ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ ಓಪನ್ | ಡಯಾನಾ, ಜ್ವೆರೇವ್ ಮುನ್ನಡೆ; ಸೆಮಿಫೈನಲ್‌ಗೆ ಮೆಡ್ವೆಡೇವ್‌

Published 24 ಜನವರಿ 2024, 22:33 IST
Last Updated 24 ಜನವರಿ 2024, 22:33 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಭರ್ಜರಿ ಸರ್ವ್‌ಗಳ ಆಟಗಾರ ಹ್ಯೂಬರ್ಟ್‌ ಹುರ್ಕಾಝ್ ಅವರ ಸುದೀರ್ಘ ಹೋರಾಟವನ್ನು ಬದಿಗೊತ್ತಿದ ಎರಡು ಬಾರಿಯ ರನ್ನರ್ ಅಪ್‌ ಡೇನಿಯಲ್ ಮೆಡ್ವೆಡೇವ್‌ ಬುಧವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಸೆಮಿಫೈನಲ್ ತಲುಪಿದರು. ಇನ್ನೊಂದೆಡೆ ಅರ್ಹತಾ ಸುತ್ತಿನಿಂದ ಬಂದಿದ್ದ ಉಕ್ರೇನ್‌ನ ಆಟಗಾರ್ತಿ ಡಯಾನಾ ಎಸ್ಟ್ರೆಮ್‌ಸ್ಕಾ ಅವರ ‘ಕನಸಿನ ಓಟ’ ಅಬಾಧಿತವಾಗಿ ಮುಂದುವರಿದಿದೆ.

ರಾಡ್‌ ಲೇವರ್ ಅರೇನಾದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೂರನೇ ಕ್ರಮಾಂಕದ ಮೆಡ್ವೆಡೇವ್‌ 7–6 (7–4), 2–6, 6–3, 5–7, 6–4 ರಿಂದ ಪೋಲೆಂಡ್‌ನ ಆಟಗಾರನನ್ನು ಸೋಲಿಸಿದರು. ಬಿಸಿಲಿನಲ್ಲಿ ಸುಮಾರು ನಾಲ್ಕು ತಾಸುಗಳ ಹೋರಾಟದ ನಂತರ ಕುಸಿದು ಬಿದ್ದ  ಅನುಭವವಾಯಿತು ಎಂದು ಮೆಡ್ವೆಡೇವ್ ಹೇಳಿದರು.

ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಮೆಡ್ವೆಡೇವ್‌ ಸೆಮಿಫೈನಲ್‌ನಲ್ಲಿ 6ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಎದುರಿಸಲಿದ್ದಾರೆ. ಜರ್ಮನಿಯರ ಜ್ವರೆವ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರನ್ನು 6-1, 6-3, 6-7 (2/7), 6-4 ರಿಂದ ಹಿಮ್ಮೆಟ್ಟಿಸಿದರು.

27 ವರ್ಷದ ಮೆಡ್ವೆಡೇವ್‌ 2021ರ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್‌ ಅವರಿಗೆ ಮಣಿದಿದ್ದರು. ಮರು ವರ್ಷ ರಫೆಲ್ ನಡಾಲ್ ಎದುರು ಸೋತಿದ್ದರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಮೊದಲ ಪಂದ್ಯದಲ್ಲಿ 93ನೇ ಕ್ರಮಾಂಕದ ಯಸ್ಟ್ರೆಮ್‌ಸ್ಕಾ ಅವರು ಶ್ರೇಯಾಂಕರಹಿತ ಆಟಗಾರ್ತಿ ಲಿಂಡಾ ನೊಸ್ಕೊವಾ ಅವರನ್ನು 6–3, 6–4 ರಿಂದ ಸೋಲಿಸಿ, ಓಪನ್ ಯುಗದಲ್ಲಿ (1968ರ ನಂತರ) ಈ ಟೂರ್ನಿಯ ಸೆಮಿಫೈನಲ್ ತಲುಪಿದ ಎರಡನೇ ಕ್ವಾಲಿಫೈಯರ್ (ಅರ್ಹತಾ ಸುತ್ತಿನಿಂದ ಬಂದ) ಆಟಗಾರ್ತಿ ಎನಿಸಿದರು. 1978ರಲ್ಲಿ ಆಸ್ಟ್ರೇಲಿಯಾದ ಕ್ರಿಸ್ಟೀನ್ ಮೆಟಿಸನ್ ಈ ಹಂತ ತಲುಪಿದ್ದ ಮೊದಲ ಕ್ವಾಲಿಫೈಯರ್.

23 ವರ್ಷದ ಎಸ್ಟ್ರೆಮ್‌ಸ್ಕಾ ಗೆಲುವಿನ ನಂತರ ಟಿವಿ ಕ್ಯಾಮೆರಾ ಲೆನ್ಸ್‌ ಮೇಲೆ, ಉಕ್ರೇನ್‌ ಯೋಧರನ್ನು ಬೆಂಬಲಿಸುವ ಸಂದೇಶವನ್ನು ಬರೆದರು. ‘ಯೋಧರ ಬಗ್ಗೆ ಹೆಮ್ಮೆಯಿದೆ. ಅವರಿಗೆ ದೊಡ್ಡ ಗೌರವ ಸಲ್ಲಬೇಕು’ ಎಂದರು. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಅವರು ಏಳನೇ ಶ್ರೇಯಾಂಕದ ಮರ್ಕೆತಾ ವೊಂದ್ರುಸೋವಾ ಮತ್ತು ನಾಲ್ಕನೇ ಸುತ್ತಿನಲ್ಲಿ ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿದ್ದಾರೆ.

ಅವರ ಮುಂದಿನ ಎದುರಾಳಿ 12ನೇ ಶ್ರೇಯಾಂಕದ ಝೆಂಗ್‌ ಕ್ವಿನ್ವೆನ್‌. ಚೀನಾದ ಈ ಆಟಗಾರ್ತಿ 6–7 (4–7), 6–3, 6–1 ರಿಂದ ರಷ್ಯಾದ ಅನ್ನಾ ಕಲಿನ್‌ಸ್ಕಾಯಾ ಅವರನ್ನು ಪರಾಭವಗೊಳಿಸಿದರು. 21 ವರ್ಷದ ಝೆಂಗ್ ಕೂಡ ಮೊದಲ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗೆ ಯತ್ನಿಸುತ್ತಿದ್ದಾರೆ. ಅವರು ಇದುವರೆಗಿನ ಎಂಟು ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಕ್ವಾರ್ಟರ್‌ಫೈನಲ್‌ ದಾಟಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT