ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ರಫೆಲ್ ನಡಾಲ್: ಆವೆಮಣ್ಣಿನಂಗಣದ ಅರಸನ ಯಶೋಗಾಥೆ

Last Updated 12 ಅಕ್ಟೋಬರ್ 2020, 10:58 IST
ಅಕ್ಷರ ಗಾತ್ರ

ಅದು, 2005ರ ಜೂನ್ ಐದು. ಅಲ್ಲಿಯ ವರೆಗೆ ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಶ್ರೇಯಾಂಕದೊಂದಿಗೆ ಆಡಿದ ಅನುಭವ ಇಲ್ಲದಿದ್ದ ಸ್ಪೇನ್‌ನ ರಫೆಲ್ ನಡಾಲ್ ಅಂದು ಫ್ರೆಂಚ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಸೆಣಸಲು ಸಜ್ಜಾಗಿ ನಿಂತಿದ್ದರು. ಎದುರಾಳಿ,ಅರ್ಜೆಂಟೀನಾದ ಮರಿಯಾನೊ ಪೆರ್ಟಾ. ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿಸ್ಪರ್ಧೆ ನೀಡಿದರೂ ರಫೆಲ್ ಸೋಲಿಗೆ ಶರಣಾದರು. ಆದರೆ ನಂತರ ಎರಡು ಸೆಟ್‌ಗಳಲ್ಲಿ ಪುಟಿದೆದ್ದು ಅಮೋಘ ಜಯ ಸಾಧಿಸಿದರು. ಇನ್ನೇನು, ಒಂದು ಸೆಟ್ ಗೆದ್ದರೆ ಸುಲಭವಾಗಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದ ರಫೆಲ್‌ ಅವರನ್ನು ಮರಿಯಾನೊ ಮತ್ತೆ ಕಾಡಿದರು. ಆದರೆ ರಫೆಲ್ ಪಟ್ಟುಬಿಡಲಿಲ್ಲ. ಕಾದಾಡಿ ಗೆದ್ದ ಅವರು ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದರು.

ರಫೆಲ್‌ ಅದೇ ಮೊದಲು ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಆಡಿದ್ದರು. ನಾಲ್ಕನೇ ಶ್ರೇಯಾಂಕ ಹೊಂದಿದ್ದ ಅವರು ಚೊಚ್ಚಲ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದರು. ಪ್ರಶಸ್ತಿಯ ಹಾದಿಯಲ್ಲಿ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ರೋಜರ್ ಫೆಡರರ್ ಅವರನ್ನೇ ಮಣಿಸಿದ್ದರು. ಅಂದಿನ ಆ ಗೆಲುವಿನ ಜಾತ್ರೆ ನಂತರ ಜೈತ್ರಯಾತ್ರೆಯಾಗಿಯೇ ಸಾಗಿತು. ಆವೆಮಣ್ಣಿನ ಅಂಗಣದಲ್ಲಿ ಆಡುವ ಏಕೈಕಗ್ರ್ಯಾನ್‌ಸ್ಲಾಂ ಟೂರ್ನಿಯಾದ ಫ್ರೆಂಚ್ ಓಪನ್‌ನಲ್ಲಿ ಅವರು ಹೊಂದಿರುವ ಪಾರಮ್ಯಕ್ಕೆ ಜಗವೇ ಬೆರಗಾಯಿತು. ಪ್ಯಾರಿಸ್‌ನಲ್ಲಿ ಮಾಡಿದ ಸಾಧನೆಗಳಿಂದಾಗಿ ಅವರು ಆವೆಮಣ್ಣಿನ ಅಂಗಣದ ಅರಸ ಎಂದೇ ಖ್ಯಾತಿ ಪಡೆದಿದ್ದಾರೆ.

ಮೊದಲ ಪ್ರಯತ್ನದಲ್ಲೇ ದಾಖಲೆಗಳನ್ನು ಬರೆದಿರುವ ರಫೆಲ್ ಟೂರ್ನಿಯ ನಂತರದ ಆವೃತ್ತಿಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಕಣಕ್ಕೆ ಇಳಿದ ಮೊದಲ ವರ್ಷವೇ ಪ್ರಶಸ್ತಿಯೊಂದಿಗೆ ಮರಳಿದ ಎರಡನೇ ಆಟಗಾರ ಅವರು. 1982ರಲ್ಲಿ ಅಮೆರಿಕದ ಮ್ಯಾಟ್ಸ್ ವಿಲಾಂಡರ್ ಈ ಅಪರೂಪದ ಸಾಧನೆ ಮಾಡಿದ್ದರು. ಫ್ರೆಂಚ್ ಓಪನ್‌ ಪ್ರಶಸ್ತಿ ಗೆದ್ದ ಎರಡನೇ ಅತಿ ಕಿರಿಯ ಆಟಗಾರ ಎಂಬ ದಾಖಲೆಯೂ ರಫೆಲ್ ಹೆಸರಿನಲ್ಲಿದೆ. ಅಮೆರಿಕದ ಮೈಕೆಲ್ ಚಾಂಗ್1989ರಲ್ಲಿ ಪ್ರಶಸ್ತಿ ಗೆಲ್ಲುವಾಗ 17 ವರ್ಷ ವಯಸ್ಸಾಗಿತ್ತು. ರಫೆಲ್ ನಡಾಲ್‌ 18ನೇ ವರ್ಷದಲ್ಲಿ ಚಾಂಪಿಯನ್ ಆಗಿದ್ದರು.

ರಫೆಲ್‌ಗೆ ಈಗ 34 ವರ್ಷ. ವಯಸ್ಸಿನ ಹಂಗು ಇಲ್ಲದೆ ಮುನ್ನಡೆಯುವ ಅವರು ಈ ವರೆಗೆ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಗೆದ್ದಿರುವ ಪ್ರಶಸ್ತಿಗಳ ಸಂಖ್ಯೆ 12ಕ್ಕೇರಿದೆ. 52 ವರ್ಷಗಳ ಇತಿಹಾಸ ಇರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅವರನ್ನು ಹೊರತುಪಡಿಸಿದರೆ ಯಾರೂ ಎಂಟಕ್ಕಿಂತ ಅಧಿಕ ಬಾರಿ ಚಾಂಪಿಯನ್ ಆಗಲಿಲ್ಲ. 13ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅವರು ಅಕ್ಟೋಬರ್ 11ರ ಭಾನುವಾರ ನಡೆಯಲಿರುವ 124ನೇ (ಗ್ರ್ಯಾನ್‌ಸ್ಲಾಂ ಆದ ನಂತರ 90ನೇ) ಆವೃತ್ತಿಯ ಫೈನಲ್ ಪಂದ್ಯದಲ್ಲೂ ಗೆದ್ದರೆ ಮತ್ತೆ ದಾಖಲೆಯೊಂದಿಗೆ ಮಿಂಚಲಿದ್ದಾರೆ. ಅತಿ ಹೆಚ್ಚುಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಲಿರುವ ರಫೆಲ್ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ 100ನೇ ಪಂದ್ಯ ಗೆದ್ದ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ವರೆಗೆ ಟೂರ್ನಿಯಲ್ಲಿ 101 ಪಂದ್ಯಗಳನ್ನು ಆಡಿರುವ ಅವರು ಕೇವಲ ಎರಡೇ ಪಂದ್ಯಗಳಲ್ಲಿ ಸೋತಿದ್ದಾರೆ.

ಸ್ವಿಟ್ಹರ್ಲೆಂಡ್‌, ಸ್ಲೊವಾಕಿಯಾ ಪಾರಮ್ಯಕ್ಕೆ ಪೆಟ್ಟು

1962ರಲ್ಲಿ ಆರಂಭಗೊಂಡ ಫ್ರೆಂಚ್ ಓಪನ್ ಟೂರ್ನಿಯ ಮೊದಲ ನಾಲ್ಕು ಆವೃತ್ತಿಗಳಲ್ಲಿಆಸ್ಟ್ರೇಲಿಯಾ ಮತ್ತು ಸ್ಲೊವಾಕಿಯಾ ಆಟಗಾರರು ಪಾರಮ್ಯ ಮೆರೆದಿದ್ದರು. ಮೊದಲ ಎರಡು ಆವೃತ್ತಿಗಳ ಫೈನಲ್‌ನಲ್ಲಿಆಸ್ಟ್ರೇಲಿಯಾ ಆಟಗಾರರೇ ಸೆಣಸಿದ್ದರು. ಮೂರು ಮತ್ತು ನಾಲ್ಕನೇ ಆವೃತ್ತಿಯಲ್ಲಿಸ್ಲೊವಾಕಿಯಾದ ಆಟಗಾರರು ಪ್ರಶಸ್ತಿ ಗೆದ್ದಿದ್ದರು. 1972ರಲ್ಲಿ ನಡೆದ ಐದನೇ ಆವೃತ್ತಿಯಲ್ಲಿ ಆ್ಯಂಡ್ರೆಸ್ ಗಿಮೆನೊ ಮೊದಲ ಬಾರಿ ಸ್ಪೇನ್‌ನ ಅಸ್ಥಿತ್ವ ತೋರಿಸಿದರು. ಒಂದು ವರ್ಷದ ನಂತರ 1974ರಲ್ಲಿ ಸ್ಪೇನ್‌ನ ಮ್ಯಾನ್ಯುಯೆಲ್ ಒರಂಟೀಸ್ ರನ್ನರ್ ಅಪ್ ಆದರು.

ಇದರ ನಂತರ, 1992ರ ವರೆಗೆ ಫ್ರೆಂಚ್ ಓಪನ್‌ನ ಫೈನಲ್ ಹಣಾಹಣಿಯಲ್ಲಿ ಸ್ಪೇನ್ ಆಟಗಾರರ ಸುಳಿವು ಇರಲಿಲ್ಲ. ಆಗ ಸ್ವಿಟ್ಜರ್ಲೆಂಡ್, ಫ್ರಾನ್ಸ್ ಮತ್ತುಸ್ಲೊವಾಕಿಯಾ ಆಟಗಾರರು ಚಾಂಪಿಯನ್‌ ಪಟ್ಟಕ್ಕೇರುತ್ತಿದ್ದರು. 1993 ಮತ್ತು 1994ರಲ್ಲಿ ಸರ್ಜಿ ಬುಗುವೆರಾ ಅವರು ಮತ್ತೆ ಸ್ಪೇನ್‌ಗೆ ಸ್ಥಾನ ಒದಗಿಸಿದರು. 1994ರ ಫೈನಲ್‌ನಲ್ಲಿ ಸೆಣಸಿದ ಮತ್ತೊಬ್ಬ ಆಟಗಾರನೂ ಸ್ಪೇನ್‌ನವರೇ ಆಗಿದ್ದರು, ಅವರು ಆಲ್ಬೆರ್ಟಾ ಬೆರಸೆಟಗುಯಿ. ಆಲ್ಬರ್ಟ್ ಕೋಸ್ಟಾ, ಅಲೆಕ್ಸಾ ಕೊರೆಜಾ ಮತ್ತು ಜುವಾನ್ ಕಾರ್ಲೋಸ್ ಅವರೂ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡರು. ಈ ನಡುವೆ ಅಮೆರಿಕ ಮತ್ತು ಬ್ರೆಜಿಲ್ ಆಟಗಾರರೂ ಮುನ್ನುಗ್ಗಿದರು.

2005ರಲ್ಲಿ ರಫೆಲ್ ನಡಾಲ್ ಕಣಕ್ಕೆ ಇಳಿಯುವುದರೊಂದಿಗೆ ಈ ಟೂರ್ನಿಯಲ್ಲಿ ಸ್ಪೇನ್‌ ಯುಗ ಅರಂಭವಾಯಿತು. ಮೊದಲ 10 ವರ್ಷಗಳಲ್ಲಿ ಒಂಬತ್ತು ಬಾರಿ ಪ್ರಶಸ್ತಿ ಗಳಿಸಿದ ಅವರು 2015 ಮತ್ತು 2016ರ ನಂತರ ಮತ್ತೆ ಮೂರು ವರ್ಷ ಚಾಂಪಿಯನ್ ಪಟ್ಟಕ್ಕೇರಿ ಇದೀಗ 13ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಫೈನಲ್‌ಗೇರಿದ ಯಾವ ಪಂದ್ಯದಲ್ಲೂ ಸೋಲಲಿಲ್ಲ ಎಂಬ ದಾಖಲೆ ಹೊಂದಿರುವ ಅವರಿಗೆ ಈ ಬಾರಿ ಸರ್ಬಿಯಾದ ನೊವಾಕ್ ಜೊಕೊವಿಚ್ ಎದುರಾಳಿ. ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿಗಳನ್ನು ಎತ್ತಿ ಹಿಡಿದ ಆಟಗಾರ ಎಂದೆನಿಸಿಕೊಳ್ಳಲು ಜೊಕೊವಿಚ್‌ ಅವರು ಫ್ರೆಂಚ್ ಓಪನ್‌ನಲ್ಲಿ ಇನ್ನು ಒಂದು ಬಾರಿ ಚಾಂಪಿಯನ್ ಆಗಬೇಕು. ಇದಕ್ಕಾಗಿ ಪ್ರಯತ್ನ ನಡೆಸಲಿದ್ದಾರೆ.

ಹಸಿರು ಅಂಗಣಕ್ಕೆ ಹೋಲಿಸಿದರೆ ಆವೆಮಣ್ಣಿನ ಗಟ್ಟಿ ಅಂಗಣದಲ್ಲಿ ಆಡುವುದು ತುಸು ಕಷ್ಟ. ಚೆಂಡು ಸುಲಭವಾಗಿ ಪುಟಿದೇಳದೇ ನಿಧಾನಗತಿಯಲ್ಲಿ ಚಿಮ್ಮುವುದರಿಂದ ಆಟಗಾರ ಆ ಲಯಕ್ಕೆ ತನ್ನನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಈ ಮರ್ಮವನ್ನು ಚೆನ್ನಾಗಿ ಅರಿತುಕೊಂಡಿರುವುದೇ ನಡಾಲ್ ಯಶಸ್ಸಿಗೆ ಕಾರಣ.ಕೋವಿಡ್ ಕಾರಣದಿಂದ ಮುಂದೂಡಲಾದ ಈ ಬಾರಿಯ ಟೂರ್ನಿಯಲ್ಲಿ ನಡಾಲ್ ಮತ್ತೆ ತಮ್ಮ ಆಧಿಪತ್ಯ ತೋರುವರೇ ಅಥವಾ ಜೊಕೊವಿಚ್ ಹೊಸ ರಾಜನಾಗಿ ಮೆರೆಯುವರೇ ಎಂಬ ಕುತೂಹಲವೊಂದೇ ಈಗ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT