ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಕ್ವಾರ್ಟರ್‌ಗೆ ಫೆಡರರ್‌, ಜೊಕೊವಿಚ್‌

Last Updated 11 ಅಕ್ಟೋಬರ್ 2018, 15:54 IST
ಅಕ್ಷರ ಗಾತ್ರ

ಶಾಂಘೈ: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಶಾಂಘೈ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಫೆಡರರ್ 6–3, 2–6, 6–4ರಲ್ಲಿ ಸ್ಪೇನ್‌ನ ರಾಬರ್ಟೊ ಬಟಿಸ್ಟಾ ಅಗತ್‌ ವಿರುದ್ಧ ಗೆದ್ದರು.

ಹಾಲಿ ಚಾಂಪಿಯನ್‌ ಫೆಡರರ್‌ ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ 28ನೇ ಶ್ರೇಯಾಂಕದ ಆಟಗಾರ ರಾಬರ್ಟೊ ತಿರುಗೇಟು ನೀಡಿ 1–1ರಲ್ಲಿ ಸಮಬಲ ಮಾಡಿಕೊಂಡರು.

ಮೂರನೇ ಸೆಟ್‌ನಲ್ಲಿ ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ 4–4ರ ಸಮಬಲ ಕಂಡುಬಂತು. ಈ ಹಂತದಲ್ಲಿ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಫೆಡರರ್‌ ಮೋಡಿ ಮಾಡಿದರು. ತಮ್ಮ ಸರ್ವ್‌ ಉಳಿಸಿಕೊಂಡ ಅವರು ಎದುರಾಳಿಯ ಸರ್ವ್‌ ಮುರಿದು ಗೆಲುವಿನ ತೋರಣ ಕಟ್ಟಿದರು.

ಇನ್ನೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಜೊಕೊವಿಚ್‌ 6–4, 6–0 ನೇರ ಸೆಟ್‌ಗಳಿಂದ ಇಟಲಿಯ ಮಾರ್ಕೊ ಸೆಚಿನಾಟೊ ವಿರುದ್ಧ ವಿಜಯಿಯಾದರು.

ಮೊದಲ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಒಡ್ಡಿದ 16ನೇ ಶ್ರೇಯಾಂಕದ ಆಟಗಾರ ಮಾರ್ಕೊ, ಎರಡನೇ ಸೆಟ್‌ನಲ್ಲಿ ಸಂಪೂರ್ಣವಾಗಿ ಮಂಕಾದರು.

ಇತರ ಪಂದ್ಯಗಳಲ್ಲಿ ಕೀ ನಿಶಿಕೋರಿ 7–6, 6–4ರಲ್ಲಿ ಸ್ಯಾಮ್‌ ಕ್ವೆರಿ ಎದುರೂ, ಮ್ಯಾಥ್ಯೂ ಎಬ್ಡೆನ್‌ 6–2, 6–3ರಲ್ಲಿ ಪೀಟರ್‌ ಗೊಜೊವ್‌ಜಿಕ್‌ ಮೇಲೂ, ಕೈಲ್‌ ಎಡ್ಮಂಡ್‌ 7–6, 6–3ರಲ್ಲಿ ನಿಕೊಲಸ್‌ ಜೆರಿ ವಿರುದ್ಧವೂ, ಅಲೆಕ್ಸಾಂಡರ್‌ ಜ್ವೆರೆವ್‌ 6–1, 6–4ರಲ್ಲಿ ಅಲೆಕ್ಸ್‌ ಡಿ ಮಿನೌರ್‌ ಮೇಲೂ, ಕೆವಿನ್‌ ಆ್ಯಂಡರ್ಸನ್‌ 6–4, 7–6ರಲ್ಲಿ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT