ಗುರುವಾರ , ಆಗಸ್ಟ್ 11, 2022
27 °C

ಅಂಕಿತಾಗೆ ಅಲ್‌ ಹಬ್ತೂರ್‌ ಚಾಲೆಂಜ್‌ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತದ ಟೆನಿಸ್ ತಾರೆ ಅಂಕಿತಾ ರೈನಾ ಅವರು ಇಲ್ಲಿ ನಡೆದ ಅಲ್ ಹಬ್ತೂರ್ ಚಾಲೆಂಜ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಅವರು ಕೊರೊನಾ ಕಾಲದಲ್ಲಿ ಮೂರನೇ ಬಾರಿ ಡಬಲ್ಸ್ ಟ್ರೋಫಿ ಗೆದ್ದುಕೊಂಡಂತಾಗಿದೆ.

ಜಾರ್ಜಿಯಾದ ಏಕಟೆರಿನಾ ಗಾರ್ಗೊಜ್ ಜೊತೆಗೂಡಿದ ಅಂಕಿತಾ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಶನಿವಾರ 6–4, 3–6, 10–6ರಿಂದ ಅಲಿಯೋನಾ ಬೊಲ್ಸೊವಾ ಜದೊಯ್‌ನೊವ್‌ (ಸ್ಪೇನ್‌) ಹಾಗೂ ಕಾಜಾ ಜುವಾನ್‌ (ಸ್ಲೋವೇಕಿಯಾ) ಅವರನ್ನು ಮಣಿಸಿದರು. ಒಟ್ಟು ₹ 73 ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ಶ್ರೇಯಾಂಕರಹಿತ ಜೋಡಿಗೆ ಜಯ ಒಲಿಯಿತು.

ಈ ಋತುವಿನಲ್ಲಿ ಅಂಕಿತಾ ಡಬಲ್ಸ್ ವಿಭಾಗದಲ್ಲಿ ನಾಲ್ಕನೇ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಈ ಹಿಂದೆ ಗೆದ್ದ ಎರಡು ಟೂರ್ನಿಗಳ ಬಹುಮಾನ ಮೊತ್ತ ತಲಾ ₹ 18 ಲಕ್ಷ ಆಗಿತ್ತು.

ಈ ವರ್ಷದ ಫೆಬ್ರುವರಿಯಲ್ಲಿ ಥಾಯ್ಲೆಂಡ್‌ನ ನೊಂಥಬುರಿಯಲ್ಲಿ ನಡೆದ ಎರಡು ಟೂರ್ನಿಗಳಲ್ಲಿ ನೆದರ್ಲೆಂಡ್ಸ್‌ನ ಬಿಬಿಯಾನೆ ಸ್ಕೂಪ್ಸ್ ಅವರ ಜೊತೆಯಾಗಿ ಪ್ರಶಸ್ತಿ ಗರಿ ಮುಡಿಸಿಕೊಂಡಿದ್ದ ಅಂಕಿತಾ, ಜೋಧ್‌ಪುರದಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ಸ್ಅಪ್‌ ಆಗಿದ್ದರು. ಜೋಧ್‌ಪುರ ಟೂರ್ನಿಯಲ್ಲಿ ಸ್ನೇಹಲ್ ಮಾನೆ ಜೊತೆಗೂಡಿ ಅಂಕಿತಾ ಕಣಕ್ಕಿಳಿದಿದ್ದರು.

‘ಡಬಲ್ಸ್‌ನಲ್ಲಿ ಆಡಿದ ಅನುಭವವು ಸಿಂಗಲ್ಸ್‌ನಲ್ಲಿ ನನಗೆ ಅನುಕೂಲವಾಗಿದೆ. ಡಬಲ್ಸ್‌ನಲ್ಲಿ ಚೆನ್ನಾಗಿ ಆಡಿದ ಬಳಿಕ ಸಿಂಗಲ್ಸ್ ಕಣಕ್ಕಿಳಿದ ಸಂದರ್ಭದಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದೇನೆ‘ ಎಂದು ಗೆಲುವಿನ ಕುರಿತು ಅಂಕಿತಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು