ರೋಮ್: ವಿಶ್ವದ ಅಗ್ರಮಾನ್ಯ ಟೆನಿಸಿಗ ಯಾನಿಕ್ ಸಿನ್ನರ್ ಅವರ ಉದ್ದೀಪನ ಮದ್ದು ಸೇವನೆ ಪ್ರಕರಣ ಮರುಜೀವ ಪಡೆದಿದೆ. ಇಟಲಿಯ ಆಟಗಾರರನ್ನು ದೋಷ ಮುಕ್ತಗೊ ಳಿಸಿರುವುದರ ವಿರುದ್ಧ ವಿಶ್ವ ಉದ್ದೀಪನ ಮದ್ದುಸೇವನೆ ತಡೆ ಏಜನ್ಸಿ (ವಾಡಾ) ಗುರುವಾರ ಮೇಲ್ಮನವಿ ಸಲ್ಲಿಸಿದ್ದು, ಒಂದರಿಂದ ಎರಡು ವರ್ಷ ನಿಷೇಧ ಹೇರಬೇಕೆಂದು ಮನವಿಯಲ್ಲಿ ತಿಳಿಸಿದೆ.
ಕಳೆದ ಮಾರ್ಚ್‌ನಲ್ಲಿ ಅವರು ಎರಡು ಬಾರಿ ನಿಷೇಧಿತ ಮದ್ದುಗಳ ಪಟ್ಟಿಯಲ್ಲಿ ರುವ ಅನಬಾಲಿಕ್ ಸ್ಟಿರಾಯಿಡ್ ‘ಕ್ಲೊಸ್ಟೆಬಾಲ್’ ಸೇವನೆ ಮಾಡಿರುವುದು ಡೋಪಿಂಗ್ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಆದರೆ ಈ ಪ್ರಕರಣದಲ್ಲಿ, ‘ಗಾಯಕ್ಕೆ ಆರೈಕೆ ನೀಡುವ ಸಂದರ್ಭದಲ್ಲಿ
ಫಿಸಿಯೊಥೆರಪಿಸ್ಟ್ ಅವರಿಂದಾಗಿ ಈ ಮದ್ದು ತಮ್ಮ ದೇಹ ಸೇರಿದೆ’ ಎಂಬ ಸಿನ್ನರ್ ಅವರ ಹೇಳಿಕೆಯನ್ನು ಅಂತರ ರಾಷ್ಟ್ರೀಯ ಟೆನಿಸ್ ಇಂಟಿಗ್ರಿಟಿ ಏಜನ್ಸಿ (ಐಟಿಐಎ) ಒಪ್ಪಿಕೊಂಡಿತ್ತು. ‘ಪ್ರಕರಣ ದಲ್ಲಿ ಸಿನ್ನರ್ ಅವರ ತಪ್ಪಿಲ್ಲ ಅಥವಾ ನಿರ್ಲಕ್ಷ್ಯ ಇಲ್ಲ’ ಎಂದು ಹೇಳಿ ಅವರನ್ನು ದೋಷಮುಕ್ತಗೊಳಿಸಿತ್ತು. ಇದರ ವಿರುದ್ಧ ವಾಡಾ ಈಗ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಗೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದೆ.
23 ವರ್ಷದ ಸಿನ್ನರ್, ಈ ತಿಂಗಳ ಆರಂಭದಲ್ಲಿ ತಮ್ಮ ಎರಡನೇ ಪ್ರಮುಖ ಪ್ರಶಸ್ತಿಯಾಗಿ ಅಮೆರಿಕ ಓಪನ್ ಕೂಡ ಗೆದ್ದುಕೊಂಡಿದ್ದಾರೆ.