ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಡಾಲ್‌, ಸ್ವಟೆಕ್‌ ಜಯ ಅಬಾಧಿತ

ಅಲ್ಕರಾಜ್‌ ಮುನ್ನಡೆ
Last Updated 4 ಸೆಪ್ಟೆಂಬರ್ 2022, 11:21 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಆತ್ಮೀಯ ಗೆಳೆಯ ರಿಚರ್ಡ್‌ ಗ್ಯಾಸ್ಕೆಟ್‌ಗೆ ಸೋಲುಣಿಸಿದ ರಫೆಲ್‌ ನಡಾಲ್ ಮತ್ತು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇಗಾ ಸ್ವಟೆಕ್‌ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದರು.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಸ್ಪೇನ್‌ನ ನಡಾಲ್‌ ಶನಿವಾರ6-0, 6-1, 7-5ರಿಂದ ಫ್ರಾನ್ಸ್‌ ಆಟಗಾರನನ್ನು ಮಣಿಸಿದರು. ಇಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ನಡಾಲ್ ಅವರಿಗೆ ಗ್ಯಾಸ್ಕೆಟ್‌ ವಿರುದ್ಧ ಇದು ಸತತ 18ನೇ ಜಯವಾಗಿದೆ.

23ನೇ ಗ್ರ್ಯಾನ್‌ಸ್ಲಾಮ್ ಗೆಲುವಿನತ್ತ ದಾಪುಗಾಲಿಟ್ಟಿರುವ ನಡಾಲ್‌, ಗ್ಯಾಸ್ಕೆಟ್‌ ವಿರುದ್ಧ 34 ನೇರ ಸೆಟ್‌ಗಳನ್ನು ಗೆದ್ದುಕೊಂಡಿದ್ದಾರೆ.

ಈ ಪಂದ್ಯದ ಆರಂಭದಿಂದ ಸ್ಪೇನ್ ಆಟಗಾರ ಪಾರಮ್ಯ ಮೆರೆದರು. ಅವರು ಸತತ ಒಂಬತ್ತು ಗೇಮ್ ಗೆದ್ದ ಬಳಿಕ ಗ್ಯಾಸ್ಕೆಟ್‌ ಖಾತೆ ತೆರೆದರು. ಕೊನೆಯ ಸೆಟ್‌ನಲ್ಲಿ ಮಾತ್ರ ಫ್ರೆಂಚ್‌ ಆಟಗಾರ ಸ್ವಲ್ಪ ಪ್ರತಿರೋಧ ತೋರಿದರು.

ಮುಂದಿನ ಪಂದ್ಯದಲ್ಲಿ ನಡಾಲ್ ಅವರಿಗೆ ಅಮೆರಿಕದ ಫ್ರಾನ್ಸೆಸ್‌ ಟಿಪೊಯ್ ಸವಾಲು ಎದುರಾಗಿದೆ. ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಟಿಪೊಯ್‌7-6 (9/7), 6-4, 6-4ರಿಂದ ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್‌ಮನ್‌ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇನ್ನುಳಿದ ಹಣಾಹಣಿಗಳಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಚ್‌7-6 (13/11), 6-7 (3/7), 6-2, 7-5ರಿಂದ ಬ್ರಿಟನ್‌ನ ಡ್ಯಾನ್ ಇವಾನ್ಸ್ ಎದುರು, ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌6-3, 6-3, 6-3ರಿಂದ ಅಮೆರಿಕದ ಜೆನ್ಸನ್‌ ಬ್ರೂಕ್ಸ್‌ಬಿ ಎದುರು, ಬ್ರಿಟನ್‌ನ ಕ್ಯಾಮರಾನ್ ನೊರಿ7-5, 6-4, 6-1ರಿಂದ ಡೆನ್ಮಾರ್ಕ್‌ನ ಹೋಲ್ಜರ್ ರ‍್ಯೂನ್ ಎದುರು, ರಷ್ಯಾದ ಆ್ಯಂಡ್ರೆ ರುಬ್ಲೆವ್‌ 6-4, 2-6, 6-7 (3/7), 6-4, 7-6 (10/7)ರಿಂದ ಕೆನಡಾದ ಡೆನಿಸ್‌ ಶಪವಲೊವ್ ಎದುರು ಜಯ ಗಳಿಸಿದರು.

ಸ್ವಟೆಕ್‌ಗೆ ಗೆಲುವು: ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಪೋಲೆಂಡ್‌ ಇಗಾ ಸ್ವಟೆಕ್‌6-3, 6-4ರಿಂದ ಅಮೆರಿಕದ ಲಾರೆನ್‌ ಡೇವಿಸ್‌ ಅವರನ್ನು ಮಣಿಸಿದರು.

ಎರಡನೇ ಸೆಟ್‌ನಲ್ಲಿ 1–4ರಿಂದ ಹಿನ್ನಡೆ ಅನುಭವಿಸಿದ್ದ ಸ್ವಟೆಕ್‌ ಆತಂಕ ಎದುರಿಸಿದರು. ಆದರೆ ಛಲದ ಆಟದ ಮೂಲಕ ಗೆಲುವು ಒಲಿಸಿಕೊಂಡರು. ರಕ್ತದೊತ್ತಡದ ಕಾರಣ ಲಾರೆನ್‌ ಕೆಲಹೊತ್ತು ವಿರಾಮ ಪಡೆದರು.

ಮುಂದಿನ ಪಂದ್ಯದಲ್ಲಿ ಸ್ವಟೆಕ್, ಜರ್ಮನಿಯ ಜೂಲ್‌ ನೀಮಿಯರ್ ಅವರನ್ನು ಎದುರಿಸುವರು.

ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ 6-2, 6-7 (6/8), 6-0ರಿಂದಚೀನಾದ ಯುವಾನ್ ಯು ಎದುರು, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ5-7, 6-3, 7-6 (12/10)ರಿಂದ ಸ್ಪೇನ್‌ನ ಗಾರ್ಬೈನ್ ಮುಗುರುಜಾ ವಿರುದ್ಧ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ6-3, 6-0ರಿಂದ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಚ್ ಎದುರು, ಜೆಕ್‌ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ5-7, 6-4, 6-3ರಿಂದ ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್ಸಿಚ್‌ ಎದುರು, ಬೆಲಾರಸ್‌ನ ಅರಿನಾ ಸಬಲೆಂಕಾ6-0, 6-2ರಿಂದ ಫ್ರಾನ್ಸ್‌ನ ಕ್ಲಾರಾ ಬುರೆಲ್ ವಿರುದ್ಧ ಗೆದ್ದು ಮುಂದಿನ ಹಂತ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT