ಶುಕ್ರವಾರ, ಅಕ್ಟೋಬರ್ 18, 2019
20 °C
ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಬಾರ್ಟಿಗೆ ನಿರಾಸೆ

ಚೀನಾ ಓಪನ್‌ ಗೆದ್ದ ಒಸಾಕಾ

Published:
Updated:
Prajavani

ಬೀಜಿಂಗ್‌: ನವೊಮಿ ಒಸಾಕಾ ಅವರು ವಿಶ್ವದ ಮೊದಲ ಕ್ರಮಾಂಕದ ಆಟಗಾರ್ತಿ ಆ್ಯಶ್ಲೆ ಬಾರ್ಟಿಗೆ ಆಘಾತ ನೀಡಿದರು. ಚೀನಾ ಓಪನ್‌ ಟೆನಿಸ್‌ ಪ್ರಶಸ್ತಿ ಗೆದ್ದು ಬೀಗಿದರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು 3–6, 6–3, 6–2ರಿಂದ ಜಯ ಸಾಧಿಸಿದರು.

ಜಪಾನ್‌ನ ಒಸಾಕಾ ಹಾಗೂ ಆಸ್ಟ್ರೇಲಿಯಾ ಆಟಗಾರ್ತಿಯ ನಡುವೆ 110 ನಿಮಿಷಗಳವರೆಗೆ ನಡೆದ ಪಂದ್ಯ ಕುತೂಹಲ ಕೆರಳಿಸಿತ್ತು. ಶನಿವಾರ ಸೆಮಿಫೈನಲ್‌ನಲ್ಲಿ ಒಸಾಕಾ, ಹಾಲಿ ಚಾಂಪಿಯನ್‌ ಕರೋಲಿನಾ ವೊಜ್ನಿಯಾಕಿ ಎದುರು ಗೆದ್ದಿದ್ದರು.

23 ವರ್ಷದ ಬಾರ್ಟಿ, 34 ನಿಮಿಷಗಳಲ್ಲಿ ಮೊದಲ ಸೆಟ್‌ ಅನ್ನು ಗೆದ್ದು ಸಂತಸದ ಅಲೆಯಲ್ಲಿ ತೇಲಿದರು. ಗ್ಯಾಲರಿಯಲ್ಲಿದ್ದ ಬಹುತೇಕ ಪ್ರೇಕ್ಷಕರು ಒಸಾಕಾ ಬೆಂಬಲಿಸುತ್ತಿದ್ದರು. ನಾಲ್ಕನೇ ಶ್ರೇಯಾಂಕದ ಒಸಾಕಾ ಎರಡನೇ ಸೆಟ್‌ನ ಆರಂಭದಲ್ಲಿ 4–2 ಮುನ್ನಡೆ ಸಾಧಿಸಿದರು. ಅದೇ ಲಯದಲ್ಲಿ ಮುಂದುವರಿದು ಸೆಟ್‌ ಜಯಿಸಿದರು.

ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಒಸಾಕಾ ಇನ್ನಷ್ಟು ಪ್ರಾಬಲ್ಯ ಸಾಧಿಸಿದರು. ಸೆಟ್‌ಅನ್ನು ಸುಲಭವಾಗಿ ಗೆದ್ದು ಸಂಭ್ರಮಿಸಿದರು. ಈ ವರ್ಷ ಜಪಾನ್‌ ಆಟಗಾರ್ತಿಗೆ ಒಲಿದ ಮೂರನೇ ಪ್ರಶಸ್ತಿ ಇದು. 

Post Comments (+)