ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಪ್ರಜ್ಞೇಶ್‌ ಛಲದ ಆಟಕ್ಕೆ ಒಲಿದ ಜಯ

7
ಕ್ವಾರ್ಟರ್‌ ಫೈನಲ್‌ಗೆ ಸುಮಿತ್‌, ಸಾಕೇತ್‌

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಪ್ರಜ್ಞೇಶ್‌ ಛಲದ ಆಟಕ್ಕೆ ಒಲಿದ ಜಯ

Published:
Updated:

ಬೆಂಗಳೂರು: ಸಂದಿಗ್ಧ ಪರಿಸ್ಥಿತಿಯಲ್ಲಿ ಛಲದಿಂದ ಹೋರಾಡಿದರೆ ನಿಶ್ಚಿತವಾಗಿಯೂ ಗೆಲುವಿನ ತೋರಣ ಕಟ್ಟಬಹುದು ಎಂಬುದನ್ನು ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಬುಧವಾರ ಸಾಬೀತು ಮಾಡಿದರು.

ಕಬ್ಬನ್‌ ಪಾರ್ಕ್‌ನಲ್ಲಿರುವ ಕೆಎಸ್‌ಎಲ್‌ಟಿಎ ಅಂಗಳದಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ 4–6, 6–4, 7–5ರಲ್ಲಿ ಜರ್ಮನಿಯ ಸೆಬಾಸ್ಟಿಯನ್‌ ಫ್ಯಾನ್ಸೆಲೋವ್‌ ಅವರನ್ನು ಪರಾಭವಗೊಳಿಸಿದರು.

ನಿರ್ಣಾಯಕ ಸೆಟ್‌ನಲ್ಲಿ ಪ್ರಜ್ಞೇಶ್‌ 2–5ರಿಂದ ಹಿಂದಿದ್ದ ಕಾರಣ ಸೆಂಟರ್‌ ಕೋರ್ಟ್‌ನಲ್ಲಿ ಸೇರಿದ್ದ ಅಭಿಮಾನಿಗಳು ಭಾರತದ ಆಟಗಾರನ ಸೋಲು ಖಚಿತ ಎಂದೇ ಭಾವಿಸಿದ್ದರು. ಆದರೆ ಪ್ರಜ್ಞೇಶ್‌ ಈ ನಿರೀಕ್ಷೆಯನ್ನು ತಲೆಕೆಳಗಾಗಿಸಿದರು. ಸತತ ಐದು ಗೇಮ್‌ ಜಯಿಸಿ ಎದುರಾಳಿಯನ್ನು ಕಂಗೆಡಿಸಿದರು.

12ನೇ ಗೇಮ್‌ನಲ್ಲಿ ಬಿರುಸಿನ ಸರ್ವ್‌ಗಳನ್ನು ಮಾಡಿದ ಪ್ರಜ್ಞೇಶ್‌, ಮ್ಯಾಚ್‌ ಪಾಯಿಂಟ್‌ ಕಲೆಹಾಕುತ್ತಿದ್ದಂತೆ ಕ್ರೀಡಾಂಗಣದಲ್ಲಿ ಸಂಭ್ರಮ ಮೇಳೈಸಿತು. ಟೆನಿಸ್‌ ಪ್ರಿಯರು ಚಪ್ಪಾಳೆ ತಟ್ಟಿ ಭಾರತದ ಆಟಗಾರನನ್ನು ಅಭಿನಂದಿಸಿದರು.

ನಾಲ್ಕನೇ ಶ್ರೇಯಾಂಕದ ಆಟಗಾರ ಪ್ರಜ್ಞೇಶ್‌ಗೆ ಮೊದಲ ಸೆಟ್‌ನಲ್ಲಿ ನಿರಾಸೆ ಎದುರಾಯಿತು. ಮೊದಲ ಎಂಟು ಗೇಮ್‌ಗಳಲ್ಲಿ ಉಭಯ ಆಟಗಾರರು ದಿಟ್ಟ ಆಟ ಆಡಿದರು. ಹೀಗಾಗಿ 4–4 ಸಮಬಲ ಕಂಡುಬಂತು. ಒಂಬತ್ತನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಸೆಬಾಸ್ಟಿಯನ್‌ 5–4ರ ಮುನ್ನಡೆ ಗಳಿಸಿದರು. ಮರು ಗೇಮ್‌ನಲ್ಲಿ ಸರ್ವ್‌ ಕಳೆದುಕೊಂಡ ಪ್ರಜ್ಞೇಶ್‌ ಸೆಟ್‌ ಕೈಚೆಲ್ಲಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 144ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಪಾದರಸದಂತಹ ಚಲನೆಯ ಮೂಲಕ ಎದುರಾಳಿ ಮಾಡಿದ ಸರ್ವ್‌ಗಳನ್ನು ಹಿಂತಿರುಗಿಸುತ್ತಿದ್ದ ಅವರು ‘ಏಸ್‌’ ಮತ್ತು ‘ವಿನ್ನರ್‌’ಗಳನ್ನು ಸಿಡಿಸಿ ಸಂಭ್ರಮಿಸಿದರು.

ಮೂರನೇ ಸೆಟ್‌ನ ಆರಂಭದಲ್ಲಿ ಸೆಬಾಸ್ಟಿಯನ್‌ ಮೇಲುಗೈ ಸಾಧಿಸಿದರು. ಏಳನೇ ಗೇಮ್‌ನ ಆಟ ಮುಗಿದಾಗ 5–2ರಿಂದ ಮುಂದಿದ್ದ ಅವರು ನಂತರ ಭಾರತದ ಆಟಗಾರನ ಅಬ್ಬರಕ್ಕೆ ಬೆಚ್ಚಿದರು.

ಸುಮಿತ್‌ ಆಟದ ಸೊಬಗು: ಹಾಲಿ ಚಾಂಪಿಯನ್‌ ಸುಮಿತ್‌ ನಗಾಲ್‌ ಆಟದ ಸೊಬಗು ಬುಧವಾರವೂ ಅನಾವರಗೊಂಡಿತು.

ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸುಮಿತ್‌ 6–3, 7–6ರಿಂದ ಬ್ರಿಟನ್‌ನ ಜೇಮ್ಸ್‌ ವಾರ್ಡ್‌ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಸುಮಿತ್‌ ನಿರಾಯಾಸವಾಗಿ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ವಾರ್ಡ್‌, ಭಾರತದ ಆಟಗಾರನಿಗೆ ತೀವ್ರ ಪೈಪೋಟಿ ಒಡ್ಡಿದರು. ಹೀಗಾಗಿ 6–6ರ ಸಮಬಲ ಕಂಡುಬಂತು. ಆದರೆ ‘ಟೈ ಬ್ರೇಕರ್‌’ನಲ್ಲಿ ಸುಮಿತ್‌ ಮಿಂಚಿದರು.

ಇನ್ನೊಂದು ಪಂದ್ಯದಲ್ಲಿ ಸಾಕೇತ್‌ ಮೈನೇನಿ 6–1, 3–6, 6–1ರಲ್ಲಿ ಈಜಿಪ್ಟ್‌ನ ಯೂಸುಫ್‌ ಹೊಸಾಮ್‌ ಎದುರು ಗೆದ್ದರು.

ಶಶಿಕುಮಾರ್‌ ಮುಕುಂದ್‌ ಅವರು ಸ್ಲೊವೇಕಿಯಾದ ಎರಡನೇ ಶ್ರೇಯಾಂಕದ ಆಟಗಾರ ಬ್ಲಾಜ್‌ ಕ್ಯಾವಸಿಕ್‌ ಎದುರು ವಿಜಯಿಯಾದರು.

7–6ರಿಂದ ಮೊದಲ ಸೆಟ್‌ ಗೆದ್ದ ಮುಕುಂದ್‌, ನಂತರದ ಸೆಟ್‌ನಲ್ಲಿ 3–1ರಿಂದ ಮುಂದಿದ್ದರು. ಈ ವೇಳೆ ಬ್ಲಾಜ್‌, ಸ್ವಯಂ ನಿವೃತ್ತಿ ಪಡೆದು ಅಂಗಳದಿಂದ ಹೊರ ನಡೆದರು.

ಇತರ ಪಂದ್ಯಗಳಲ್ಲಿ ಬ್ರೇಡನ್‌ ಶುನರ್‌ 6–4, 7–6ರಲ್ಲಿ ಕ್ವಿಂಟನ್‌ ಹ್ಯಾಲಿಸ್‌ ಎದುರೂ, ಅಲೆಕ್ಸಾಂಡರ್‌ ನೆಡೊವ್ಯೆಸೋವ್‌ 6–2, 6–4ರಲ್ಲಿ ಮಾರ್ಕ್‌ ಪೋಲ್ಸ್‌ಮನ್‌ ಮೇಲೂ, ಸೆಮ್‌ ಇಕೆಲ್‌ 7–5, 6–3ರಲ್ಲಿ ಜಿಜೌ ಬರ್ಗ್‌ ವಿರುದ್ಧಗೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !