ಕೊಲಂಬೊ: ಭಾರತ ವಿರುದ್ಧ ಭಾನುವಾರ ನಡೆದ ಸೂಪರ್ ಫೋರ್ ಪಂದ್ಯದ ವೇಳೆ ಗಾಯಾಳಾಗಿರುವ ಪಾಕಿಸ್ತಾನದ ವೇಗದ ಬೌಲರ್‌ಗಳಾದ ಹ್ಯಾರಿಸ್ ರವೂಫ್ ಮತ್ತು ನಸೀಮ್ ಶಾ ಏಷ್ಯಾ ಕಪ್‌ನ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಈ ಇಬ್ಬರ ಬದಲಿಗೆ ಬ್ಯಾಕಪ್ ಆಗಿ ಶಾನವಾಝ್ ದಹಾನಿ ಮತ್ತು ಜಮಾನ್ ಖಾನ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪಾಕ್ ತಂಡದ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಇದು ಬರೇ ಮುನ್ನೆಚ್ಚರಿಕೆಯ ಹೆಜ್ಜೆ. ಮುಂದಿನ ತಿಂಗಳ ಐಸಿಸಿ ವಿಶ್ವಕಪ್ ಲಕ್ಷ್ಯದಲ್ಲಿಟ್ಟುಕೊಂಡು ಮತ್ತು ಆಟಗಾರರ ಕ್ಷೇಮದ ದೃಷ್ಟಿಯಿಂದ ಈ ಕ್ರಮ’ ಎಂದು ತಂಡದ ಆಡಳಿತ ತಿಳಿಸಿದೆ.
ಯಾಸಿರ್ ಅವರಿಗೆ ಸ್ನಾಯುನೋವು ಬಾಧಿಸಿದೆ. ಹೀಗಾಗಿ ಅವರು ಸೋಮವಾರ ಫೀಲ್ಡ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಬ್ಯಾಟ್ ಮಾಡಲೂ ಬಂದಿರಲಿಲ್ಲ. ನಸೀಮ್ ಶಾ ಅವರಿಗೆ ಬಲಭುಜದಲ್ಲಿ ನೋವು ಕಾಣಿಸಿಕೊಂಡಿತ್ತು. ಅವರು ತಮ್ಮ ಪಾಲಿನ 10 ಓವರುಗಳ ಕೋಟಾ ಮುಗಿಸಿದರೂ, 49ನೇ ಓವರಿನಲ್ಲಿ ಕ್ರೀಡಾಂಗಣದಿಂದ ನಿರ್ಗಮಿಸಿದವರು ಮತ್ತೆ ಮರಳಿರಲಿಲ್ಲ.
ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗುರುವಾರ ಆಡಲಿದೆ. ಫೈನಲ್ ಭಾನುವಾರ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.