ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಸೆರೆನಾ ವಿಲಿಯಮ್ಸ್‌ ಶುಭಾರಂಭ

ವಿದಾಯ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶ
Last Updated 30 ಆಗಸ್ಟ್ 2022, 14:04 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ವೃತ್ತಿ ಜೀವನದ ಕೊನೆಯ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಆಡುತ್ತಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌, ತಮ್ಮ ಇನ್ನೊಂದು ಪಂದ್ಯ ವೀಕ್ಷಿಸುವ ಅವಕಾಶವನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಅವರು 6–3, 6–3 ರಲ್ಲಿ ಮಾಂಟೆನೆಗ್ರೊದ ಡಂಕಾ ಕೊವಿನಿಚ್‌ ವಿರುದ್ಧ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು.

ಇತ್ತೀಚಿನ ಫಾರ್ಮ್‌ ನೋಡಿದಾಗ, ಸೆರೆನಾ ಮೊದಲ ಸುತ್ತಿನ ತಡೆ ದಾಟುವುದು ಅನುಮಾನ ಎನಿಸಿತ್ತು. ಸೋಮವಾರದ ಪಂದ್ಯವೇ ಅವರ ಕೊನೆಯ ಪಂದ್ಯ ಆಗಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಇದರಿಂದ ಆರ್ಥರ್‌ ಆ್ಯಶ್‌ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.

ಆದರೆ 40 ವರ್ಷದ ಸೆರೆನಾ ಅಮೋಘ ಆಟವಾಡಿ ಎರಡನೇ ಸುತ್ತು ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಅವರು ಎರಡನೇ ಶ್ರೇಯಾಂಕದ ಆಟಗಾರ್ತಿ, ಎಸ್ಟೋನಿಯದ ಅನೆಟ್‌ ಕೊಂತಾವೆತ್‌ ಅವರನ್ನು ಎದುರಿಸುವರು.

ತಾರೆಯರ ದಂಡು: ಸೆರೆನಾ ಪಂದ್ಯ ವೀಕ್ಷಿಸಲು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಮಾಜಿ ಹೆವಿವೇಟ್‌ ಚಾಂಪಿಯನ್‌ ಮೈಕ್‌ ಟೈಸನ್‌, ಹಾಲಿವುಡ್‌ ತಾರೆಯರಾದ ಹ್ಯೂ ಜಾಕ್‌ಮನ್‌, ಕ್ವೀನ್‌ ಲತೀಫಾ, ಮಾಡೆಲಿಂಗ್‌ ಕ್ಷೇತ್ರದ ಪ್ರಮುಖರು, ಮಾಜಿ ಕ್ರೀಡಾಪಟುಗಳು ಸೇರಿದಂತೆ 23,500 ಮಂದಿ ಸೇರಿದ್ದರು.

ಹಲೆಪ್‌ಗೆ ಆಘಾತ: ವಿಶ್ವದ ಮಾಜಿ ಅಗ್ರ ರ‍್ಯಾಂಕಿಂಗ್‌ನ ಆಟಗಾರ್ತಿ ಸಿಮೊನಾ ಹಲೆಪ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಇಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದ ಅವರನ್ನು ಉಕ್ರೇನ್‌ನ ಡರಿಯಾ ಸ್ನಿಗರ್‌ 6–2, 0–6, 6–4 ರಲ್ಲಿ ಮಣಿಸಿ ಅಚ್ಚರಿಗೆ ಕಾರಣರಾದರು.

ಮುಗ್ಗರಿಸಿದ ಸಿಸಿಪಸ್‌: ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲೂ ಅಚ್ಚರಿಯ ಫಲಿತಾಂಶ ದಾಖಲಾಗಿದ್ದು, ನಾಲ್ಕನೇ ಶ್ರೇಯಾಂಕದ ಆಟಗಾರ ಗ್ರೀಕ್‌ನ ಸ್ಟೆಫಾನೊಸ್‌ ಸಿಸಿಪಸ್‌ ಸೋತು ಹೊರಬಿದ್ದರು.

ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿರುವ ಕೊಲಂಬಿಯದ ಡೇನಿಯಲ್‌ ಗಲಾನ್ 6-0, 6-1, 3-6, 7-5 ರಲ್ಲಿ ಸಿಸಿಪಸ್‌ ಎದುರು ಗೆದ್ದರು. ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡಿದ ಗಲಾನ್‌ ಪಂದ್ಯದ ಮೊದಲ 11 ಗೇಮ್‌ಗಳನ್ನು ಗೆದ್ದು ಎದುರಾಳಿಯನ್ನು ಕಂಗೆಡಿಸಿದರು.

ಇತರ ಪಂದ್ಯಗಳಲ್ಲಿ ಇಟಲಿಯ ಮಟೆಯೊ ಬೆರೆಟಿನಿ 6-2, 6-3, 6-3 ರಲ್ಲಿ ಚಿಲಿಯ ನಿಕೊಲಸ್‌ ಜೆರಿ ಎದುರು, ನಾರ್ವೆಯ ಕ್ಯಾಸ್ಪರ್‌ ರೂಡ್ 6-3, 7-5, 6-2 ರಲ್ಲಿ ಬ್ರಿಟನ್‌ನ ಕೈಲ್ ಎಡ್ಮಂಡ್‌ ಎದುರು ಗೆದ್ದರು.

ವು ಯಿಬಿಂಗ್ ಸಾಧನೆ: ಚೀನಾದ ವು ಯಿಬಿಂಗ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತು ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದರು. ಚೀನಾದ ಆಟಗಾರ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಪುರುಷರ ವಿಭಾಗದಲ್ಲಿ ಪಂದ್ಯದಲ್ಲಿ ಗೆಲುವು ಪಡೆದದ್ದು 1959ರ ಬಳಿಕ ಇದೇ ಮೊದಲು. ಯಿಬಿಂಗ್‌ 6–3, 6–4, 6–0 ರಲ್ಲಿ ಜಾರ್ಜಿಯದ ನಿಕೊಲೊಜ್ ಬಸಿಲಶ್ವಿಲಿ ಅವರನ್ನು ಮಣಿಸಿದರು.

ಆದರೆ ಚೀನಾದ ಇನ್ನೊಬ್ಬ ಆಟಗಾರ ಜಾಂಗ್‌ ಜಿಜಿನ್‌ 3-6, 6-7 (4/7), 7-6 (11/9), 6-1, 6-4 ರಲ್ಲಿ ನೆದರ್ಲೆಂಡ್ಸ್‌ನ ಟಿನ್‌ ವಾನ್‌ ರಿತೊವೆನ್‌ ಎದುರು ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT