ಮಂಗಳವಾರ, ಜೂನ್ 28, 2022
21 °C

ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ ಘೋಷಣೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ತವರಿನಂಗಳದಲ್ಲಿ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದು ಎರಡೇ ತಿಂಗಳ ಒಳಗೆ ಆಸ್ಟ್ರೇಲಿಯಾದ ಯುವ ಟೆನಿಸ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ನಿವೃತ್ತಿ ಘೋಷಿಸಿದ್ದಾರೆ. ಅವರಿಗೀಗ 25 ವರ್ಷ. ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವಾಗಲೇ ಈ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. 

ಮೂರು ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಒಡತಿ ಬಾರ್ಟಿ ಬುಧವಾರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೊ ತುಣುಕಿನಲ್ಲಿ ನಿವೃತ್ತಿ ವಿಷಯ ಪ್ರಕಟಿಸಿದ್ದಾರೆ. ’ವೈಯಕ್ತಿಕವಾಗಿ ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ನನ್ನ ಮನಸ್ಸು ಹೇಳಿತು. ಬೇರೆ ಕನಸನ್ನು ನನಸುಗೊಳಿಸಲು ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಅವರು ಗದ್ಗದಿತರಾಗಿ ಹೇಳಿದ್ದಾರೆ.

ಬಾರ್ಟಿ ಈ ಹಿಂದೆಯೂ ಒಮ್ಮೆ ಟೆನಿಸ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದರು. 2011ರಲ್ಲಿ ವಿಂಬಲ್ಡನ್ ಜೂನಿಯರ್ ವಿಭಾಗದಲ್ಲಿ ಅವರು ಚಾಂಪಿಯನ್‌ ಆಗಿದ್ದರು. ಆಗ 15 ವರ್ಷದವರಾಗಿದ್ದ ಅವರು ಭರವಸೆ ಮೂಡಿಸಿದ್ದರು. ಆದರೆ 2014ರಲ್ಲಿ ಎರಡು ವರ್ಷ ಆಡದೇ ಇರಲು ನಿರ್ಧರಿಸಿದ್ದರು. ‍ಪ್ರಯಾಣದ ಸುಸ್ತು ಮತ್ತು ಒತ್ತಡ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ಎರಡು ವರ್ಷ ವೃತ್ತಿಪರ ಕ್ರಿಕೆಟ್ ಆಡಿದ ನಂತರ ರ‍್ಯಾಕೆಟ್ ಹಿಡಿದು ಕಣಕ್ಕೆ ಮರಳಿದ್ದರು. 2019ರಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಮೊದಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಈ ವರ್ಷ ಜನವರಿಯಲ್ಲಿ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಚಾಂಪಿಯನ್ ಆಗಿದ್ದರು.

ಬಾರ್ಟಿ ವೃತ್ತಿಪರ ಟೆನಿಸ್ ಆಡಲು ಶುರು ಮಾಡಿದ್ದು 2010ರಲ್ಲಿ. ಸತತ 114 ವಾರ ಸೇರಿದಂತೆ ಒಟ್ಟು 121 ವಾರಗಳಿಂದ ಅಗ್ರ ಕ್ರಮಾಂಕದಲ್ಲಿ ಇದ್ದಾರೆ. ರ‍್ಯಾಂಕಿಂಗ್‌ನ ಅಗ್ರ ಸ್ಥಾನದಲ್ಲಿರುವ ಸಂದರ್ಭದಲ್ಲೇ ಕಣದಿಂದ ನಿವೃತ್ತಿ ಹೊಂದಿರುವ ಎರಡನೇ ಆಟಗಾರ್ತಿ ಅವರು. 2008ರಲ್ಲಿ ಜಸ್ಟಿನ್ ಹೆನಿನ್ ನಿವೃತ್ತಿಯಾಗುವಾಗ ಮೊದಲ ಸ್ಥಾನದಲ್ಲಿದ್ದರು.

*
ಬಾರ್ಟಿ, ಈ ಬೇಸರವನ್ನು ನಾನು ಹೇಗೆ ತಡೆದುಕೊಳ್ಳಲಿ? ಇನ್ನು ಟೂರ್ನಿಗಳಿಗೆ ಹೋಗುವಾಗ ನೀನು ಜೊತೆಯಲ್ಲಿರುವುದಿಲ್ಲವಲ್ಲ. ಮುಂದೇನು? ಗಾಲ್ಫ್‌ನಲ್ಲಿ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವೆಯಾ?
-ಸಿಮೋನಾ ಹಲೆಪ್, ರೊಮೇನಿಯಾ ಆಟಗಾರ್ತಿ

*
ಅತ್ಯುತ್ತಮ ಆಟದ ಮೂಲಕ ಗಮನ ಸೆಳೆಯಲು ನಿಮಗೆ ಸಾಧ್ಯವಾಗಿತ್ತು. ನಿಮ್ಮೊಂದಿಗೆ ಕ್ರೀಡಾಂಗಣದಲ್ಲಿ ಸೆಣಸಲು ಲಭಿಸಿದ ಅವಕಾಶ ಅಪೂರ್ವವಾಗಿತ್ತು. ಮುಂದಿನ ಬದುಕು ಸುಖಕರವಾಗಿರಲಿ.
-ಕರೊಲಿನಾ ಪ್ಲಿಸ್ಕೋವ, ಜೆಕ್ ಗಣರಾಜ್ಯದ ಆಟಗಾರ್ತಿ

ಆ್ಯಶ್ಲಿ ಬಾರ್ಟಿ

(ದೇಶ ಆಸ್ಟ್ರೇಲಿಯಾ)

ರ‍್ಯಾಂಕಿಂಗ್ 1

ಡಬಲ್ಸ್ ರ‍್ಯಾಂಕಿಂಗ್ - 101

ವಯಸ್ಸು - 25

ಒಟ್ಟು ಪ್ರಶಸ್ತಿ - 15

ಗ್ರ್ಯಾನ್‌ಸ್ಲಾಂ ಪ್ರಶಸ್ತಿ - 3

ಆಸ್ಟ್ರೇಲಿಯನ್ ಓಪನ್ (2022)

ವಿಂಬಲ್ಡನ್ (2021)

ಫ್ರೆಂಚ್ ಓಪನ್ (2019)

ಗ್ರ್ಯಾನ್‌ಸ್ಲಾಂನಲ್ಲಿ ಸಾಧನೆ

ಜಯ - 57

ಸೋಲು - 24

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು