ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಬೋಪಣ್ಣ ಜೋಡಿಗೆ ಸೋಲು

Last Updated 24 ಆಗಸ್ಟ್ 2020, 12:04 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಕೊರೊನಾ ಹಾವಳಿಯಿಂದಾಗಿ ಐದು ತಿಂಗಳಿಂದ ಅಂಗಣಕ್ಕೆ ಇಳಿಯದೇ ಇದ್ದ ರೋಹನ್ ಬೋಪಣ್ಣ ಪುನರಾಗಮನದ ಮೊದಲ ಪಂದ್ಯದಲ್ಲೇ ಸೋಲು ಅನುಭವಿಸಿದ್ದಾರೆ. ಇಲ್ಲಿ ಆರಂಭಗೊಂಡ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್‌ನ ಪುರುಷರ ಡಬಲ್ಸ್ ಪಂದ್ಯದಲ್ಲಿ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಲೊವ್ ಜೋಡಿ ಮಾರ್ಸೆಲ್ ಗ್ರಾನೊಲೆರ್ಸ್ ಮತ್ತು ಹೆರೋಶಿಯೊ ಜೆಬಲ್ಲೊಸ್ ಎದುರು 4–6, 6–7(1)ರಲ್ಲಿ ಸೋತರು. 2019ರ ಅಮೆರಿಕ ಓಪನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮಾರ್ಸೆಲ್ ಮತ್ತು ಹೆರೋಶಿಯೊರನ್ನರ್ ಅಪ್ ಆಗಿದ್ದರು.

ಈ ತಿಂಗಳ 31ರಂದು ಆರಂಭವಾಗುವ ಅಮೆರಿಕ ಓಪನ್ ಟೂರ್ನಿಗೂ ಮೊದಲು ಟೆನಿಸ್ ಜಗತ್ತಿಗೆ ಹುರುಪು ತುಂಬುವ ಟೂರ್ನಿ ಎಂದೇ ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್‌ ಅನ್ನುಭಾವಿಸಲಾಗಿದೆ. ಮಾರ್ಚ್‌ ತಿಂಗಳಲ್ಲಿ ನಡೆದ ಡೇವಿಸ್ ಕಪ್ ಟೂರ್ನಿಯ ನಂತರ ರೋಹನ್ ಬೋಪಣ್ಣ ಕಣಕ್ಕೆ ಇಳಿದಿರಲಿಲ್ಲ. ಕಳೆದ ವರ್ಷ ನಡೆದ ಇಂಡಿನ್ ವೆಲ್ಸ್‌ ಮಾಸ್ಟರ್ಸ್ ಟೂರ್ನಿಯ ಬಳಿಕ ಓಪನ್ ಟೂರ್ನಿಗಳಲ್ಲಿ ಶಪೊವಲೊವ್ ಜೊತೆ ಅವರು ಆಡುತ್ತಿದ್ದಾರೆ. ಇಂಡಿನ್ ವೆಲ್ಸ್‌ನಲ್ಲಿ ಅವರಿಗೆ ಭಾರತದವರೇ ಆದ ದಿವಿಜ್ ಶರಣ್ ಜೋಡಿಯಾಗಿದ್ದರು.

‘ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಾಗಿತ್ತು. ಇಲ್ಲಿ ತೋರಿದ ಸಾಮರ್ಥ್ಯ ನಿಜಕ್ಕೂ ಖುಷಿ ತಂದಿದೆ. ಐದು ತಿಂಗಳ ಬಳಿಕ ಯಾವ ಅಭ್ಯಾಸವೂ ಇಲ್ಲದೆ ನೇರವಾಗಿ ಟೂರ್ನಿಯೊಂದರಲ್ಲಿ ಪಾಲ್ಗೊಂಡಿದ್ದೇವೆ. ಸಮರ್ಥ ಜೋಡಿಯ ವಿರುದ್ಧ ಉತ್ತಮ ಆಟ ಆಡಲು ಸಾಧ್ಯವಾಗಿರುವುದರಿಂದ ಭರವಸೆ ಮೂಡಿದೆ’ ಎಂದು ರೋಹನ್ ಬೋಪಣ್ಣ ಹೇಳಿದರು.

‘ದೀರ್ಘ ಕಾಲದ ಬಿಡುವಿನ ನಂತರ ಸರಿಯಾಗಿ ಆಡಲು ಸಾಧ್ಯವಾಗುವುದೋ ಇಲ್ಲವೋ ಎಂಬ ಆತಂಕ ಇತ್ತು. ಆದರೆ ಅಂಗಣಕ್ಕೆ ಇಳಿದ ನಂತರ ಎಲ್ಲವೂ ಸುಸೂತ್ರವಾಗಿ ನಡೆಯಿತು. ಮೊದಲ ಸೆಟ್‌ನಲ್ಲಿ ಸತತ ಮೂರು ಡ್ಯೂಸ್ ಪಾಯಿಂಟ್ ಕಳೆದುಕೊಂಡದ್ದು ನಮಗೆ ಮಾರಕವಾಯಿತು. ಎದುರಾಳಿಗಳು ಇದರ ಸಂಪೂರ್ಣ ಲಾಭ ಪಡೆದುಕೊಂಡರು. ಎರಡನೇ ಸೆಟ್‌ನಲ್ಲೂ ಉತ್ತಮ ಪೈಪೋಟಿ ಕಂಡುಬಂತು. ಒಂದು ಹಂತದಲ್ಲಿ ನಮಗೆ ಸೆಟ್ ಗೆಲ್ಲುವ ಅವಕಾಶವಿತ್ತು. ಆದರೆ ಟೈಬ್ರೇಕರ್‌ನಲ್ಲಿ ಅವರು ಪಾರಮ್ಯ ಮೆರೆದರು. ಏನೇ ಇರಲಿ, ಬಿಡುವಿನ ನಂತರ ಉತ್ತಮ ಆರಂಭ ಕಂಡಿರುವುದು ಸಂತಸ ತಂದಿದೆ. ಮುಂದಿನ ಕೆಲವು ದಿನ ಅಮೆರಿಕ ಓಪನ್ ಟೂರ್ನಿಗಾಗಿ ಅಭ್ಯಾಸ ನಡೆಸಲಿದ್ದೇವೆ’ ಎಂದು ಬೋಪಣ್ಣ ತಿಳಿಸಿದರು.

ಹಿಂದೆ ಸರಿದ ನಿವಾಕ್ ಜೊಕೊವಿಚ್‌

ಪುರುಷರ ಸಿಂಗಲ್ಸ್‌ನ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಕತ್ತು ನೋವಿನಿಂದಾಗಿ ಇಲ್ಲಿ ಡಬಲ್ಸ್ ಪಂದ್ಯ ಆಡುವುದಿಲ್ಲ ಎಂದು ಹೇಳಿದ್ದಾರೆ. ಫಿಲಿಪ್ ಕ್ರಜಿನೊವಿಚ್ ಜೊತೆಗೂಡಿ ಅವರು ಭಾನುವಾರ ಕಣಕ್ಕೆ ಇಳಿಯಬೇಕಾಗಿತ್ತು. ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದ್ದು ಅರ್ಹತಾ ಸುತ್ತು ಆಡಿ ಬಂದಿರುವ ರಿಕಾರ್ಡಿಸ್ ಬೆರಂಕಿಸ್ ವಿರುದ್ಧ ಎರಡನೇ ಸುತ್ತು ಆಡಲಿದ್ದಾರೆ.

ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ ಅಮೆರಿಕದ ಟೆನೀಸ್ ಸ್ಯಾಂಡ್‌ಗ್ರೆನ್ 6–3, 7–6(9/7)ರಲ್ಲಿ ಇಟಲಿಯ ಲೊರೆನ್ಸೊ ಸೊನೊಗೊ ವಿರುದ್ಧ ಗೆಲುವು ಸಾಧಿಸಿದರು. ಅಮೆರಿಕದ ಮಾರ್ಕೋಸ್ ಗಿರಾನ್ ತಮ್ಮದೇ ದೇಶದ ಮೆಕೆನ್ಸಿ ಮೆಕ್‌ಡೊನಾಲ್ಡ್ ವಿರುದ್ಧ 7–6(7/2), 7–5ರಲ್ಲಿ, ಸ್ಲೊವಾಕಿಯಾದ ಅಲ್ಜಾಜ್ ಬೆಡೆನಿ ಚೀನಾದ ಕ್ರಿಸ್ಟಿಯನ್ ಗರೀನ್ ವಿರುದ್ಧ 6-4, 6-7 (8/10), 6-0ಯಿಂದ, ರಷ್ಯಾದ ಕರೇನ್ ಖಚನೊವ್ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ 6-4, 6-4ರಲ್ಲಿ, ಫ್ರಾನ್ಸ್‌ನ ರಿಚರ್ಡ್ ಗಾಸ್ಕೆಟ್ ಅಮೆರಿಕದ ಜೆಪ್ರಿ ವೂಲ್ಫ್ ವಿರುದ್ಧ 6-4, 6-4ರಲ್ಲಿ, ಅರ್ಜೆಂಟೀನಾದ ಡೀಗೊ ಶಾರ್ಟ್ಸ್‌ಮನ್‌ ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ 7-6 (7/2), 6-3ರಲ್ಲಿ ಅಮೆರಿಕದ ಜಾನ್ ಇಸ್ನೇರ್ ಪೋಲೆಂಡ್‌ನ ಹೂಬರ್ಟ್ ಹುರ್ಕಾಜ್ ವಿರುದ್ಧ 7-5, 6-4 ಗೆಲುವು ಸಾಧಿಸಿದರು.

ಮಹಿಳಾ ವಿಭಾಗದ ಮೊದಲ ಸುತ್ತಿನಲ್ಲಿ ಅಮೆರಿಕದ ಕ್ಯಾಥರಿನ್ ಬೆಲಿಸ್ ಫ್ರಾನ್ಸ್‌ನ ಒಷಿಯಾನ್ ಡೊಡಿನ್ ಎದುರು 6-2, 3-6, 7-6 (7/1)ರಲ್ಲಿ, ಎಸ್ತೋನಿಯಾದ ಅನೆಟ್ ಕೊಂಟಾವೇಟ್ ರಷ್ಯಾದ ದಾರ್ಯ ಕಸ್ತಕಿನಾ ವಿರುದ್ಧ 6-3, 6-1ರಲ್ಲಿ, ಕಜಕಸ್ತಾನದ ಯೂಲಿಯಾ ಪುಟಿನ್ಸೇವಾ ಚೀನಾದ ಜಾಂಗ್ ಶೂಯಿ ವಿರುದ್ಧ 6-4, 6-3ರಲ್ಲಿ, ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಪೋಲೆಂಡ್‌ನ ಐಗಾ ಸ್ವಾಟೆಕ್ ವಿರುದ್ಧ 6-2, 6-4ರಲ್ಲಿ, ಫ್ರಾನ್ಸ್‌ನ ಕರೋಲಿನಾ ಗ್ರೇಸಿಯಾ ಅಮೆರಿಕದ ಸ್ಲಾನೆ ಸ್ಟೀಫನ್ಸ್‌ ವಿರುದ್ಧ 6-3, 7-6 (7/4)ರಲ್ಲಿ ಗೆಲುವು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT