'ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ'-ನಿವೃತ್ತಿಗೆ ಸಾನಿಯಾ ಮಿರ್ಜಾ ನಿರ್ಧಾರ

ಮೆಲ್ಬರ್ನ್: ಭಾರತದ ಮಹಿಳಾ ಟೆನಿಸ್ನ ಧ್ರುವತಾರೆ ಸಾನಿಯಾ ಮಿರ್ಜಾ ಅವರು ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ಈ ಋತುವಿನ ನಂತರ ಕಣಕ್ಕೆ ಇಳಿಯುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
‘ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ. ಮೊದಲಿನಂತೆ ಶಕ್ತಿಯನ್ನು ಒಗ್ಗೂಡಿಸುವುದಕ್ಕೂ ಆಗುವುದಿಲ್ಲ’ ಎಂದು ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ ಮೊದಲ ಸುತ್ತಿನ ಸೋಲಿನ ನಂತರ ತಿಳಿಸಿದರು.
35 ವರ್ಷದ ಸಾನಿಯಾ ಮಿರ್ಜಾ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಸುದೀರ್ಘ ಕಾಲ ಅಂಗಣದಿಂದ ಹೊರಗೆ ಉಳಿದಿದ್ದರು. 2019ರ ಮಾರ್ಚ್ನಲ್ಲಿ ಮತ್ತೆ ಆಡಲು ಇಳಿದಿದ್ದರು. ಆದರೆ ಕೆಲವೇ ತಿಂಗಳಲ್ಲಿ ಅವರನ್ನು ಕೊರೋನಾ ಸೋಂಕು ಕಾಡಿತ್ತು.
‘ನಿವೃತ್ತಿ ಘೋಷಿಸಲು ಕಾರಣಗಳು ಅನೇಕ ಇವೆ. ಇನ್ನು ಮುಂದೆ ನಾನು ಆಡುವುದಿಲ್ಲ ಎಂದು ಏಕಾಏಕಿ ಹೇಳುತ್ತಿಲ್ಲ. ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯುತ್ತದೆ. ಮಗನಿಗೆ ಈಗ ಕೇವಲ ಮೂರು ವರ್ಷ. ಆತನೊಂದಿಗೆ ಬಹಳ ದೂರ ಪ್ರಯಾಣ ಮಾಡುವುದರ ಮೂಲಕ ಸಮಸ್ಯೆಗಳನ್ನು ತೊಂದೊಡ್ಡುತ್ತಿದ್ದೇನೆಯೋ ಎಂಬ ಆತಂಕ ಕಾಡುತ್ತಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ದೇಹ ಬಳಲುತ್ತಿದೆ. ಇಂದಿನ ಪಂದ್ಯದ ಸಂದರ್ಭದಲ್ಲಿ ಮೊಣಕಾಲು ನೋಯುತ್ತಿತ್ತು. ಪಂದ್ಯದ ಸೋಲಿಗೆ ಇದುವೇ ಕಾರಣ ಎಂದು ಹೇಳುವುದಿಲ್ಲ. ಆದರೆ ವಯಸ್ಸಾಗುತ್ತಿದೆ, ಬೇಗನೇ ಚೇತರಿಸಿಕೊಳ್ಳಲು ಆಗುತ್ತಿಲ್ಲ ಎಂಬುದರ ಲಕ್ಷಣಗಳು ಇವು ಎಂಬುದರ ಅರಿವಾಗಿದೆ’ ಎಂದು ಸಾನಿಯಾ ನುಡಿದರು.
ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಉಕ್ರೇನ್ನ ನಾದಿಯಾ ಕಿಚೆನಾಕ್ 4-6, 6-7(5)ರಲ್ಲಿ ಸ್ಲೊವೇನಿಯಾದ ತಮಾರ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ಗೆ ಮಣಿದರು. ಮಿಶ್ರ ಡಬಲ್ಸ್ನಲ್ಲಿ ಅವರು ಅಮೆರಿಕದ ರಾಜೀವ್ ರಾಮ್ ಜೊತೆ ಆಡಲಿದ್ದಾರೆ.
1986ರ ನವೆಂಬರ್ 15ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.