಲ್ಲಿ ಅಥ್ಲೆಟಿಕ್ಸ್ ಮತ್ತು ಬ್ಯಾಸ್ಕೆಟ್‌ಬಾಲ್ ತಂಡಗಳ ಆಯ್ಕೆ ಜೊತೆಯಾಗಿ ನಡೆಯುತ್ತಿತ್ತು. ಹರ್ಷಿತಾ ಅವರ ಎತ್ತರದ ನಿಲುವು ಕಂಡ ಕೋಚ್‌ ಸತ್ಯನಾರಾಯಣ ಅವರು ‘ಈ ಹುಡುಗಿಗೆ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯೇ ಸೂಕ್ತ’ ಎಂದು ನಿರ್ಧರಿಸಿ ಆಹ್ವಾನ ನೀಡಿದರು.

ಬ್ಯಾಸ್ಕೆಟ್‌ಬಾಲ್ ಕಣಕ್ಕೆ...

ಕೊಡಗಿನಿಂದ ಬೆಂಗಳೂರಿನ ವಿದ್ಯಾನಗರದ ಕ್ರೀಡಾ ನಿಲಯಕ್ಕೆ ತೆರಳಿದ ಕೊಡಗಿನ ಹುಡುಗಿ ಅಲ್ಲಿ ಸತ್ಯನಾರಾಯಣ ಅವರ ಬಳಿ ಬ್ಯಾಸ್ಕೆಟ್‌ಬಾಲ್‌ನ ಪಟ್ಟುಗಳನ್ನು ಕಲಿತರು. ‘ಮೊದಲ ಎರಡು ವರ್ಷ ಅಷ್ಟೇನೂ ಸಾಧನೆ ಮಾಡದ ಹರ್ಷಿತಾ ನಂತರ ಲಯ ಕಂಡುಕೊಂಡರು. ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರು’ ಎನ್ನುತ್ತಾರೆ ಸತ್ಯನಾರಾಯಣ.

ಕಳೆದ ವರ್ಷ ರಷ್ಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಕೂಟ ಮತ್ತು ಥಾಯ್ಲೆಂಡ್‌ನಲ್ಲಿ ನಡೆದಿದ್ದ ಫಿಬಾ ಏಷ್ಯಾ ಆಶ್ರಯದ 3x3 ಕೂಟದಲ್ಲಿ ಪಾಲ್ಗೊಂಡ ನಂತರ ಅವರ ಅನುಭವ ಸಂಪತ್ತು ಹೆಚ್ಚಿತು. ಗಾಯಗೊಂಡ ಸಂಜನಾ ರಮೇಶ್ ಮತ್ತು ವೈಷ್ಣವಿ ಯಾದವ್‌ ಅವರ ಅನುಪಸ್ಥಿತಿಯಿಂದಾಗಿ 18 ವರ್ಷದೊಳಗಿನವರ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಸ್ಥಾನ ಲಭಿಸಿತು. ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ಗುಂಪು ಹಂತದ ಮೂರು ಪಂದ್ಯಗಳಲ್ಲಿ ಒಟ್ಟು 33 ಪಾಯಿಂಟ್ ಗಳಿಸಿ ಮಿಂಚಿದ್ದಾರೆ.

ಮೊದಲ ಪಂದ್ಯದಲ್ಲಿ ಇರಾನ್‌ನ ಪ್ರಬಲ ಪೈಪೋಟಿಯನ್ನು ಮೆಟ್ಟಿ ನಿಂತ ತಂಡಕ್ಕೆ ನಿರ್ಣಾಯಕ ಘಟ್ಟದಲ್ಲಿ ಹರ್ಷಿತಾ ನೀಡಿದ ಕಾಣಿಕೆ ಅಪರೂಪ. ಡ್ರೈವಿಂಗ್ ಶಾಟ್‌ನಲ್ಲಿ ಪಳಗಿರುವ ಅವರು ಇದೇ ಅಸ್ತ್ರವನ್ನು ಬಳಸಿ ಎದುರಾಳಿಗಳನ್ನು ಬೆರಗುಗೊಳಿಸಿ ಪಾಯಿಂಟ್‌ ಕಬಳಿಸಿದ್ದರು.

‘ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯನ್ನು ನೋಡಿಯೂ ಇರಲಿಲ್ಲ. ಕೋಚ್‌ ಸತ್ಯನಾರಾಯಣ ಅವರು ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದಾಗ ಆಶ್ಚರ್ಯವಾಯಿತು. ಅಭ್ಯಾಸ ಆರಂಭಿಸಿ ಸ್ವಲ್ಪ ಕಾಲದಲ್ಲೇ ಕ್ರೀಡೆಯ ಬಗ್ಗೆ ತಿಳಿದುಕೊಂಡೆ. ನಂತರ ಭರವಸೆ ಮೂಡಿತು. ಕೋಚ್ ಸತ್ಯನಾರಾಯಣ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಏನೂ ಗೊತ್ತಿಲ್ಲದಿದ್ದ ನನ್ನನ್ನು ಈ ಮಟ್ಟಕ್ಕೆ ತಲುಪಿಸಿದ್ದು ಅವರೇ...’ ಎನ್ನುತ್ತಾರೆ ಹರ್ಷಿತಾ.

ಶಾಲಾ ಕೂಟದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ

ಹರ್ಷಿತಾ ಅವರ ಜೈತ್ರಯಾತ್ರೆ ಆರಂಭಗೊಂಡದ್ದ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಜಿಎಫ್‌ಐ) ಕೂಟದಿಂದ. 2014ರಲ್ಲಿ ಆಂಧ್ರದಲ್ಲಿ ನಡೆದ ಕೂಟದಲ್ಲಿ ಹರ್ಷಿತಾ ಅವರಿದ್ದ ಕರ್ನಾಟಕ ತಂಡ ಚಿನ್ನ ಗೆದ್ದಿತ್ತು. ನಂತರ ಗುಜರಾತ್‌ನಲ್ಲಿ ನಡೆದಿದ್ದ ಪೈಕಾ ಕೂಟದ ಸಬ್‌ ಜೂನಿಯರ್ ವಿಭಾಗದಲ್ಲಿ ಕರ್ಚಿನಾಟಕ ಚಿನ್ನ ಗೆದ್ದಿತು. ನಂತರ ಜೂನಿಯರ್‌, ಸೀನಿಯರ್ ವಿಭಾಗಳಲ್ಲಿ ವಿವಿಧ ಕೂಟಗಳಲ್ಲಿ ಪಾಲ್ಗೊಂಡರು.

ಶಾಶಿಬ್‌ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಅವರ ಪ್ರತಿಭೆಗೆ ರಷ್ಯಾ ಮತ್ತು ಥಾಯ್ಲೆಂಡ್‌ನಲ್ಲಿ ನಡೆದ ಕೂಟಗಳು ಇನ್ನಷ್ಟು ಸಾಣೆ ಹಿಡಿದವು.

‘ಭಾರತದಲ್ಲಿ ಈಗ ಮಹಿಳಾ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಪ್ರಗತಿಯ ಹಾದಿಯಲ್ಲಿದೆ. ಸಾಂಘಿಕ ಪ್ರಯತ್ನವೇ ಇದಕ್ಕೆ ಕಾರಣ. ಎಲ್ಲ ಕಾಲದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಅದರೆ ಪ್ರಯತ್ನ ಕೈಬಿಡಬಾರದು. ಶ್ರಮಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ’ ಎನ್ನುತ್ತಾರೆ ಹರ್ಷಿತಾ.

ಛಲವೇ ಹರ್ಷಿತಾ ತಾಕತ್ತು
ಮೈಸೂರಿನಲ್ಲಿ ಹರ್ಷಿತಾ ಅವರನ್ನು ಕಂಡಾಗಲೇ ಅವರಲ್ಲಿ ಒಳ್ಳೆಯ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಇರುವುದನ್ನು ಗಮನಿಸಿದ್ದೆ. ಮನೆ ಮಂದಿಯನ್ನು ಮನವೊಲಿಸಿ ಅವರನ್ನು ಬೆಂಗಳೂರಿನ ಕ್ರೀಡಾನಿಲಯಕ್ಕೆ ಕರೆತರುವುದು ಸಹಜವಾಗಿಯೇ ಸ್ವಲ್ಪ ಕಷ್ಟವಾಯಿತು. ಈಗ ಮನೆಯವರೂ ಖುಷಿಯಾಗಿದ್ದಾರೆ. ಸಾಧನೆ ಮಾಡುವ ಛಲವೇ ಹರ್ಷಿತಾ ಅವರ ತಾಕತ್ತು. ರಜಾ ದಿನಗಳಲ್ಲಿ ಕೂಡ ವಿಶ್ರಾಂತಿ ಪಡೆಯದೆ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡುತ್ತಾರೆ. ಬ್ಯಾಸ್ಕೆಟ್‌ಬಾಲ್‌ಗಾಗಿ ಊರಿಗೆ ಹೋಗುವ ‘ಚಿಂತೆ’ಯನ್ನು ಕೂಡ ಕೈಬಿಟ್ಟಿದ್ದಾರೆ. ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದರಿಂದಾಗಿ ಅದಕ್ಕೆ ತಕ್ಕ ಫಲ ಅವರಿಗೆ ಸಿಗುತ್ತದೆ.
–ಸತ್ಯನಾರಾಯಣ, ವಿದ್ಯಾನಗರ ಕ್ರೀಡಾನಿಲಯದ ಕೋಚ್‌
**


ಹೊಸತನ: ಪ್ರಯಾಸವಿಲ್ಲ
ಎಲ್ಲ ಕ್ರೀಡೆಗಳಂತೆ ಬ್ಯಾಸ್ಕೆಟ್‌ಬಾಲ್‌ನಲ್ಲೂ ಹೊಸ ತಂತ್ರಗಳು, ಹೊಸ ನಿಯಮಗಳು ನಿರಂತರವಾಗಿ ಕಂಡುಬರುತ್ತವೆ. ಇದಕ್ಕೆ ಒಗ್ಗಿಕೊಳ್ಳುವುದು ಕಷ್ಟವಲ್ಲವೇ ಎಂದು ಕೇಳಿದರೆ, ಹರ್ಷಿತಾ ಹೇಳುವುದು ಹೀಗೆ: ಯಾವುದೇ ಕ್ಷೇತ್ರದಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳುವುದು ಆರಂಭದಲ್ಲಿ ಕಷ್ಟ. ಅರ್ಪಣಾಭಾವದಿಂದ ತೊಡಗಿಸಿಕೊಂಡರೆ ಯಾವುದನ್ನೂ ಅರಗಿಸಿಕೊಳ್ಳುವುದು, ಯಾವುದಕ್ಕೂ ಒಗ್ಗಿಕೊಳ್ಳುವುದು ಕಷ್ಟವಲ್ಲ. ಬ್ಯಾಸ್ಕೆಟ್‌ಬಾಲ್‌ನಲ್ಲಿ ಹೊಸ ತಂತ್ರಗಳು, ಹೊಸ ನಿಯಮಗಳನ್ನು ಅಳವಡಿಸಿಕೊಂಡು ಮುಂದೆ ಸಾಗಲು ಈ ವರೆಗೆ ಹೆಚ್ಚೇನೂ ಪ್ರಯಾಸವಾಗಲಿಲ್ಲ.
**


ಹೆಚ್ಚು ಹೆಚ್ಚು ಅಂತರ ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಬೇಕು, ಹೆಸರು ಗಳಿಸಬೇಕು. ಕೊನೆಗೆ ಉದ್ಯೋಗವನ್ನೂ ಪಡೆದು ಕ್ರೀಡಾ ಜೀವನವನ್ನು ಇನ್ನಷ್ಟು ಬೆಳಗಬೇಕು ಎಂಬುದು ನನ್ನ ಗುರಿ
ಹರ್ಷಿತಾ ಬೋಪಯ್ಯ, ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT