ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿ: ಸೆರೆನಾ–ವೀನಸ್‌ ಮುಖಾಮುಖಿ

ಎರಡನೇ ಸುತ್ತಿನಲ್ಲಿ ಸಹೋದರಿಯರ ಸವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಮ್ (ಎಎಫ್‌ಪಿ): ಸಹೋದರಿಯರಾದ ಸೆರೆನಾ ವಿಲಿಯಮ್ಸ್‌ ಮತ್ತು ವೀನಸ್‌ ವಿಲಿಯಮ್ಸ್‌ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.

ಅಮೆರಿಕದ ಆಟಗಾರ್ತಿಯರ ನಡುವಣ ಈ ಹೋರಾಟ ಬುಧವಾರ ನಡೆಯಲಿದೆ.

ಇಟಾಲಿಯನ್‌ ಓಪನ್‌ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವ ಸೆರೆನಾ ಮೊದಲ ಸುತ್ತಿನಲ್ಲಿ 6–4, 6–2 ನೇರ ಸೆಟ್‌ಗಳಿಂದ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಸೆರೆನಾ, 76 ನಿಮಿಷಗಳ ಹೋರಾಟದಲ್ಲಿ ಅಪೂರ್ವ ಸಾಮರ್ಥ್ಯ ತೋರಿ ಅಭಿಮಾನಿಗಳನ್ನು ರಂಜಿಸಿದರು.

38 ವರ್ಷ ವಯಸ್ಸಿನ ವೀನಸ್‌ ಪ್ರಥಮ ಸುತ್ತಿನಲ್ಲಿ 7–5, 3–6, 7–6ರಲ್ಲಿ ಎಲಿಸೆ ಮರ್ಟೆನ್ಸ್‌ ವಿರುದ್ಧ ಗೆದ್ದರು. ಈ ಹೋರಾಟ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.

ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಕೂಡಾ ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಸೋಮವಾರ ನಡೆದಿದ್ದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನ ಹೊಂದಿರುವ ಮುಗುರುಜಾ 6–3, 6–4ರಲ್ಲಿ ಚೀನಾದ ಜಾಂಗ್‌ ಸೈಸಿ ಅವರನ್ನು ಮಣಿಸಿದರು.

ಮುಗುರುಜಾ ಈ ಋತುವಿನಲ್ಲಿ ಜಾಂಗ್‌ ಎದುರು ಗೆದ್ದ ಮೂರನೇ ಪಂದ್ಯ ಇದಾಗಿದೆ.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ 6–2, 6–1ರಲ್ಲಿ ಜಾಂಗ್‌ ಶೂಯಿ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅಜರೆಂಕಾ, ಎಲಿನಾ ಸ್ವಿಟೋಲಿನಾ ಎದುರು ಪೈಪೋಟಿ ನಡೆಸಲಿದ್ದಾರೆ.

ಮಂಗಳವಾರ ನಡೆದ ಮೊದಲ ಸುತ್ತಿನ ಪೈಪೋಟಿಗಳಲ್ಲಿ ಅಲೈಜ್‌ ಕಾರ್ನೆಟ್‌ 6–1, 6–4ರಲ್ಲಿ ಆರ್ಯನಾ ಸಬಲೆಂಕಾ ಎದುರೂ, ಕಾರ್ಲಾ ಸ್ವಾರೆಜ್‌ 6–4, 1–6, 6–3ರಲ್ಲಿ ಡಯಾನ ಯಸ್ಟ್ರೆಮ್‌ಸ್ಕಾ ಮೇಲೂ, ಡೇರಿಯಾ ಕಸತ್ಕಿನಾ 6–2, 7–6ರಲ್ಲಿ ಇರಿನಾ ಬೆಗು ವಿರುದ್ಧವೂ, ಮರಿಯಾ ಸಕ್ಕಾರಿ 6–1, 7–5ರಲ್ಲಿ ಅನಸ್ತೇಸಿಯಾ ಪಾವಲ್ಯುಚೆಂಕೋವಾ ಮೇಲೂ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಗಳಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ 6–3, 6–4ರಲ್ಲಿ ಅರ್ಜೆಂಟೀನಾದ ಗುಯಿಡೊ ಪೆಲ್ಲಾ ಮೇಲೆ ಗೆದ್ದರೆ, ರಾಡು ಆಲ್ಬಟ್‌ 6–3, 6–2ರಲ್ಲಿ ಫ್ರಾನ್ಸ್‌ನ ಬೆನೊಯಿಟ್‌ ಪೆಯೆರ್‌ ಅವರನ್ನು ಮಣಿಸಿದರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ನಿಕ್‌ ಕಿರ್ಗಿಯೊಸ್‌ 6–3, 3–6, 6–3ರಲ್ಲಿ ಡೇನಿಯಲ್‌ ಮೆಡ್ವೆದೇವ್‌ ಮೇಲೆ ಗೆದ್ದರು.

ಡೇವಿಡ್‌ ಗೊಫಿನ್‌ 4–6, 6–0, 6–2ರಲ್ಲಿ ಸ್ಟಾನ್ ವಾವ್ರಿಂಕ ಅವರನ್ನು ಮಣಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು