ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್ ಕಪ್ ಮತ್ತು ಫೆಡ್ ಕಪ್ ಫೈನಲ್ ಈ ವರ್ಷ ನಡೆಸಲಾಗದು ಎಂದ ಐಟಿಎಫ್

Last Updated 26 ಜೂನ್ 2020, 14:13 IST
ಅಕ್ಷರ ಗಾತ್ರ

ಲಂಡನ್: ಕೊರೊನಾ ವೈರಾಣು ಈ ಬಾರಿಯ ಡೇವಿಸ್ ಕಪ್‌ ಮೇಲೆಯೂ ಪರಿಣಾಮ ಬೀರಿದೆ. ಈ ವರ್ಷದ ನವೆಂಬರ್ ಕೊನೆಯಲ್ಲಿ ನಡೆಯಬೇಕಾಗಿದ್ದ ಫೈನಲ್ ಹಣಾಹಣಿಯನ್ನು 2021ರ ನವೆಂಬರ್‌ನಲ್ಲಿ ನಡೆಸಲಾಗುವುದು ಎಂದು ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ತಿಳಿಸಿದೆ.‌ ಫೆಡ್‌ ಕಪ್ ಫೈನಲ್ ಹಣಾಹಣಿಯನ್ನೂ ಒಂದು ವರ್ಷ ಮುಂದೂಡಲಾಗಿದೆ ಎಂದು ಅದು ವಿವರಿಸಿದೆ.

‘ಡೇವಿಸ್ ಕಪ್ ಫೈನಲ್ ಹಣಾಹಣಿ ಈ ವರ್ಷ ನಡೆಯುವುದಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ’ ಎಂದು ಬಾರ್ಸಿಲೋನಾದ ಫುಟ್‌ಬಾಲ್ ಆಟಗಾರ ಜೆರಾಲ್ಡ್ ಪೀಕ್ ಹೇಳಿದರು. ಅವರ ಮಾಲೀಕತ್ವದ ಕಾಸ್ಮಸ್ ಟೆನಿಸ್ ಕಂಪೆನಿಯು ಡೇವಿಸ್ ಕಪ್ ಮೇಲೆ ಭಾರಿ ಮೊತ್ತವನ್ನು ಹೂಡಿದೆ ಎಂದು ಐಟಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಡ್‌ ಕಪ್ ಟೆನಿಸ್‌ ಟೂರ್ನಿಯೂ ಮುಂದಕ್ಕೆ

ಅನಿರ್ದಿಷ್ಟ ಕಾಲ ಮುಂದೂಡಿರುವ ಫೆಡ್ ಕಪ್ ಟೆನಿಸ್ ಟೂರ್ನಿಯ ಫೈನಲ್‌ ಹಣಾಹಣಿಯನ್ನು ಮುಂದಿನ ವರ್ಷದ ಏಪ್ರಿಲ್ 13ರಿಂದ 18ರ ವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಐಟಿಎಫ್‌ ತಿಳಿಸಿದೆ. 12 ಮಹಿಳಾ ತಂಡಗಳು ಪಾಲ್ಗೊಳ್ಳುವ ಟೂರ್ನಿಯನ್ನು ಹಂಗರಿಯಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಮಾರ್ಚ್‌ನಲ್ಲಿ ಜಗತ್ತಿನ ವಿವಿಧ ಕಡೆಗಳಲ್ಲಿ ನಡೆಯಬೇಕಾಗಿದ್ದ ಎಂಟು ಪ್ಲೇ ಆಫ್ ಹಣಾಹಣಿಗಳನ್ನೂ ಸ್ಥಗಿತಗೊಳಿಸಲಾಗಿತ್ತು. ಈ ಪಂದ್ಯಗಳನ್ನು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.

ಡೇವಿಸ್ ಕಪ್ ಮತ್ತು ಫೆಡ್ ಕಪ್ ಟೂರ್ನಿಗಳಿಗೆ ಕಳೆದ ವರ್ಷ ಹೊಸ ರೂಪ ನೀಡಲಾಗಿತ್ತು. ಪರಿಷ್ಕೃತ ಮಾದರಿಯ ಮೊದಲ ಆವೃತ್ತಿ ಮ್ಯಾಡ್ರಿಡ್‌ನಲ್ಲಿ ನಡೆದಿತ್ತು.

‘ಎರಡೂ ಟೂರ್ನಿಗಳ ಫೈನಲ್ ಈ ವರ್ಷ ನಡೆಸಲು ಸಾಧ್ಯವಾಗದೇ ಇರುವುದು ಬೇಸರದ ವಿಷಯ. ಆದರೆ ಮುಂದಿನ ವರ್ಷ ಅದ್ದೂರಿಯಾಗಿ ಆಯೋಜಿಸಲಾಗುವುದು’ ಎಂದು ಐಟಿಎಫ್ ಅಧ್ಯಕ್ಷ ಡೇವಿಡ್ ಹಗರ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT