ಗುರುವಾರ , ಜನವರಿ 23, 2020
28 °C
ಕಾಡ್ಗಿಚ್ಚು ಸಂತ್ರಸ್ತರಿಗೆ ನಿಧಿ ಸಂಗ್ರಹ ಉದ್ದೇಶ

ಪ್ರದರ್ಶನ ಪಂದ್ಯದಲ್ಲಿ ಫೆಡರರ್‌, ನಡಾಲ್‌

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಕಾಡ್ಗಿಚ್ಚಿನಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ ಉದ್ದೇಶದಿಂದ ನಡೆಸುತ್ತಿರುವ ಪ್ರದರ್ಶನ ಟೆನಿಸ್‌ ಪಂದ್ಯಗಳಲ್ಲಿ ದಿಗ್ಗಜ ಆಟಗಾರರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ಸೆರೆನಾ ವಿಲಿಯಮ್ಸ್ ಸೇರಿದಂತೆ ಹಲವರು ಆಡಲಿದ್ದಾರೆ. ಬುಧವಾರ ಪಂದ್ಯದ ಸಂಘಟಕರು ಈ ಕುರಿತು ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಎರಡು ಕೋಟಿಗೂ ಅಧಿಕ ಎಕರೆಯಷ್ಟು ಪ್ರದೇಶಕ್ಕೆ ಹಾನಿ ಮಾಡಿದೆ. 26 ಜನರು ಸಾವನ್ನಪ್ಪಿದ್ದಲ್ಲದೆ ಲಕ್ಷಾಂತರ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಜನವರಿ 15ರಂದು ಎಒ ರ‍್ಯಾಲಿ ಎಂದು ಕರೆಯಲಾಗುವ ಎರಡೂವರೆ ಗಂಟೆಗಳ ಪಂದ್ಯಗಳು ನಡೆಯಲಿದ್ದು ಇಲ್ಲಿ ಸಂಗ್ರಹವಾದ ಮೊತ್ತವನ್ನು ಪರಿಹಾರ ನಿಧಿಗೆ ನೀಡಲಾಗುತ್ತದೆ. ಪ್ರತಿ ಟಿಕೆಟ್‌ಗೆ ₹ 2600 (37.09 ಡಾಲರ್‌) ದರ ನಿಗದಿಪಡಿಸಲಾಗಿದೆ.

‘ಈ ಅನಿರೀಕ್ಷಿತ ಕಾಡ್ಗಿಚ್ಚು ಜನ, ಆಸ್ತಿ, ಸಮುದಾಯ, ಜೀವವೈವಿಧ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಅಪಾರ ಹಾನಿ ಮಾಡಿದೆ. ಸಂತ್ರಸ್ತರಿಗೆ ನಮ್ಮ ಹೃದಯ ಮಿಡಿಯುತ್ತಿದೆ’ ಎಂದು ಟೆನಿಸ್‌ ಆಸ್ಟ್ರೇಲಿಯಾದ ಕಾರ್ಯನಿರ್ವಹಣಾಧಿಕಾರಿ ಹಾಗೂ ಟೂರ್ನಿಯ ನಿರ್ದೇಶಕ ಕ್ರೆಗ್‌ ಟಿಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಘಟನೆಗೆ ಟೆನಿಸ್‌ ಸಮುದಾಯದಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಆಟಗಾರರು ಎಒ ರ‍್ಯಾಲಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ’ ಎಂದು ಕ್ರೆಗ್‌ ಟಿಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು