ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿ: ಸಿಟ್ಸಿಪಾಸ್, ಸ್ವಿಟೊಲಿನಾ ಮುನ್ನಡೆ

ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿ: ಗಾರ್ಸಿಯಾಗೆ ನಿರಾಸೆ
Published 1 ಜೂನ್ 2023, 1:28 IST
Last Updated 1 ಜೂನ್ 2023, 1:28 IST
ಅಕ್ಷರ ಗಾತ್ರ

ಪ್ಯಾರಿಸ್‌: ಶಿಸ್ತಿನ ಆಟವಾಡಿದ ವಿಶ್ವದ ಐದನೇ ರ್‍ಯಾಂಕ್‌ನ ಆಟಗಾರ ಸ್ಟೆಫಾನೊಸ್‌ ಸಿಟ್ಸಿಪಾಸ್ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 6–3, 7–6, 6–2 ರಲ್ಲಿ ಸ್ಪೇನ್‌ನ ರಾಬರ್ಟೊ ಕಾರ್ಬಲೆಸ್ ಬಯೆನಾ ವಿರುದ್ದ ಗೆದ್ದರು. ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಗ್ರೀಸ್‌ನ ಆಟಗಾರ ಇದಕ್ಕಾಗಿ 2 ಗಂಟೆ 16 ನಿಮಿಷಗಳನ್ನು ತೆಗೆದುಕೊಂಡರು.

ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಲು ಕಷ್ಟಪಟ್ಟಿದ್ದ ಸಿಟ್ಸಿಪಾಸ್, ಬುಧವಾರ ಹೆಚ್ಚಿನ ತಪ್ಪುಗಳನ್ನು ಮಾಡದೆ ನೇರ ಸೆಟ್‌ಗಳಿಂದ ಎದುರಾಳಿಯನ್ನು ಮಣಿಸಿದರು. ಇಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಅವರಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಕಾರ್ಲೊಸ್‌ ಅಲ್ಕರಾಜ್‌ ಎದುರಾಗುವ ಸಾಧ್ಯತೆಯಿದೆ.

ಸ್ವಿಟೊಲಿನಾ ಮುನ್ನಡೆ: ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿಗೆ ಮುನ್ನಡೆದರು.

2022ರ ಆಸ್ಟ್ರೇಲಿಯಾ ಓಪನ್‌ ಬಳಿಕ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಆಡುತ್ತಿರುವ ಸ್ವಿಟೊಲಿನಾ 2–6, 6–3, 6–1 ರಲ್ಲಿ ಆಸ್ಟ್ರೇಲಿಯಾದ ಸ್ಟಾರ್ಮ್‌ ಹಂಟರ್‌ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸೋತಿದ್ದ ಸ್ವಿಟೊಲಿನಾ ಬೇಗನೇ ಲಯ ಕಂಡುಕೊಂಡರಲ್ಲದೆ, ಮುಂದಿನ ಎರಡು ಸೆಟ್‌ಗಳಲ್ಲಿ ಆರು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಪಂದ್ಯ ತಮ್ಮದಾಗಿಸಿಕೊಂಡರು.

ಸ್ವಿಟೊಲಿನಾ ಅವರ ಪತಿ, ಫ್ರಾನ್ಸ್‌ನ ಗೇಲ್‌ ಮೊಂಫಿಲ್ಸ್‌ ಅವರು ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 3-6, 6-3, 7-5, 1-6, 7-5 ರಿಂದ ಅರ್ಜೆಂಟೀನಾದ ಸೆಬಾಸ್ಟಿಯನ್‌ ಬಾಯೆಜ್‌ ವಿರುದ್ದ ಪ್ರಯಾಸದ ಗೆಲುವು ಸಾಧಿಸಿದರು.

36 ವರ್ಷದ ಮೊಂಫಿಲ್ಸ್‌, ತನಗಿಂತ 14 ವರ್ಷಗಳಷ್ಟು ಕಿರಿಯ ಆಟಗಾರನ ವಿರುದ್ಧ ನಿರ್ಣಾಯಕ ಸೆಟ್‌ನಲ್ಲಿ 0–4 ಹಾಗೂ 30–40 ರಿಂದ ಹಿನ್ನಡೆಯಲ್ಲಿದ್ದರು. ಆ ಬಳಿಕ ಅಮೋಘ ರೀತಿಯಲ್ಲಿ ಮರುಹೋರಾಟ ನಡೆಸಿ ಪಂದ್ಯ ಗೆದ್ದರು.

ಗಾರ್ಸಿಯಾಗೆ ಆಘಾತ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಆತಿಥೇಯ ದೇಶದ ಭರವಸೆ ಎನಿಸಿದ್ದ ಐದನೇ ಶ್ರೇಯಾಂಕದ ಆಟಗಾರ್ತಿ ಕರೊಲಿನಾ ಗಾರ್ಸಿಯಾ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದರು. ರಷ್ಯಾದ ಅನಾ ಬ್ಲಿಂಕೊವಾ 4-6, 6-3, 7-5 ರಿಂದ ಗಾರ್ಸಿಯಾ ಅವರನ್ನು ಮಣಿಸಿ ಅಚ್ಚರಿಗೆ ಕಾರಣರಾದರು.

ಇಗಾ ಜಯಭೇರಿ: ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಇಗಾ ಶ್ವಾಂಟೆಕ್‌ 6–4, 6–0 ರಲ್ಲಿ ಸ್ಪೇನ್‌ನ ಕ್ರಿಸ್ಟಿನಾ ಬುಸ್ಕಾ ವಿರುದ್ಧ ಗೆದ್ದರು.

18ನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6–2, 3–6, 4–6 ರಲ್ಲಿ ಕೆನಡಾದ ಬಿಯಾಂಕ ಆಂಡ್ರೀಸ್ಕು ಎದುರು ಪರಾಭವಗೊಂಡರು.

ಇತರ ಪಂದ್ಯಗಳಲ್ಲಿ ಅಮೆರಿಕ ಲಾರೆನ್‌ ಡೇವಿಸ್‌ 6–3, 6–3 ರಿಂದ ಚೀನಾದ ಜು ಲಿನ್‌ ವಿರುದ್ಧ; ಕ್ರೊವೇಷ್ಯಾದ ಪೆಟ್ರಾ ಮಾರ್ಟಿಚ್ 3–6, 6–3, 6–2 ರಿಂದ ಅಮೆರಿಕದ ಶೆಲ್ಬಿ ರೋಜರ್ಸ್‌ ವಿರುದ್ಧ; ಇಟಲಿಯ ಜಾಸ್ಮಿನ್‌ ಪಾವೊಲಿನಿ 7-5, 2-6, 6-2 ರಿಂದ ರೊಮೇನಿಯದ ಸೊರಾನಾ ಸಿಸ್ಟಿಯಾ ವಿರುದ್ಧಗೂ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಆರನೇ ಶ್ರೇಯಾಂಕದ ಆಟಗಾರ ಡೆನ್ಮಾರ್ಕ್‌ನ ಹೋಲ್ಗರ್‌ ರೂನ್ 6-4, 3-6, 7-6, 6-2 ರಿಂದ ಅಮೆರಿಕದ ಕ್ರಿಸ್ಟೋಫರ್‌ ಯೂಬ್ಯಾಂಕ್ಸ್‌ ವಿರುದ್ಧ; ಜಪಾನ್‌ನ ಯೊಶಿಹಿಟೊ ನಿಶಿಯೊಕ 1-6, 3-6, 6-4, 6-3, 6-3 ರಿಂದ ಅಮೆರಿಕದ ಜೆ.ಜೆ.ವೂಲ್ಫ್‌ ವಿರುದ್ಧ; ಆಸ್ಟ್ರೇಲಿಯಾದ ಮ್ಯಾಕ್ಸ್‌ ಪರ್ಸೆಲ್ 7–5, 1–6, 6–4, 6–4 ರಿಂದ ತಮ್ಮದೇ ದೇಶದ ಜೋರ್ಡನ್‌ ಥಾಂಪ್ಸನ್‌ ವಿರುದ್ಧ; ಬಲ್ಗೇರಿಯದ ಗ್ರಿಗೊರ್‌ ದಿಮಿತ್ರೊವ್‌ 6–0, 6–3, 6–2 ರಿಂದ ಕಜಕಸ್ತಾನದ ಟಿಮೊಫೆ ಸ್ಕಾಟೊವ್‌ ವಿರುದ್ದ ಜಯಿಸಿದರು.

ಪಾಯಿಂಟ್‌ ಗೆದ್ದ ಸಂಭ್ರಮದಲ್ಲಿ ಸ್ಟೆಫಾನೊಸ್‌ ಸಿಟ್ಸಿಪಾಸ್ –ಎಎಫ್‌ಪಿ ಚಿತ್ರ
ಪಾಯಿಂಟ್‌ ಗೆದ್ದ ಸಂಭ್ರಮದಲ್ಲಿ ಸ್ಟೆಫಾನೊಸ್‌ ಸಿಟ್ಸಿಪಾಸ್ –ಎಎಫ್‌ಪಿ ಚಿತ್ರ
ಯೂಕಿ–ಸಾಕೇತ್‌ ಶುಭಾರಂಭ
ಭಾರತದ ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಜೋಡಿ ಪುರುಷರ ಡಬಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡಿತು. ಬುಧವಾರ ನಡೆದ ಮೊದಲ ಸುತ್ತಿನಲ್ಲಿ ಅವರು 6–3 6–2 ರಲ್ಲಿ ಫ್ರಾನ್ಸ್‌ನ ಎನ್ಜೊ ಕೊಕಾಡ್‌– ಆರ್ಥರ್‌ ರಿಂಡರ್‌ನೆಕ್‌ ವಿರುದ್ದ ಗೆದ್ದರು. ಎನ್‌.ಶ್ರೀರಾಂ ಬಾಲಾಜಿ– ಜೀವನ್‌ ನೆಡುಂಚೆಳಿಯನ್ ಜೋಡಿ 3–6 4–6 ರಲ್ಲಿ ಆಸ್ಟ್ರೇಲಿಯಾದ ಅಲೆಕ್ಸಿ ಪೊಪೈರಿನ್‌– ಬೆಲಾರಸ್‌ನ ಇಲ್ಯಾ ಇವಾಶ್ಕ ಎದುರು ಪರಾಭವಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT