ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್: ಜೊಕೊವಿಚ್‌ಗೆ ದಾಖಲೆಯ 24ನೇ ಪ್ರಶಸ್ತಿ

Published 11 ಸೆಪ್ಟೆಂಬರ್ 2023, 2:53 IST
Last Updated 11 ಸೆಪ್ಟೆಂಬರ್ 2023, 2:53 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅನುಭವಿ ನೊವಾಕ್‌ ಜೊಕೊವಿಚ್‌ ನೇರ ಸೆಟ್‌ಗಳಿಂದ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರನ್ನು ಸೋಲಿಸಿ ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಇದು ಅವರಿಗೆ 24ನೇ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್ ಪ್ರಶಸ್ತಿ. ಆ ಮೂಲಕ ಟೆನಿಸ್‌ ಲೋಕದ ಮಹಾನ್ ಆಟಗಾರನೆಂಬ ಅವರ ಸ್ಥಾನ ಮತ್ತಷ್ಟು ಗಟ್ಟಿಯಾಯಿತು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 36 ವರ್ಷದ ಸರ್ಬಿಯಾದ ಆಟಗಾರ  6–3, 7–6 (7–5), 6–3 ರಿಂದ ಮೂರನೇ ಶ್ರೇಯಾಂಕದ ಮೆಡ್ವೆಡೇವ್ ಅವರನ್ನು ಸೋಲಿಸಿದರು. ಟೆನಿಸ್‌ನ ಓಪನ್‌ ಯುಗದಲ್ಲಿ (1968ರ ನಂತರ) ಈ ಪ್ರಶಸ್ತಿ ಗೆದ್ದ ಅತಿ ಹಿರಿಯ ಆಟಗಾರ ಎನ್ನುವ ಹಿರಿಮೆಯೂ ಅವರದಾಯಿತು. ಈ ಹಿಂದೆ 1970ರಲ್ಲಿ ಆಸ್ಟ್ರೇಲಿಯಾದ ಕೆನ್‌ ರೋಸ್‌ವಾಲ್ 35 ವರ್ಷವಿದ್ದಾಗ ಚಾಂಪಿಯನ್ ಆಗಿದ್ದರು.

ಆಸ್ಟ್ರೇಲಿಯಾದ ಆಟಗಾರ್ತಿ ಮಾರ್ಗರೇಟ್‌ ಕೋರ್ಟ್‌ ಕೂಡ 24 ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದರು. ಜೋಕೊವಿಚ್‌ ಅವರು ಒಂದೇ ವರ್ಷ ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ನಾಲ್ಕು ಬಾರಿ ಗೆದ್ದ (ಈ ಹಿಂದೆ 2011, 2015 ಮತ್ತು 2021ರಲ್ಲಿ) ಮೊದಲ ಪುರುಷ ಆಟಗಾರ ಎನಿಸಿದರು. ಅಗ್ರಮಾನ್ಯ ಪಟ್ಟವನ್ನು ಮರಳಿ ಪಡೆದುಕೊಳ್ಳಲಿರುವ ಸಂದರ್ಭದಲ್ಲಿ ಈ ಪ್ರಶಸ್ತಿ ಜೊಕೊವಿಚ್ ಅವರ ಸಾಧನೆಗೆ ಹೆಚ್ಚಿನ ಮೌಲ್ಯ ತಂದಿದೆ.

ಈ ವರ್ಷ ನಾಲ್ಕು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಅವರ ಸಾಧನೆ (27–1) ಅಮೋಘ. ಅವರ ಏಕೈಕ ಸೋಲು ವಿಂಬಲ್ಡನ್‌ ಫೈನಲ್‌ನಲ್ಲಿ (ಕಾರ್ಲೋಸ್‌ ಅಲ್ಕರಾಜ್ ವಿರುದ್ಧ) ಆಗಿತ್ತು.

ಕೋರ್ಟ್‌ ತಮ್ಮ 24 ಪ್ರಶಸ್ತಿಗಳಲ್ಲಿ 13 ಅನ್ನು ಓಪನ್‌ ಯುಗಕ್ಕಿಂತ (1968ಕ್ಕಿಂತ) ಹಿಂದೆ ಪಡೆದರೆ, 11 ಪ್ರಶಸ್ತಿಗಳು ನಂತರ ಬಂದಿದ್ದವು.

‘24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಬಗ್ಗೆ ನಾನು ಈ ರೀತಿ ನಿಂತು ಮಾತನಾಡುವೆನೆಂದು ಯೋಚಿಸಿಯೇ ಇರಲಿಲ್ಲ. ಕೆಲವು ವರ್ಷಗಳಿಂದ ನನಗೊಂದು ಅವಕಾಶವಿದೆಯೆಂಬ ಭಾವನೆ ಮೂಡಿತು. ಅದನ್ನು ಏಕೆ ಬಾಚಿಕೊಳ್ಳಬಾರದು ಎನಿಸಿತು’ ಎಂದು ಟ್ರೋಫಿ ಪ್ರದಾನ ಸಮಾರಂಭದಲ್ಲಿ ಬಿಳಿಯ ಜಾಕೆಟ್‌ ಧರಿಸಿದ್ದ ಜೊಕೊವಿಚ್ ಹೇಳಿದರು. ಜಾಕೆಟ್‌ ಮೇಲೆ ಎದೆಯ ಭಾಗದಲ್ಲಿ 24 ಎಂದು ಬರೆದಿದ್ದು ಗಮನಸೆಳೆಯಿತು.

‘ಈ ಅನುಭವ ಪದಗಳಲ್ಲಿ ಹಿಡಿದಿಡುವುದು ಕಷ್ಟ. ಈ ಆಟವನ್ನು ಅತ್ಯುನ್ನತ ಸ್ತರದಲ್ಲಿ ಆಡಬೇಕೆಂಬ ನನ್ನ  ಬಾಲ್ಯದ ನನ್ನ ಕನಸು ಈಡೇರಿದೆ’ ಎಂದು 3 ಗಂಟೆ 17 ನಿಮಿಷಗಳ ಫೈನಲ್‌ ನಂತರ ಎರಡನೇ ಶ್ರೇಯಾಂಕದ ಆಟಗಾರ ಪ್ರತಿಕ್ರಿಯಿಸಿದರು.

ಈ ವರ್ಷ ಆಸ್ಟ್ರೇಲಿಯನ್ ಮತ್ತು ಫ್ರೆಂಚ್‌ ಓಪನ್ ಸಿಂಗಲ್ಸ್ ಕಿರೀಟ ಕೂಡ ಗೆದ್ದುಕೊಂಡಿದ್ದ ಜೊಕೊ ಅವರಿಗೆ ಕೈತಪ್ಪಿದ್ದು ವಿಂಬಲ್ಡನ್ ಪ್ರಶಸ್ತಿ ಮಾತ್ರ. ಅಲ್ಲೂ ಫೈನಲ್ ತಲುಪಿದರೂ ಕಾರ್ಲೋಸ್‌ ಅಲ್ಕರಾಜ್‌ ಎದುರು ಐದು ಸೆಟ್‌ಗಳ ಹೋರಾಟದಲ್ಲಿ ಸೋಲನುಭವಿಸಿದ್ದರು.

ಮೆಡ್ವೆಡೇವ್ ಅವರಿಗೆ ಇದು ಐದು ಗ್ರ್ಯಾನ್‌ಸ್ಲಾಮ್‌ ಫೈನಲ್‌ಗಳಲ್ಲಿ ನಾಲ್ಕನೇ ಸೋಲು. ಅವು ಜೊಕೊವಿಚ್ ಮತ್ತು ನಡಾಲ್ ವಿರುದ್ಧ ಬಂದಿವೆ. ಮೆಡ್ವೆಡೇವ್ ಅವರು 2021ರ ಅಮೆರಿಕ ಓಪನ್ ಫೈನಲ್‌ನಲ್ಲಿ ಜೊಕೊವಿಚ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ತಮ್ಮ ಏಕೈಕ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು.

***

* ₹ 24.88 ಕೋಟಿ: ಟ್ರೋಫಿ ಜೊತೆ ಜೋಕೊವಿಚ್‌ ಗೆದ್ದ ಬಹುಮಾನ ಮೊತ್ತ

* ₹ 12.44: ರನ್ನರ್‌ ಅಪ್‌ ಡೇನಿಯಲ್ ಮೆಡ್ವೆಡೇವ್ ಗೆದ್ದ ಬಹುಮಾನ

ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದವರು:

ನೊವಾಕ್‌ ಜೊಕೊವಿಚ್‌- 24

ಮಾರ್ಗರೇಟ್‌ ಕೋರ್ಟ್‌- 24

ಸೆರೇನಾ ವಿಲಿಯಮ್ಸ್‌- 23

ಸ್ಟೆಫಿ ಗ್ರಾಫ್- 22

ರಫೆಲ್ ನಡಾಲ್‌- 22

ರೋಜರ್‌ ಫೆಡರರ್‌- 20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT