ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಜೊಕೊ, ಅಲ್ಕರಾಜ್‌ ಮೇಲೆ ಚಿತ್ತ

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ ಇಂದಿನಿಂದ
Published 27 ಆಗಸ್ಟ್ 2023, 14:00 IST
Last Updated 27 ಆಗಸ್ಟ್ 2023, 14:00 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಋತುವಿನ ಕೊನೆಯ ಗ್ರ್ಯಾನ್‌ಸ್ಲಾಮ್‌ ಎನಿಸಿರುವ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ ಸೋಮವಾರ ಆರಂಭವಾಗಲಿದ್ದು, ನೊವಾಕ್‌ ಜೊಕೊವಿಚ್‌ ಮತ್ತು ಕಾರ್ಲೊಸ್‌ ಅಲ್ಕರಾಜ್‌ ನಡುವೆ ಮತ್ತೊಮ್ಮೆ ಪೈಪೋಟಿ ನಡೆಯುವ ನಿರೀಕ್ಷೆ ಮೂಡಿದೆ.

ಆರು ವಾರಗಳ ಹಿಂದೆಯಷ್ಟೆ ವಿಂಬಲ್ಡನ್‌ ಟೂರ್ನಿಯ ಫೈನಲ್‌ನಲ್ಲಿ ಸ್ಪೇನ್‌ನ ಅಲ್ಕರಾಜ್‌ ಅವರು ಸರ್ಬಿಯದ ಜೊಕೊವಿಚ್‌ ವಿರುದ್ಧ ಗೆದ್ದಿದ್ದರು. ಇಬ್ಬರ ನಡುವಣ ಜಿದ್ದಾಜಿದ್ದಿನ ಪೈಪೋಟಿ, ಟೆನಿಸ್‌ ಪ್ರಿಯರ ಮನಗೆದ್ದಿತ್ತು.

ಕಳೆದ ವಾರ ನಡೆದಿದ್ದ ಸಿನ್ಸಿನಾಟಿ ಓಪನ್‌ ಟೂರ್ನಿಯ ಫೈನಲ್‌ನಲ್ಲೂ ಇಬ್ಬರು ಮತ್ತೊಂದು ರೋಚಕ ಹಣಾಹಣಿ ನಡೆಸಿದ್ದರು. 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಜೊಕೊವಿಚ್, 20 ವರ್ಷದ ಎದುರಾಳಿಯನ್ನು ಮಣಿಸಿ ವಿಂಬಲ್ಡನ್‌ ಸೋಲಿಗೆ ಮುಯ್ಯಿ ತೀರಿಸಿಕೊಂಡಿದ್ದರು.

ಅಮೆರಿಕ ಓಪನ್‌ ಟೂರ್ನಿಯಲ್ಲೂ ಇವರಿಬ್ಬರು ಫೈನಲ್‌ ಪ್ರವೇಶಿಸುವ ನೆಚ್ಚಿನ ಆಟಗಾರರು ಎನಿಸಿಕೊಂಡಿದ್ದಾರೆ. ಜೊಕೊವಿಚ್‌ ಕಳೆದ ಬಾರಿ ಇಲ್ಲಿ ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಅಲ್ಕರಾಜ್‌, ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಜಯಿಸಿದ್ದರು.

ಎರಡನೇ ಶ್ರೇಯಾಂಕ ಹೊಂದಿರುವ ಜೊಕೊವಿಚ್‌, ಸೋಮವಾರ ನಡೆಯುವ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲೆರ್‌ ಅವರನ್ನು ಎದುರಿಸಲಿದ್ದಾರೆ. ಅಲ್ಕರಾಜ್‌ ಅವರು ಮಂಗಳವಾರ ಜರ್ಮನಿಯ ಡಾಮಿನಿಕ್ ಕೊಪ್‌ಫೆರ್‌ ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸುವರು.

ಅಲ್ಕರಾಜ್‌ ಅವರಿಗೆ ಫೈನಲ್‌ ಹಾದಿಯಲ್ಲಿ 2021ರ ಚಾಂಪಿಯನ್‌ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಮತ್ತು ಇಟಲಿಯ ಯಾನಿಕ್‌ ಸಿನೆರ್‌ ಅವರ ಸವಾಲು ಎದುರಾಗುವ ಸಾಧ್ಯತೆಯಿದೆ.

ಮಹಿಳೆಯರ ವಿಭಾಗದಲ್ಲಿ ಎಲ್ಲರ ಚಿತ್ತ 19 ವರ್ಷದ ಆಟಗಾರ್ತಿ ಅಮೆರಿಕದ ಕೊಕೊ ಗಾಫ್‌ ಮೇಲೆ ನೆಟ್ಟಿದೆ. ಅವರು ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ವಿಂಬಲ್ಡನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಅವರು ಇದೀಗ ಉತ್ತಮ ಲಯದಲ್ಲಿದ್ದಾರೆ. ಆಗಸ್ಟ್‌ ಆರಂಭದಲ್ಲಿ ನಡೆದಿದ್ದ ವಾಷಿಂಗ್ಟನ್ ಓಪನ್‌ ಜಯಿಸಿದ್ದ ಗಾಫ್‌, ಮಾಂಟ್ರಿಯಲ್‌ನಲ್ಲಿ ನಡೆದಿದ್ದ ಕೆನಡಿಯನ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. ಕಳೆದ ವಾರ ಸಿನ್ಸಿನಾಟಿ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಅದು ಅವರ ಚೊಚ್ಚಲ ಡಬ್ಲ್ಯುಟಿಎ–1000 ಪ್ರಶಸ್ತಿ ಆಗಿತ್ತು.

ಸಿನ್ಸಿನಾಟಿ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್‌ ವಿರುದ್ಧ ಗೆದ್ದಿರುವುದು, ಗಾಫ್‌ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಶ್ವಾಂಟೆಕ್‌, ಅಮೆರಿಕ ಓಪನ್‌ನಲ್ಲಿ ಕಳೆದ ಬಾರಿ ಚಾಂಪಿಯನ್‌ ಆಗಿದ್ದರು. ಈ ಬಾರಿ ಇವರಿಬ್ಬರು ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆಯಿದೆ.

ನೊವಾಕ್‌ ಜೊಕೊವಿಚ್
ನೊವಾಕ್‌ ಜೊಕೊವಿಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT