ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಸಬಲೆಂಕಾ ಮುಡಿಗೆ ಕಿರೀಟ

ಅಮೆರಿಕ ಓಪನ್‌ ಟೆನಿಸ್‌: ಪೆಗುಲಾಗೆ ನಿರಾಸೆ
Published : 8 ಸೆಪ್ಟೆಂಬರ್ 2024, 14:49 IST
Last Updated : 8 ಸೆಪ್ಟೆಂಬರ್ 2024, 14:49 IST
ಫಾಲೋ ಮಾಡಿ
Comments

ನ್ಯೂಯಾರ್ಕ್‌: ಬೆಲಾರಸ್‌ನ 26 ವರ್ಷ ವಯಸ್ಸಿನ ಅರಿನಾ ಸಬಲೆಂಕಾ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು.

ವಿಶ್ವದ ಎರಡನೇ ಕ್ರಮಾಂಕದ ಸಬಲೆಂಕಾ ಶನಿವಾರ ರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ  7-5, 7-5 ಸೆಟ್‌ಗಳಿಂದ ಆರನೇ ಶ್ರೇಯಾಂಕದ ಆತಿಥೇಯ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಸೋಲಿಸಿದರು.

2023 ಮತ್ತು 2024ರ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಆಗಿರುವ ಸಬಲೆಂಕಾ ಅವರಿಗೆ ಇದು ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ.

2022ರಲ್ಲಿ ಇಲ್ಲಿ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಸಬಲೆಂಕಾ, ಕಳೆದ ವರ್ಷ ಫೈನಲ್‌ನಲ್ಲಿ ಅಮೆರಿಕದ ಕೊಕ್‌ ಗಾಫ್‌ ಅವರ ವಿರುದ್ಧ ಮುಗ್ಗರಿಸಿದ್ದರು. ಆದರೆ, ಈ ಬಾರಿ ಎಚ್ಚರಿಕೆಯ ಆಟ ಪ್ರದರ್ಶಿಸಿ ಟ್ರೋಫಿಗೆ ಮುತ್ತಿಕ್ಕಿದರು.

2016ರ ನಂತರ ಒಂದೇ ಋತುವಿನಲ್ಲಿ ಎರಡು ಹಾರ್ಡ್‌ಕೋರ್ಟ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಸಬಲೆಂಕಾ ಪಾತ್ರರಾದರು. ಎಂಟು ವರ್ಷಗಳ ಹಿಂದೆ ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್ ಈ ಸಾಧನೆ ಮಾಡಿದ್ದರು.

‘ಹಿಂದಿನ ವರ್ಷಗಳ ಸೋಲುಗಳು ನನ್ನನ್ನು ಕಾಡುತ್ತಿತ್ತು. ಕಠಿಣ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ನನ್ನ ಆಟದ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ’ ಎಂದು ಗೆಲುವಿನ ಬಳಿಕ ಸಬಲೆಂಕಾ ಪ್ರತಿಕ್ರಿಯಿಸಿದರು.

ಕಳೆದ ತಿಂಗಳು ನಡೆದ ಸಿನ್ಸಿನಾಟಿ ಟೆನಿಸ್‌ ಟೂರ್ನಿಯಲ್ಲೂ ಸಬಲೆಂಕಾ ಮತ್ತು ಪೆಗುಲಾ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಅಲ್ಲೂ ಬೆಲಾರಸ್‌ನ ಆಟಗಾರ್ತಿ ನೇರ ಸೆಟ್‌ಗಳಿಂದ ಪ್ರಶಸ್ತಿ ಜಯಿಸಿದ್ದರು.

ಆರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿ ನಿರಾಸೆ ಅನುಭವಿಸಿದ್ದ 30 ವರ್ಷ ವಯಸ್ಸಿನ ಪೆಗುಲಾ ‌ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದರು. ಈ ಹಾದಿಯಲ್ಲಿ ಅವರು ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್‌ ಅವರಿಗೆ ಆಘಾತ ನೀಡಿದ್ದರು.

ಸಬಲೆಂಕಾ ಫೈನಲ್‌ ಪಂದ್ಯದ ಆರಂಭದಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು. ಹೀಗಾಗಿ, ತವರಿನ ಪ್ರೇಕ್ಷಕರ ಮುಂದೆ ಪೆಗುಲಾ ಒಂದು ಹಂತದಲ್ಲಿ 2–1 ಗೇಮ್‌ಗಳ ಮುನ್ನಡೆ ಪಡೆದಿದ್ದರು. ಆದರೆ, ನಂತರ ಹಿಡಿತ ಸಾಧಿಸಿದ ಬೆಲಾರಸ್‌ನ ಆಟಗಾರ್ತಿ ಮೊದಲ ಸೆಟ್‌ ಅನ್ನು ವಶ ಮಾಡಿಕೊಂಡರು. ಎರಡನೇ ಸೆಟ್‌ನ ಆರಂಭದಲ್ಲೂ ಆತಿಥೇಯ ದೇಶದ ಆಟಗಾರ್ತಿ ಚುರುಕಿನ ಆಟ ಪ್ರದರ್ಶಿಸಿ 3–0 ಗೇಮ್‌ಗಳ ಮುನ್ನಡೆ ಪಡೆದು ಗೆಲುವಿನ ಆಸೆ ಚಿಗುರಿಸಿದರು. ಮತ್ತೆ ಪುಟಿದೆದ್ದ ಸಬಲೆಂಕಾ ನಿಖರ ಆಟ ಪ್ರದರ್ಶಿಸಿ ಎದುರಾಳಿಯನ್ನು ಹಿಮ್ಮೆಟ್ಟಿಸಿದರು.

ಸಿನ್ನರ್‌–ಟೇಲರ್‌ ಮುಖಾಮುಖಿ:

ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಯಾನಿಕ್‌ ಸಿನ್ನರ್‌ ಮತ್ತು ಅಮೆರಿಕದ ಟೇಲರ್ ಫ್ರಿಟ್ಜ್ ಮುಖಾಮುಖಿಯಾಗುತ್ತಿದ್ದಾರೆ.

ಇಟಲಿಯ 23 ವರ್ಷ ವಯಸ್ಸಿನ ಸಿನ್ನರ್‌ ಸೆಮಿಫೈನಲ್‌ನಲ್ಲಿ 7-5 7-6(3) 6-2 ಸೆಟ್‌ಗಳಿಂದ ಬ್ರಿಟನ್‌ನ ಜ್ಯಾಕ್ ಡ್ರೇಪರ್ ಅವರನ್ನು ಸೋಲಿಸಿದ್ದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಫ್ರಿಟ್ಜ್ 4-6, 7-5, 4-6, 6-4, 6-1ರ ಐದು ಸೆಟ್‌ಗಳ ಹಣಾಹಣಿಯಲ್ಲಿ ಸ್ವದೇಶದ ಫ್ರಾನ್ಸಿಸ್ ಟಿಯಾಫೊ ಅವರನ್ನು ಮಣಿಸಿದ್ದರು.

26 ವರ್ಷ ವಯಸ್ಸಿನ ಫ್ರಿಟ್ಜ್ ಈ ಗೆಲುವಿನೊಂದಿಗೆ ಅಮೆರಿಕ ಓಪನ್‌ನಲ್ಲಿ 18 ವರ್ಷಗಳ ನಂತರ ತವರಿನ ಆಟಗಾರನೊಬ್ಬ ಫೈನಲ್‌ ಪ್ರವೇಶಿಸಿದ ಹಿರಿಮೆಗೆ ಪಾತ್ರವಾದರು. ಆ್ಯಂಡಿ ರಾಡಿಕ್ ಫೈನಲ್‌ ತಲುಪಿದ್ದ ಅಮೆರಿಕದ ಕೊನೆಯ ಆಟಗಾರನಾಗಿದ್ದಾರೆ. ಅವರು 2006ರಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ವಿರುದ್ಧ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT