ಗುರುವಾರ , ಏಪ್ರಿಲ್ 2, 2020
19 °C

ಹಿರಿಯರ ಪಾರಮ್ಯ ಹೊಸಬರ ಭರವಸೆ

ಬಸವರಾಜ ದಳವಾಯಿ Updated:

ಅಕ್ಷರ ಗಾತ್ರ : | |

Prajavani

‘ಬಿಗ್‌ 3’ ಗಳೆಂದು ಹೆಸರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಹಾಗೂ ನೊವಾಕ್‌  ಜೊಕೊವಿಚ್‌ ಅವರಿಗೆ ಟೆನಿಸ್‌ನಲ್ಲಿ ಈ ವರ್ಷವೂ ಯುವ ಆಟಗಾರರಿಂದ ಅಂಥ ಸವಾಲು ಎದುರಾಗಲಿಲ್ಲ. ಗ್ರ್ಯಾನ್‍ಸ್ಲಾಮ್ ಟೂರ್ನಿಗಳ ಪೈಕಿ ಜೊಕೊವಿಚ್ ಹಾಗೂನಡಾಲ್ ತಲಾ ಎರಡು ಪ್ರಶಸ್ತಿಗಳನ್ನು ಗಳಿಸಿದರು. ಅಮೆರಿಕ ಹಾಗೂ ಫ್ರೆಂಚ್ ಓಪನ್‍ನಲ್ಲಿ ಸ್ಪೇನ್‍ನ ನಡಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಆಸ್ಟ್ರೇಲಿಯಾ ಓಪನ್‌ ಹಾಗೂ ವಿಂಬಲ್ಡನ್ ಟೂರ್ನಿಗಳಲ್ಲಿ ಸರ್ಬಿಯಾದ ಜೊಕೊವಿಚ್ ಕಿರೀಟ ಧರಿಸಿದರು. ಫೆಡರರ್‌, ನೆಚ್ಚಿನ ವಿಂಬಲ್ಡನ್‌ ಫೈನಲ್‌ಗೆ ‍ಪ್ರವೇಶಿಸಲಷ್ಟೇ ಸಾಧ್ಯವಾಯಿತು.

ನಡಾಲ್ ದಾಖಲೆ

ಫ್ರೆಂಚ್ ಓಪನ್ ಟೂರ್ನಿಯನ್ನು ದಾಖಲೆಯ 12ನೇ ಬಾರಿ ಜಯಿಸಿದ ಹೆಗ್ಗಳಿಕೆಗೆ ನಡಾಲ್ ಅವರದಾಯಿತು.

ವಿಂಬಲ್ಡನ್‌ ಫೈನಲ್‌ ರೋಚಕತೆ

ವರ್ಷದ ವಿಂಬಲ್ಡನ್‌ ಪುರುಷರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ರೋಜರ್‌ ಫೆಡರರ್‌– ನೊವಾಕ್‌ ಜೊಕೊವಿಚ್‌ ಮುಖಾಮುಖಿಯಾಗಿದ್ದರು.  ಪಂದ್ಯದ ಐದನೇ ಸೆಟ್‌ 12–12 ಗೇಮ್‌ಗಳ ಸಮಬಲ ಕಂಡು ಟೈಬ್ರೇಕ್‌ವರೆಗೆ ಸಾಗಿತ್ತು. ನಾಲ್ಕೂವರೆ ತಾಸಿಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಸರ್ಬಿಯಾ ಆಟಗಾರ 7–6, 1–6, 7–6, 4–6, 13–12 ರಿಂದ ಗೆದ್ದು ನಿಟ್ಟುಸಿರು ಬಿಟ್ಟರು.

  • ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಕೆನಡಾದ ಆ್ಯಂಡ್ರಿಸ್ಕ್ಯೂ ಬಿಯಾಂಕಾ ಪಾಲಾಯಿತು. ರೊಮೇನಿಯಾದ ಸಿಮೊನಾ ಹಲೆಪ್, ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಹಾಗೂ ಜಪಾನ್‍ನ ನವೊಮಿ ಒಸಾಕಾ ಕ್ರಮವಾಗಿ ವಿಂಬಲ್ಡನ್, ಫ್ರೆಂಚ್ ಹಾಗೂ ಆಸ್ಟ್ರೇಲಿಯ ಓಪನ್‍ಗಳಲ್ಲಿ ಟ್ರೋಫಿ ಒಲಿಸಿಕೊಂಡರು.
  • ವರ್ಷಾಂತ್ಯದ ಎಟಿಪಿ ಫೈನಲ್ಸ್ ಪ್ರಶಸ್ತಿ ಮೊದಲ ಬಾರಿ ಗ್ರೀಸ್‍ನ ಸ್ಟೆಫಾನೋಸ್ ಸಿಸಿಪಸ್ ಪಾಲಾಯಿತು. ಟೆನಿಸ್‌ ಲೋಕದಲ್ಲಿ ಹೊಸ ಭರವಸೆಯನ್ನು ಅವರು ಹುಟ್ಟುಹಾಕಿದರು.

ಭಾರತೀಯರು

  • ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಗೆದ್ದ ಆ್ಯಷ್ಲೆ ಬಾರ್ಟಿ, ವರ್ಷದ ಕೊನೆಯಲ್ಲಿ ನಡೆಯುವ ಡಬ್ಲ್ಯುಟಿಎ ಫೈನಲ್ಸ್‌ನಲ್ಲೂ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಮೆರಿಕ ಓಪನ್ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಮುಖ್ಯ ಡ್ರಾಕ್ಕೆ ಮೊದಲ ಬಾರಿ ಪ್ರವೇಶ ಮಾಡಿದ್ದ ಭಾರತ ಸುಮಿತ್ ನಗಾಲ್, ಆರಂಭಿಕ ಪಂದ್ಯದಲ್ಲಿ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರನ್ನು ಎದುರಿಸಿದ್ದರು. ಭಾರತದ ಆಟಗಾರ ಸೋತರೂ ಒಂದು ಸೆಟ್‌ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು.

ಡೇವಿಸ್‌ ಕಪ್‌ ವಿವಾದ

  • ಭದ್ರತೆಯ ಕಾರಣ ನೀಡಿ ಪಾಕಿಸ್ತಾನದಲ್ಲಿ ಡೇವಿಸ್‌ ಕಪ್‌ ಆಡಲು ಭಾರತ ನಿರಾಕರಿಸಿತು. ಅಂತಿಮವಾಗಿ ಎರಡೂ ತಂಡಗಳು ತಟಸ್ಥ ಸ್ಥಳದಲ್ಲಿ ಪಂದ್ಯ ಆಡಿದವು. ಕಜಕಸ್ತಾನದ ನೂರ್‌ ಸುಲ್ತಾನ್‌ನಲ್ಲಿ ನಡೆದ ಈ ಹಣಾಹಣಿಯನ್ನು ಭಾರತದ ಆಟಗಾರರು 3–0ಯಿಂದ ಗೆದ್ದುಕೊಂಡರು. ಹಳೆಯ ಹುಲಿ ಲಿಯಾಂಡರ್‌ ಪೇಸ್‌ ಡೇವಿಸ್‌ ಕಪ್‌ನಲ್ಲಿ 44ನೇ ಗೆಲುವನ್ನು ದಾಖಲಿಸಿ ತಮ್ಮದೇ ದಾಖಲೆಯನ್ನು ವಸುಧಾರಿಸಿದ್ದು ವಿಶೇಷ.

ಅಮೆರಿಕದ 15 ವರ್ಷದ ಬಾಲಕಿ ಕೊಕೊ ಗಫ್‌ ವಿಂಬಲ್ಡನ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ವೀನಸ್‌ ವಿಲಿಯಮ್ಸ್‌ ಅವರನ್ನು ಮಣಿಸಿ ಸಂಚಲನ ಸೃಷ್ಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು