ಬುಧವಾರ, ಫೆಬ್ರವರಿ 1, 2023
16 °C
ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಟೂರ್ನಿಗೆ ಟ್ರಯಲ್ಸ್‌

ಟ್ರಯಲ್ಸ್‌: ಹಿಂದೆ ಸರಿದ ಸೈನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಯನ್ ಸೈನಾ ನೆಹ್ವಾಲ್ ಫೆಬ್ರುವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡದಿರಲು ತೀರ್ಮಾನಿಸಿದ್ದಾರೆ.

ಜ.2 ಮತ್ತು 3 ರಂದು ನಡೆಯಲಿರುವ ಟ್ರಯಲ್ಸ್‌ಗೆ ಸೈನಾ ನೆಹ್ವಾಲ್‌, ಆಕರ್ಷಿ ಕಶ್ಯಪ್‌ ಮತ್ತು ಮಾಳವಿಕಾ ಬನ್ಸೊದ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಸಿಂಗಲ್ಸ್‌ ವಿಭಾಗದಲ್ಲಿ ಪಿ.ವಿ.ಸಿಂಧು ನೇರ ಪ್ರವೇಶ ಗಿಟ್ಟಿಸಿದ್ದು, ಎರಡನೇ ಆಟಗಾರ್ತಿಯ ಆಯ್ಕೆಗೆ ಟ್ರಯಲ್ಸ್‌ ನಡೆಸಲು ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಆದರೆ
ಸೈನಾ ಮತ್ತು ಮಾಳವಿಕಾ ಹಿಂದೆ ಸರಿದಿದ್ದಾರೆ.

‘ಟ್ರಯಲ್ಸ್‌ಗೆ ತಾವು ಲಭ್ಯವಿಲ್ಲ ಎಂದು ಇಬ್ಬರು ಆಟಗಾರ್ತಿಯರೂ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಗೆ (ಬಿಎಐ) ಮಾಹಿತಿ ನೀಡಿದ್ದಾರೆ. ಹಾಗಾಗಿ ಅಶ್ಮಿತಾ ಚಾಲಿಹಾ ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಿದ್ದೇವೆ. ಇನ್ನೂ ಕೆಲವು ಸ್ಪರ್ಧಿಗಳು ಟ್ರಯಲ್ಸ್‌ನಿಂದ ಹಿಂದೆ ಸರಿದಿದ್ದಾರೆ’ ಎಂದು ಬಿಎಐ ಮೂಲಗಳು ಹೇಳಿವೆ.

ಸೈನಾ ಮತ್ತು ಮಾಳವಿಕಾ ಅವರ ಅನುಪಸ್ಥಿತಿಯಲ್ಲಿ ಆಕರ್ಷಿ ಮತ್ತು ಅಶ್ಮಿತಾ ನಡುವೆ ನೇರ ಪೈಪೋಟಿ ನಡೆಯಲಿದೆ.

ಸೈನಾ ಅವರು 2022 ರಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಗಾಯದಿಂದ ಬಳಲಿದ್ದರಿಂದ, ಕೆಲವೊಂದು ಟೂರ್ನಿಗಳಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 31ನೇ ಸ್ಥಾನಕ್ಕೆ ಕುಸಿತ ಕಂಡಿದ್ದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ ಹೊಂದಿರುವ ಸ್ಥಾನವನ್ನು ಅಧರಿಸಿಕೊಂಡು ಆಯ್ಕೆ ಸಮಿತಿಯು ಸಿಂಗಲ್ಸ್‌ ವಿಭಾಗದಲ್ಲಿ ಲಕ್ಷ್ಯ ಸೇನ್‌, ಎಚ್‌.ಎಸ್‌.ಪ್ರಣಯ್, ಸಿಂಧು ಹಾಗೂ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರಿಗೆ ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ನೇರ ಪ್ರವೇಶ ನೀಡಿದೆ.

ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರೂ ಟ್ರಯಲ್ಸ್‌ನಿಂದ ಹಿಂದೆ ಸರಿದಿದ್ದಾರೆ. ಡಬಲ್ಸ್‌ನಲ್ಲಿ ಜತೆಯಾಗಿ ಆಡುತ್ತಿದ್ದ ಇವರು ಕೆಲ ತಿಂಗಳ ಹಿಂದೆ ಬೇರೆಬೇರೆಯಾಗಲು ತೀರ್ಮಾನಿಸಿದ್ದರು.

ಏಷ್ಯನ್ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಟೂರ್ನಿ ಈ ಬಾರಿ ನಡೆಯಲಿದೆ. 2017 ರಲ್ಲಿ ಭಾರತ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ 2–3 ರಲ್ಲಿ ಥಾಯ್ಲೆಂಡ್‌ ಕೈಯಲ್ಲಿ ಸೋತಿತ್ತು. 2019 ರಲ್ಲಿ ನಾಕೌಟ್‌ ಹಂತ ಪ್ರವೇಶಿಸಲು ವಿಫಲವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು