ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್‌ ಮಹಿಳೆಯರ ವಿಶ್ವ ಟೂರ್‌ ಟೆನಿಸ್‌ ಟೂರ್ನಿ: ವೈದೇಹಿ, ಶ್ರೀವಲ್ಲಿ ಶುಭಾರಂಭ

Published 21 ನವೆಂಬರ್ 2023, 23:33 IST
Last Updated 21 ನವೆಂಬರ್ 2023, 23:33 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ವೈದೇಹಿ ಚೌಧರಿ ಮತ್ತು ಶ್ರೀವಲ್ಲಿ ರಷ್ಮಿಕಾ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳೆಯರ ವಿಶ್ವ ಟೂರ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಟೆನಿಸ್‌ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ವೈದೇಹಿ 6–3, 6–3 ರಿಂದ ಅಂಜಲಿ ಅವರನ್ನು ಮಣಿಸಿದರು.

ಈಚೆಗೆ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಶ್ರೀವಲ್ಲಿ ಅವರು 6–1, 7–5 ರಿಂದ ಹುಮೇರಾ ಬಹಾರ್ಮಸ್‌ ಎದುರು ಗೆದ್ದರು. ಮೊದಲ ಸೆಟ್‌ ಸುಲಭವಾಗಿ ಜಯಿಸಿದ ರಷ್ಮಿಕಾ ಅವರಿಗೆ ಎರಡನೇ ಸೆಟ್‌ನಲ್ಲಿ ಸಾಕಷ್ಟು ಪೈಪೋಟಿ ಎದುರಿಸಬೇಕಾಯಿತು. 5–5 ರಲ್ಲಿ ಸಮಬಲ ಕಂಡುಬಂದ ಬಳಿಕ 11ನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಅವರು ಮುಂದಿನ ಗೇಮ್‌ನಲ್ಲಿ ತಮ್ಮ ಸರ್ವ್‌ ಕಾಪಾಡಿಕೊಂಡು ಪಂದ್ಯ ಜಯಿಸಿದರು.

ಅರ್ಹತಾ ಹಂತದಲ್ಲಿ ಗೆದ್ದು ಬಂದಿದ್ದ ಯಶಸ್ವಿನಿ ಪನ್ವಾರ್‌ ಮೊದಲ ಸುತ್ತಿನಲ್ಲೇ ಎಡವಿದರು. ಆರನೇ ಶ್ರೇಯಾಂಕದ ಅಟಗಾರ್ತಿ ಸ್ವಿಟ್ಜರ್‌ಲೆಂಡ್‌ನ ಜೆನ್ನಿ ಡುಯೆಸ್ಟ್‌ 6–3, 6–2 ರಿಂದ ಯಶಸ್ವಿನಿ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಇಟಲಿಯ ಡಿಲೆಟಾ ಚೆರುಬಿನಿ 6–1, 6–2 ರಿಂದ ಅನಸ್ತೇಸಿಯಾ ಸುಖೊಟಿನಾ ವಿರುದ್ಧ ಗೆದ್ದರು.

ಕ್ವಾರ್ಟರ್‌ ಫೈನಲ್‌ಗೆ ರುತುಜಾ–ಝಿಬೆಕ್‌: ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ರುತುಜಾ ಭೋಸಲೆ ಮತ್ತು ಕಜಕಸ್ತಾನದ ಝಿಬೆಕ್ ಕುಲಂಬಯೇವಾ 6–1, 6–0 ರಿಂದ ಆಕಾಂಕ್ಷಾ ದಿಲೀಪ್‌– ನಿಧಿತ್ರಾ ರಾಜಮೋಹನ್‌ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. 43 ನಿಮಿಷ ನಡೆದ ಹಣಹಣಿಯಲ್ಲಿ ಭಾರತ– ಕಜಕಸ್ತಾನದ ಜೋಡಿ ಒಂದು ಗೇಮ್‌ಅನ್ನು ಮಾತ್ರ ಎದುರಾಳಿಗಳಿಗೆ ಬಿಟ್ಟುಕೊಟ್ಟಿತು.

ಡಬಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಪೂಜಾ ಇಂಗಳೆ– ಸಂದೀಪ್ತಿ ಸಿಂಗ್‌ ರಾವ್ 7–5, 6–0 ರಿಂದ ಶರ್ಮದಾ ಬಾಲು– ಡೆಮಿ ಟ್ರಾನ್ (ನೆದರ್ಲೆಂಡ್ಸ್‌) ವಿರುದ್ಧ; ಜೆನ್ನಿ ಡುಯೆಸ್ಟ್‌–ಏಕ್ತರಿನಾ ಯಶಿನಾ 6–4, 7–5 ರಿಂದ ಝೀಲ್‌ ದೇಸಾಯಿ– ಅನಸ್ತೇಸಿಯಾ ಸುಖೊಟಿನಾ
ವಿರುದ್ಧ; ಡಿಲೆಟಾ ಚೆರುಬಿನಿ– ಆಂಟೊನಿಯಾ ಶ್ಮಿತ್ (ಜರ್ಮನಿ) 6–2, 6–2 ರಿಂದ ವೈಷ್ಣವಿ –ಶ್ರಾವ್ಯ ಶಿವಾನಿ ವಿರುದ್ಧ ಗೆದ್ದು ಎಂಟರಘಟ್ಟ ಪ್ರವೇಶಿಸಿದರು.

ರುತುಜಾಗೆ ಸನ್ಮಾನ: ಹಾಂಗ್‌ಝೌ ಏಷ್ಯನ್‌ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್‌ ವಿಭಾಗದ ಚಿನ್ನ ಜಯಿಸಿದ್ದ ರುತುಜಾ ಅವರಿಗೆ ಕರ್ನಾಟಕ ರಾಜ್ಯ ಟೆನಿಸ್‌ ಸಂಸ್ಥೆ ವತಿಯಿಂದ ₹1 ಲಕ್ಷ ಮೊತ್ತದ ಚೆಕ್‌ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT